ಭಾರತಕ್ಕೆ ಟಿ20ಯಲ್ಲಿ ಅತಿದೊಡ್ಡ ಸೋಲಿನ ಶಾಕ್: ಕೋಚ್ ಗಂಭೀರ್ ಸಮರ್ಥನೆ
ನಾಟಿಂಗ್‌ಹ್ಯಾಂ: ಆಯ್ಕೆಯಲ್ಲಿನ ಗೊಂದಲ, ಹನ್ನೊಂದರ ಬಳಗದ ಸಂಯೋಜನೆಯ ಎಡವಟ್ಟು ಹಾಗೂ ಇಂಗ್ಲೆಂಡ್ ಪಿಚ್‌ಗೆ ಹೊಂದಿಕೊಳ್ಳಲು ಪರದಾಡುತ್ತಿರುವ ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ, ಇದೇ ಮೊದಲ ಬಾರಿಗೆ ಸತತ 5 ಪಂದ್ಯಗಳಲ್ಲಿ ಗೆಲುವು ಕಾಣಲು ವಿಫಲವಾಗಿದೆ. ಜತೆಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ತನ್ನ ಅತಿದೊಡ್ಡ ಸೋಲಿನ ಆಘಾತ ಎದುರಿಸಿದೆ.
ವೇಗಿಗಳಾದ ಜೋಶ್ ಟಂಗ್ (28ಕ್ಕೆ 4) ಹಾಗೂ ಜೋಫ್ರಾ ಆರ್ಚರ್ (29ಕ್ಕೆ 3) ಮಾರಕ ದಾಳಿಯ ಎದುರು ಬ್ಯಾಟರ್‌ಗಳ ವೈಫಲ್ಯದಿಂದಾಗಿ ಶ್ರೇಯಸ್ ಅಯ್ಯರ್ ಪಡೆ ಮೂರನೇ ಟಿ20ಯಲ್ಲಿ ಇಂಗ್ಲೆಂಡ್ ಎದುರು 125 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಇದರೊಂದಿಗೆ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ 0-2 ಹಿನ್ನಡೆ ಕಂಡಿದ್ದು, ಮತ್ತೊಂದು ಸರಣಿ ಸೋಲಿನ ಮುಖಭಂಗ ತಪ್ಪಿಸಲು ಸಮಬಲ ಸಾಧಿಸುವ ಅವಕಾಶ ಮಾತ್ರ ಹೊಂದಿದೆ.
ಟ್ರೆಂಟ್‌ಬ್ರಿಡ್ಜ್‌ನಲ್ಲಿ ಮಂಗಳವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಮಧ್ಯಮ ಕ್ರಮಾಂಕ ಕುಸಿತದ ನಡುವೆಯೂ ಆರಂಭಿಕ ಫಿಲ್ ಸಾಲ್ಟ್ (70 ರನ್, 44 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಸ್ಯಾಮ್ ಕರ‌್ರನ್ (41* ರನ್, 24 ಎಸೆತ, 4 ಬೌಂಡರಿ) ಆಸರೆಯಲ್ಲಿ 7 ವಿಕೆಟ್‌ಗೆ 201 ರನ್‌ಗಳ ಸವಾಲಿನ ಗುರಿ ನೀಡಿತು. ಪ್ರತಿಯಾಗಿ ಆತಿಥೇಯರ ವೇಗದ ದಾಳಿಗೆ ತತ್ತರಿಸಿದ ಭಾರತ ತಂಡ 60 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 11.4 ಓವರ್‌ಗಳಲ್ಲಿ ಕೇವಲ 76 ರನ್‌ಗಳಿಗೆ ಆಲೌಟ್ ಆಗಿ, ಸೋಲೊಪ್ಪಿಕೊಂಡಿತು.
ಇಂಗ್ಲೆಂಡ್: 7 ವಿಕೆಟ್‌ಗೆ 201 (ಫಿಲ್ ಸಾಲ್ಟ್ 70, ಬಟ್ಲರ್ 36, ಹ್ಯಾರಿ ಬ್ರೂಕ್16, ಸ್ಯಾಮ್ ಕ್ರರನ್ 41*, ಪ್ರಿನ್ಸ್ ಯಾದವ್ 30ಕ್ಕೆ 2, ಹರ್ಷಿತ್ ರಾಣಾ 40ಕ್ಕೆ 2).
ಭಾರತ: 11.4 ಓವರ್‌ಗಳಲ್ಲಿ 76 (ಅಭಿಷೇಕ್ 10, ವೈಭವ್ ಸೂರ್ಯವಂಶಿ 13, ಇಶಾನ್ ಕಿಶನ್ 13, ಶ್ರೇಯಸ್ 5, ಅಕ್ಷರ್ 10, ತಿಲಕ್ 3, ಹರ್ಷಿತ್ ರಾಣಾ 9, ಶಿವಂ 2, ಅರ್ಷದೀಪ್ 4, ವರುಣ್ 5, ಪ್ರಿನ್ಸ್ 2*, ಆರ್ಚರ್ 29ಕ್ಕೆ 3, ಜೋಶ್ ಟಂಗ್ 28ಕ್ಕೆ 4).
ಸವಾಲಿನ ಮೊತ್ತ ಚೇಸಿಂಗ್ ನಡೆಸಿದ ಭಾರತ ಪವರ್ ಪ್ಲೇಯಲ್ಲಿ ಪ್ರಮುಖ ಬ್ಯಾಟರ್‌ಗಳ ವಿಕೆಟ್ ಕಳೆದುಕೊಂಡರೆ, ಕ್ರಮಾಂಕದಲ್ಲಿ ಹರ್ಷಿತ್ ರಾಣಾ ಸಹ ಬಡ್ತಿ ಪಡೆದರು. ಜೋಶ್ ಟಂಗ್ ಎಸೆದ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಅಭಿಷೇಕ್ ಶರ್ಮ (10) ಔಟಾದರೆ, ಆರ್ಚರ್ ಎಸೆದ ಮರು ಓವರ್‌ನಲ್ಲಿ ವೈಭವ್ ಸೂರ್ಯವಂಶಿ (13) ಎರಡು ಸಿಕ್ಸರ್ ಸಹಿತ ಆಟಕ್ಕೆ ಕಡಿವಾಣ ಹೇರಿದರು. ನಂತರ ಇಶಾನ್ ಕಿಶನ್ (13), ಶ್ರೇಯಸ್ ಅಯ್ಯರ್ (5), ತಿಲಕ್ ವರ್ಮ (3) ನೀರಸ ಆಟ ಮುಂದುವರಿಸಿದರು. ಶಿವಂ ದುಬೆಗೆ (2) ಮುನ್ನ ಕ್ರೀಸ್‌ಗೆ ಆಗಮಿಸಿದ ಹರ್ಷಿತ್ ರಾಣಾ (9), ಜೋಶ್ ಟಂಗ್ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಭಾರತದ ಸೋಲು ಖಾತ್ರಿಗೊಂಡಿತು. ಅಗ್ರ ಮೂವರು ಬ್ಯಾಟರ್‌ಗಳು ಬಿಟ್ಟು ಇತರರು ಒದಂಕಿ ಮೊತ್ತಕ್ಕೆ ಔಟಾದರು.
76. ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಎರಡನೇ ಕನಿಷ್ಠ ಮೊತ್ತ ಇದಾಗಿದೆ. 2008ರಲ್ಲಿ ಆಸ್ಟ್ರೇಲಿಯಾ ಎದುರು 74 ರನ್‌ಗೆ ಆಲೌಟ್ ಆಗಿತ್ತು.
125. ಅಂತಾರಾಷ್ಟ್ರೀಯ ಟಿ20ಯಲ್ಲಿ ಟೀಮ್ ಇಂಡಿಯಾ 100 ಪ್ಲಸ್ ರನ್ ಅಂತರದಿಂದ ಸೋತ ಮೊದಲ ದೃಷ್ಟಾಂತ ಇದಾಗಿದೆ. 2019ರಲ್ಲಿ ನ್ಯೂಜಿಲೆಂಡ್ ಎದುರು 80 ರನ್‌ನಿಂದ ಸೋತಿದ್ದು ಹಿಂದಿನ ಗರಿಷ್ಠ.
3. ಭಾರತ ತಂಡ ಚೇಸಿಂಗ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತ ಎರಡನೇ ದೃಷ್ಟಾಂತ ಇದಾಗಿದೆ. ಇದಕ್ಕೆ ಮುನ್ನ 2009ರಲ್ಲಿ ಸೋತಿತ್ತು.
2. ಭಾರತ ತಂಡ 2018-19ರ ನಂತರ ಸತತ ಎರಡು ದ್ವಿಪಕ್ಷೀಯ ಚುಟುಕು ಸರಣಿ ಜಯಿಸುವಲ್ಲಿ ವಿಫಲವಾಗಿದೆ. 2019ರಲ್ಲಿ ನ್ಯೂಜಿಲೆಂಡ್ ಎದುರು ಸರಣಿ ಸೋತರೆ, ಆಸ್ಟ್ರೇಲಿಯಾ ವಿರುದ್ಧ ಸಮಬಲ ಕಂಡಿತ್ತು.;
"
2026ರ ಟಿ20 ವಿಶ್ವಕಪ್ ಫೈನಲ್ ನಂತರ ಭಾರತ ತಂಡ ಸ್ಥಿತ್ಯಂತರದ ಹಾದಿಯಲ್ಲಿದ್ದು, ಹಿಂದಿನ ಸಾಧನೆಗಳ ಪುನರಾವರ್ತನೆಗೆ ಸ್ಪಲ್ಪ ಸಮಯ ಹಿಡಿಯಲಿದೆ. ಯಕೆ ಪ್ರವಾಸದಲ್ಲಿನ ಸೋಲುಗಳಿಗೆ ಆಟದ ಅರಿವಿನ ಕೊರತೆ ಮತ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿನ ವೈಫಲ್ಯ ಕಾರಣ
— ಗೌತಮ್ ಗಂಭಿರ್, ಟೀಮ್ ಇಂಡಿಯಾ ಕೋಚ್