FIFA WorldCup: ಶೂಟೌಟ್ನಲ್ಲಿ ಮೊರಾಕ್ಕೊ ಗೆಲುವಿನ ಮ್ಯಾಜಿಕ್
ಮಾಂಟೆರ್ರಿ: ನಿರ್ಣಾಯಕ ಪೆನಾಲ್ಟಿ ಶೂಟೌಟ್ ಹೊಡೆತದಲ್ಲಿ ಇಸ್ಮಾಯಿಲ್ ಸಾಯಿಬರಿ ಗೋಲು ಬಾರಿಸಲು ಯಶಸ್ವಿಯಾಗುವುದರೊಂದಿಗೆ ಮೊರಾಕ್ಕೊ ತಂಡ ಫಿಫಾ ವಿಶ್ವಕಪ್ (FIFA WorldCup) 32ರ ಘಟ್ಟದಲ್ಲಿ ಮೂರು ಬಾರಿಯ ರನ್ನರ್ಅಪ್ ನೆದರ್ಲ್ಯಾಂಡ್ಸ್ ತಂಡಕ್ಕೆ 3-2ರಿಂದ ಆಘಾತಕಾರಿ ಸೋಲುಣಿಸಿತು. ಇದರೊಂದಿಗೆ ಡಚ್ಚರು ವಿಶ್ವಕಪ್ ಇತಿಹಾಸದಲ್ಲಿ ಅತಿ ಬೇಗನೆ ಹೊರಬಿದ್ದ ನಿರಾಸೆ ಅನುಭವಿಸಿದರು. ನೆದರ್ಲ್ಯಾಂಡ್ಸ್ ಈ ಹಿಂದೆ ಆಡಿದ 11 ಆವೃತ್ತಿಯಲ್ಲೂ ಕನಿಷ್ಠ 16ರ ಘಟ್ಟಕ್ಕೇರಿತ್ತು.
ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಕೋಡಿ ಗ್ಯಾಕ್ಪೋ 72ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದ ನೆದರ್ಲ್ಯಾಂಡ್ಸ್ ಮುನ್ನಡೆ ಸಾಧಿಸಿತ್ತು. ಇತ್ತೀಚೆಗಷ್ಟೇ ತನ್ನ ಸಂಗಾತಿಗೆ ಗರ್ಭಪಾತವಾದ ಬೇಸರದ ನಡುವೆ ಕಣಕ್ಕಿಳಿದಿದ್ದ ಗ್ಯಾಕ್ಪೋ, ಗೋಲು ಸಿಡಿಸಿದ ಬಳಿಕ ಭಾವುಕರಾದರು. ಬಳಿಕ ಇಸಾ ಡಿಯೋಪ್ (90+1ನೇ ನಿಮಿಷ) ಇಂಜುರಿ ಸಮಯದಲ್ಲಿ ಬಾರಿಸಿದ ಗೋಲಿನಿಂದ ಮೊರಾಕ್ಕೊ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ವಿಸ್ತರಿಸುವಲ್ಲಿ ಯಶಸ್ವಿಯಾಯಿತು. 120 ನಿಮಿಷಗಳ ಆಟದ ಬಳಿಕವೂ ಪಂದ್ಯ 1-1 ಸಮಬಲದಲ್ಲಿ ಮುಗಿದ ಬಳಿಕ ಫಲಿತಾಂಶ ನಿರ್ಧಾರಕ್ಕೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಶೂಟೌಟ್ನಲ್ಲಿ ಮೊದಲ 4 ಸುತ್ತಿನ ಹೊಡೆತಗಳ ಬಳಿಕವೂ ಪಂದ್ಯ 2-2 ಸಮಬಲದಲ್ಲಿತ್ತು. ಆಗ ಮೊರಾಕ್ಕೊ ಗೋಲು ಕೀಪರ್ ಯಾಸಿನ್ ಬೌನೌ, ಕೆಸೆನ್ಸಿಯೊ ಸಮ್ಮರ್ವಿಲ್ಲೆರ 5ನೇ ಹೊಡೆತವನ್ನು ಎಡಗಾಲಿನಿಂದ ತಡೆಯುವಲ್ಲಿ ಯಶಸ್ವಿಯಾದರು. ಸಾಯಿಬರಿ ಕೊನೇ ಹೊಡೆತದಲ್ಲಿ ಡಚ್ಚರ ಗೋಲು ಕೀಪರ್ ರ್ಬಟ್ ವರ್ಬ್ರುಗೆನ್ರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದ ಬೆನ್ನಲ್ಲೇ ಜೆರ್ಸಿ ಬಿಚ್ಚಿ ಸಂಭ್ರಮಿಸಿದರು.
4 ವರ್ಷಗಳ ಹಿಂದೆ ಕತಾರ್ನಲ್ಲಿ ವಿಶ್ವಕಪ್ ಸೆಮಿಫೈನಲ್ಗೇರಿದ ಮೊದಲ ಆಫ್ರಿಕನ್ ದೇಶವೆನಿಸಿದ್ದ ಮೊರಾಕ್ಕೊ ಈ ಬಾರಿಯೂ ತನ್ನ ಮ್ಯಾಜಿಕ್ ಮುಂದುವರಿಸಿದೆ. ಮೊರಾಕ್ಕೊ 16ರ ಟ್ಟದಲ್ಲಿ ಸಹ&ಆತಿಥೇಯ ಕೆನಡಾ ತಂಡವನ್ನು ಅಮೆರಿಕದ ಹ್ಯೂಸ್ಟನ್ನಲ್ಲಿ ಎದುರಿಸಲಿದೆ. ಮೊರಾಕ್ಕೊ 2022ರ ವಿಶ್ವಕಪ್ ಲೀಗ್ ಹಂತದಲ್ಲಿ ಕೆನಡಾಗೆ ಸೋಲುಣಿಸಿದ ದಾಖಲೆಯನ್ನೂ ಹೊಂದಿದೆ.
*4: ನೆದರ್ಲ್ಯಾಂಡ್ಸ್ 4ನೇ ಬಾರಿ ಪೆನಾಲ್ಟಿ ಶೂಟೌಟ್ನಲ್ಲೇ ವಿಶ್ವಕಪ್ನಿಂದ ಹೊರಬಿದ್ದಿತು.
*2: ಮೊರಾಕ್ಕೊ ವಿಶ್ವಕಪ್ನಲ್ಲಿ 2ನೇ ಬಾರಿ ಪೆನಾಲ್ಟಿ ಶೂಟೌಟ್ನಲ್ಲಿ ಜಯಿಸಿತು. 2022ರಲ್ಲಿ ಸ್ಪೇನ್ ಎದುರು ಗೆದ್ದಿತ್ತು.