FIFA WorldCup: ಸ್ಪೇನ್ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗದೆ ಹೊರಬಿದ್ದ ಫ್ರಾನ್ಸ್
ಡಲ್ಲಾಸ್: ಹಾಲಿ ರನ್ನರ್ಅಪ್ ಹಾಗೂ ಫೇವರಿಟ್ ಫ್ರಾನ್ಸ್ ತಂಡಕ್ಕೆ ಆಘಾತಕಾರಿ ಸೋಲುಣಿಸುವ ಮೂಲಕ ಯುರೋ ಕಪ್ ಚಾಂಪಿಯನ್ ಸ್ಪೇನ್ ತಂಡ 16 ವರ್ಷಗಳ ಬಳಿಕ ಫಿಫಾ ವಿಶ್ವಕಪ್ (FIFA WorldCup) ಫೈನಲ್ ಪ್ರವೇಶಿಸಿದೆ. ಮೈಕೆಲ್ ಒಯರ್ಜಾಬಲ್ (22ನೇ ನಿಮಿಷ, ಪೆನಾಲ್ಟಿ) ಮತ್ತು ಪೆಡ್ರೊ ಪೊರೊ (58) ಗೋಲುಗಳ ಬಲದಿಂದ 2010ರ ಚಾಂಪಿಯನ್ ಸ್ಪೇನ್ ತಂಡ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಲೆಸ್ ಬ್ಲೂಸ್ ಖ್ಯಾತಿಯ ಫ್ರಾನ್ಸ್ ತಂಡವನ್ನು 2-0 ಅಂತರದಿಂದ ಪರಾಭವಗೊಳಿಸಿತು. ಲಾ ರೋಜಾ ಖ್ಯಾತಿಯ ಸ್ಪೇನ್ ತಂಡದ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಲು ವಿಫಲವಾಗುವುದರೊಂದಿಗೆ, ಸತತ ಮೂರನೇ ಬಾರಿ ಪ್ರಶಸ್ತಿ ಸುತ್ತಿಗೇರುವ ಕೈಲಿಯಾನ್ ಎಂಬಾಪೆ ಬಳಗದ ಕನಸು ಭಗ್ನಗೊಂಡಿತು. ಸ್ಪೇನ್ ತಂಡ ಭಾನುವಾರ ರಾತ್ರಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಫ್ರಾನ್ಸ್ ತಂಡ ಇನ್ನು 2ನೇ ಸೆಮೀಸ್ನಲ್ಲಿ ಸೋತ ತಂಡದ ಎದುರು ಮೂರನೇ ಸ್ಥಾನದ ಸಮಾಧಾನಕ್ಕಾಗಿ ಹೋರಾಡಲಿದೆ.
ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ರಾತ್ರಿ ನಡೆದ ಯುರೋಪಿಯನ್ ತಂಡಗಳ ಕಾದಾಟದಲ್ಲಿ ಫ್ರಾನ್ಸ್ ತಂಡ ನಿರೀಕ್ಷಿತ ನಿರ್ವಹಣೆ ತೋರಲು ವಿಫಲವಾಯಿತು. ಫ್ರಾನ್ಸ್ ತಂಡ ನಮಗೆ ಹೆದರುತ್ತದೆ ಎಂದು ಸ್ಪೇನ್ ಯುವತಾರೆ ಲ್ಯಾಮಿನ್ ಯಮಲ್ ಪಂದ್ಯಕ್ಕೆ ಮುನ್ನ ಹೇಳಿದ್ದರು ಮತ್ತು ಉಪಾಂತ್ಯದಲ್ಲಿ ಫ್ರಾನ್ಸ್ ಆಟವೂ ಬಹುತೇಕ ಅದೇ ರೀತಿಯಾಗಿತ್ತು. ವಿಶ್ವಕಪ್ನಲ್ಲಿ ಇದುವರೆಗೆ 20 ಗೋಲು ಸಿಡಿಸಿದ ಬಲಿಷ್ಠ ದಾಖಲೆ ಹೊಂದಿದ್ದ ಎಂಬಾಪೆ, ಬ್ಯಾಲನ್ ಡಿಓರ್ ವಿಜೇತ ಔಸ್ಮಾನ್ ಡೆಂಬೆಲ್ ಮತ್ತು ಟೂರ್ನಿಯಲ್ಲಿ 5 ಗೋಲುಗಳಿಗೆ ನೆರವಾಗಿದ್ದ ಮೈಕೆಲ್ ಓಲಿಸ್ ಸ್ಪೇನ್ ತಡೆಗೋಡೆ ದಾಟಿ ಗೋಲು ಬಾರಿಸಲು ಶಕ್ತರಾಗಲಿಲ್ಲ.
ಪಂದ್ಯದ 22ನೇ ನಿಮಿಷದಲ್ಲಿ ಯಮಲ್ಗೆ ಫ್ರಾನ್ಸ್ ಡಿಫೆಂಡರ್ ಲುಕಾಸ್ ಡಿಗ್ನೆ ಕಾಲಿನಿಂದ ಒದ್ದು ಮಾಡಿದ ಫೌಲ್ನಿಂದ ಸಿಕ್ಕ ಪೆನಾಲ್ಟಿ ಕಿಕ್ನಲ್ಲಿ ಮೈಕೆಲ್ ಒಯರ್ಜಾಬಲ್ ಗೋಲು ಬಾರಿಸಿ ಸ್ಪೇನ್ಗೆ ಮುನ್ನಡೆ ಒದಗಿಸುವಲ್ಲಿ ಯಶಸ್ವಿಯಾದರು. ಇದು 29 ವರ್ಷದ ಒಯರ್ಜಾಬಲ್ ಟೂರ್ನಿಯಲ್ಲಿ ಬಾರಿಸಿದ 5ನೇ ಗೋಲಾಗಿದೆ. ಈ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಫ್ರಾನ್ಸ್ ತಂಡ ಪ್ರಯತ್ನಿಸುತ್ತಿದ್ದಾಗ 58ನೇ ನಿಮಿಷದಲ್ಲಿ ಪೆಡ್ರೊ ಪೊರೊ ಸ್ಪೇನ್ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ನಂತರ ಫ್ರಾನ್ಸ್ಗೆ ಪಂದ್ಯಕ್ಕೆ ಮರಳುವ ಹಾದಿಯೇ ಬಹುತೇಕ ಬಂದ್ ಆಯಿತು.
19ನೇ ಜನ್ಮದಿನದ ಮರುದಿನವೇ ಕಣಕ್ಕಿಳಿದ ಯಮಲ್ ಬಾರಿಸಿದ ಗೋಲೊಂದು ಆಫ್ ಸೈಡ್ ಆಯಿತು. ಇಲ್ಲದಿದ್ದರೆ ಸ್ಪೇನ್ 3-0 ಅಂತರದಿಂದ ಗೆಲ್ಲಬಹುದಾಗಿತ್ತು.
"ಸ್ಪೇನ್ ರಕ್ಷಣಾ ವಿಭಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತು' ಎಂದು ಫ್ರಾನ್ಸ್ ಕೋಚ್ ಡಿಡಿಯರ್ ಡಿಶಾಂಪ್ಸ್ ಕೂಡ ಪಂದ್ಯದ ಬಳಿಕ ಹೊಗಳಿದರು. ಅವರು ಬಹುತೇಕ ಎಲ್ಲ ಬಾಗಿಲುಗಳನ್ನು ಮುಚ್ಚಿದ್ದರು ಮತ್ತು ನಾವು ಕೂಡ ಕೆಲ ತಾಂತ್ರಿಕ ತಪ್ಪುಗಳನ್ನು ಮಾಡಿದೆವು ಎಂದೂ ಸೇರಿಸಿದರು. ಸ್ಪೇನ್ ತಂಡ ಟೂರ್ನಿಯಲ್ಲಿ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ ಕೇವಲ 1 ಗೋಲು ಬಿಟ್ಟುಕೊಟ್ಟಿದೆ. ಸ್ಪೇನ್ ಗೋಲು ಕೀಪರ್ ಉನೈ ಸೈಮನ್, ಬೆಲ್ಜಿಯಂ ವಿರುದ್ಧದ ಕ್ವಾರ್ಟರ್ಫೈನಲ್ನಲ್ಲಿ ಈ ಏಕೈಕ ಗೋಲು ಬಿಟ್ಟಿದ್ದರು. ಫ್ರಾನ್ಸ್ ಕೂಡ ಹಿಂದಿನ 6 ಪಂದ್ಯಗಳಲ್ಲಿ 2 ಗೋಲು ಮಾತ್ರ ಬಿಟ್ಟುಕೊಟ್ಟಿತ್ತು.
ಫ್ರಾನ್ಸ್ ಫಿಫಾ ವಿಶ್ವಕಪ್ನಲ್ಲಿ ಸತತ 3 ಬಾರಿ ಫೈನಲ್ಗೇರಿದ ಜರ್ಮನಿ (1982-90) ಮತ್ತು ಬ್ರೆಜಿಲ್ (1994-2002) ಸಾಧನೆ ಸರಿಗಟ್ಟಲು ವಿಫಲವಾಯಿತು.
ಫ್ಯೂಯೆಂಟೆಗೆ ಸತತ 4ನೇ ಫೈನಲ್
ಲೂಯಿಸ್ ಡೆ ಲಾ ಫ್ಯೂಯೆಂಟೆ ಸ್ಪೇನ್ ತಂಡದ ಕೋಚ್ ಆದ ಬಳಿಕ ಆಡಿದ 4 ಪ್ರಮುಖ ಟೂರ್ನಿಗಳಲ್ಲೂ ತಂಡವನ್ನು ಫೈನಲ್ಗೇರಿಸಿದ್ದಾರೆ. 2024ರ ಯುರೋಕಪ್ ಮತ್ತು 2023, 2025ರ ನೇಷನ್ಸ್ ಕಪ್ ಹಿಂದಿನ 3 ಟೂರ್ನಿಗಳು. ಸ್ಪೇನ್ ತಂಡ ಫ್ರಾನ್ಸ್ ವಿರುದ್ಧ ಸತತ 3ನೇ ಸೆಮೀಸ್ ಜಯಿಸಿತು. ಈ ಮುನ್ನ 2024ರ ಯುರೋಕಪ್ ಮತ್ತು 2025ರ ನೇಷನ್ಸ್ ಕಪ್ ಸೆಮೀಸ್ನಲ್ಲೂ ಸ್ಪೇನ್, ಫ್ರಾನ್ಸ್ ವಿರುದ್ಧವೇ ಗೆದ್ದಿತ್ತು.
ಸ್ಪೇನ್ ತಂಡದ ಸ್ಪರ್ಧಾತ್ಮಕ ಫುಟ್ಬಾಲ್ ಪಂದ್ಯಗಳ ಅಜೇಯ ಓಟ ಈಗ 37ನೇ ಪಂದ್ಯಕ್ಕೆ (28 ಜಯ, 9 ಡ್ರಾ) ವಿಸ್ತರಿಸಿದೆ. 2024ರ ಮಾರ್ಚ್ನಿಂದ ಸ್ಪೇನ್ ಅಜೇಯವಾಗಿದೆ. ಈ ಮೂಲಕ 2007-09ರಲ್ಲಿ 35 ಪಂದ್ಯಗಳಲ್ಲಿ ಅಜೇಯವಾಗಿದ್ದ ಅದರ ದಾಖಲೆ ಮುರಿದಿದೆ.
*3: ಯುರೋಕಪ್ ಗೆದ್ದ ತಂಡ ನಂತರದ ವಿಶ್ವಕಪ್ನಲ್ಲೇ ಪ್ರಶಸ್ತಿ ಗೆದ್ದ 3ನೇ ದೃಷ್ಟಾಂತ ಬರೆಯುವ ಅವಕಾಶ ಸ್ಪೇನ್ ಮುಂದಿದೆ. 2008-10ರಲ್ಲಿ ಸ್ಪೇನ್ ತಂಡವೇ ಮತ್ತು 1972-74ರಲ್ಲಿ ಜರ್ಮನಿ ಈ ಸಾಧನೆ ಮಾಡಿತ್ತು.
*10: ಸ್ಪೇನ್ ತಂಡ ವಿಶ್ವಕಪ್ ನಾಕೌಟ್ನಲ್ಲಿ ಕಳೆದ 10 ಪಂದ್ಯಗಳಿಂದ (ಪೆನಾಲ್ಟಿ ಶೂಟೌಟ್ ಲೆಕ್ಕಕ್ಕಿಲ್ಲ) ಅಜೇಯವಾಗಿದೆ. 2006ರ 16ರ ಘಟ್ಟದಲ್ಲಿ ಸ್ಪೇನ್ ತಂಡ ಫ್ರಾನ್ಸ್ ವಿರುದ್ಧವೇ ಕೊನೇ ಸೋಲು ಕಂಡಿದೆ.
*5: ಮೈಕೆಲ್ ಒಯರ್ಜಾಬಲ್ ವಿಶ್ವಕಪ್ನಲ್ಲಿ 5 ಗೋಲು ಬಾರಿಸಿದ ಸ್ಪೇನ್ನ 3ನೇ ಆಟಗಾರ ಎನಿಸಿದರು. ಡೇವಿಡ್ ವಿಲ್ಲಾ (2010) ಮತ್ತು ಎಮಿಲಿಯೊ ಬುಟ್ರಾಗ್ಯುನೊ (1986) ಮೊದಲಿಬ್ಬರು.
27 ವರ್ಷದ ಕೈಲಿಯಾನ್ ಎಂಬಾಪೆ ಇದುವರೆಗೆ ಆಡಿದ 3 ವಿಶ್ವಕಪ್ಗಳಲ್ಲಿ ಮೊದಲ ಬಾರಿ ಫೈನಲ್ಗೇರಲು ವಿಫಲರಾದರು. ಸ್ಪೇನ್ ಎದುರು ಅವರು ಒಮ್ಮೆಯೂ ಗೋಲು ಗಳಿಸುವ ಸನಿಹ ಹೋಗಲಿಲ್ಲ. ಕಳೆದ 9 ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಬಾರಿ ಅವರು ಗೋಲು ಗಳಿಕೆಯ ಸನಿಹ ತಲುಪಲಿಲ್ಲ. ಆದರೆ ಗೋಲ್ಡನ್ ಬೂಟ್ ರೇಸ್ನಲ್ಲಿ ಅವರಿನ್ನೂ ಮುಂಚೂಣಿಯಲ್ಲಿದ್ದಾರೆ. ಲಿಯೋನೆಲ್ ಮೆಸ್ಸಿ ಇನ್ನೊಂದು ಗೋಲು ಬಾರಿಸದಿದ್ದರೆ ಅವರು ಸತತ 2ನೇ ಗೋಲ್ಡನ್ ಬೂಟ್ ಒಲಿಸಿಕೊಳ್ಳಬಹುದಾಗಿದೆ.
*ಗೆದ್ದಾಗ ಎಲ್ಲ ಶ್ರೇಯವನ್ನೂ ಪಡೆದುಕೊಳ್ಳುತ್ತೇವೆ. ಅದೇ ರೀತಿ ಸೋಲು ಕೂಡ ಆಟದ ಭಾಗ ಮತ್ತು ತಂಡದ ನಾಯಕನಾಗಿ ನಾನು ಇದರ ಹೊಣೆ ಹೊತ್ತುಕೊಳ್ಳುತ್ತೇನೆ.
| ಕೈಲಿಯಾನ್ ಎಂಬಾಪೆ, ಫ್ರಾನ್ಸ್ನ್ಸ್ ನಾಯಕ