FIFA WorldCUp: ಸ್ಪೇನ್ ಗೆಲ್ಲಿಸಿದ ಬೇನಾ ಗೋಲು; ಹೊರಬಿದ್ದ ಉರುಗ್ವೆ!
ಗ್ವಾಡಲಜರ: ಉರುಗ್ವೆ ಗೋಲು ಕೀಪರ್ ಫೆರ್ನಾಂಡೊ ಮುಸ್ಲೆರಾ ಮಾಡಿದ ಎಡವಟ್ಟಿನಿಂದ ಲಾಭ ಪಡೆದ ಲಾ ರೋಜಾ ಖ್ಯಾತಿಯ ಸ್ಪೇನ್ ತಂಡ ಫಿಫಾ ವಿಶ್ವಕಪ್ (FIFA WorldCUp) ಟೂರ್ನಿಯಲ್ಲಿ ಎಚ್ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್ ಹಂತಕ್ಕೇರಿದೆ. ಸ್ಪೇನ್ ಎದುರು 0-1ರಿಂದ ಪರಾಭವಗೊಂಡ 2 ಬಾರಿಯ ಚಾಂಪಿಯನ್ ಉರುಗ್ವೆ ಗುಂಪಿನಲ್ಲಿ 3ನೇ ಸ್ಥಾನ ಪಡೆದರೂ, ಒಂದೂ ಗೆಲುವಿಲ್ಲದೆ ಕೇವಲ 2 ಅಂಕದೊಂದಿಗೆ ಟೂರ್ನಿಯಿಂದ ಹೊರಬಿದ್ದಿತು.
ಭಾರತೀಯ ಕಾಲಮಾನ ಪ್ರಕಾರ ಶನಿವಾರ ಬೆಳಗ್ಗೆ ನಡೆದ ಪಂದ್ಯದ 42ನೇ ನಿಮಿಷದಲ್ಲಿ ಅಲೆಕ್ಸ್ ಬೇನಾ ಗೋಲು ಪೆಟ್ಟಿಗೆಯತ್ತ ಹೊಡೆದ ಚೆಂಡನ್ನು ಗೋಲಿ ಮುಸ್ಲೆರಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ವಿಫಲರಾದರು. ಅವರ ಕೈಜಾರಿದ ಚೆಂಡು ಗೋಲು ಪೆಟ್ಟಿಗೆಯೊಳಗೆ ಸೇರಿ ಗೋಲಾಯಿತು. ಟೂರ್ನಿಯಲ್ಲಿ 3ನೇ ಬಾರಿ ಈ ರೀತಿಯ ತಪ್ಪು ಮಾಡಿದ 40 ವರ್ಷದ ಮುಸ್ಲೆರಾರನ್ನು ಉರುಗ್ವೆ ಕೋಚ್ ಮಾರ್ಸೆಲೊ ಬೀಲ್ಸಾ ದ್ವೀತಿಯಾರ್ಧದಲ್ಲಿ ಹೊರದಬ್ಬಿದರು. ಸೆರ್ಗಿಯೋ ರಾಚೆಟ್ ದ್ವೀತಿಯಾರ್ಧದಲ್ಲಿ ಬದಲಿಗರಾಗಿ ಉರುಗ್ವೆ ಗೋಲು ಪೆಟ್ಟಿಗೆಯನ್ನು ಯಶಸ್ವಿಯಾಗಿ ಕಾದರು. ಆದರೆ ಸ್ಪೇನ್ ರಕ್ಷಣಾ ವ್ಯೂಹವನ್ನೂ ಉರುಗ್ವೆ ಬೇಧಿಸದ ಕಾರಣ ಸೋಲು ತಪ್ಪಿಸಲಾಗಲಿಲ್ಲ. ಪಂದ್ಯದ ಇಂಜುರಿ ಸಮಯದಲ್ಲಿ ಸ್ಪೇನ್ ಡಿಫೆಂಡರ್ ಕ್ಯುಬರ್ಸಿ ಟ್ಯಾಕಲ್ ಮಾಡಿದ ಉರುಗ್ವೆಯ ಅಗಸ್ಟಿನ್ ಕ್ಯಾನೊಬಿಯೊ (90+4) ಕೆಂಪು ಕಾರ್ಡ್ ಪಡೆದು ಹೊರನಡೆದರು.
ಫಿಫಾ ರ್ಯಾಂಕಿಂಗ್ನಲ್ಲಿ 19ನೇ ಸ್ಥಾನದಲ್ಲಿರುವ ಉರುಗ್ವೆ ಟೂರ್ನಿಯಿಂದ ಇದುವರೆಗೆ ಹೊರಬಿದ್ದ ಗರಿಷ್ಠ ರ್ಯಾಂಕ್ನ ತಂಡವೆನಿಸಿದೆ. ಸ್ಪೇನ್ ಯುವ ಸ್ಟ್ರೆಕರ್ ಲ್ಯಾಮಿನ್ ಯಮಲ್ ಪಂದ್ಯದ 76ನೇ ನಿಮಿಷದಲ್ಲಿ ಹೊರನಡೆದರು. ವೆನೆಜುವೆಲಾ ಭೂಕಂಪದಲ್ಲಿ ಮೃತಪಟ್ಟವರ ಗೌರವಾರ್ಥ ಪಂದ್ಯಕ್ಕೆ ಮುನ್ನ ಉಭಯ ತಂಡಗಳ ಆಟಗಾರರು ಒಂದು ನಿಮಿಷ ಮೌನಾಚರಣೆ ನಡೆಸಿದರು.