FIFA  
ಫುಟ್ಬಾಲ್

ಮೆಸ್ಸಿಗೂ ಇಲ್ಲದ ವಿಶ್ವದಾಖಲೆ ರೊನಾಲ್ಡೊ ಹೆಸರಿಗೆ: FIFA ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದ ಪೋರ್ಚುಗಲ್ ನಾಯಕ!

ನವದೆಹಲಿ: ಪೋರ್ಚುಗಲ್ ತಂಡದ ನಾಯಕ ಹಾಗೂ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ FIFA ವಿಶ್ವಕಪ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ(ನಿನ್ನೆ ನಡೆದ ಪಂದ್ಯ) ಗೋಲು ದಾಖಲಿಸಿದ ರೊನಾಲ್ಡೊ, ಆರು ವಿಭಿನ್ನ ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2006, 2010, 2014, 2018, 2022 ಹಾಗೂ ಈಗ 2026ರ ವಿಶ್ವಕಪ್‌ನಲ್ಲೂ ಗೋಲು ಬಾರಿಸಿರುವ ರೊನಾಲ್ಡೊ, ಈ ಮೂಲಕ ಫುಟ್ಬಾಲ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ಉಜ್ಬೇಕಿಸ್ತಾನ್ ವಿರುದ್ಧ ಮಿಂಚಿದ ರೊನಾಲ್ಡೊ

ಡಿಆರ್ ಕಾಂಗೋ ವಿರುದ್ಧದ ಮೊದಲ ಪಂದ್ಯದಲ್ಲಿ ರೊನಾಲ್ಡೊ ಗೋಲು ಗಳಿಸಲು ವಿಫಲರಾಗಿದ್ದರು. ಆದರೆ ಉಜ್ಬೇಕಿಸ್ತಾನ್ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಅದ್ಭುತವಾಗಿ ಮರಳಿದರು.ಪಂದ್ಯದ ಆರಂಭದಲ್ಲೇ ಜೋವೊ ಕಾನ್ಸೆಲೊ ನೀಡಿದ ಕ್ರಾಸ್ ಅನ್ನು ಬಲಗಾಲಿನಿಂದ ಗೋಲಾಗಿ ಪರಿವರ್ತಿಸಿದ ರೊನಾಲ್ಡೊ ಪೋರ್ಚುಗಲ್‌ಗೆ 1-0 ಮುನ್ನಡೆ ತಂದುಕೊಟ್ಟರು. ಗೋಲು ಗಳಿಸಿದ ಬಳಿಕ ತಮ್ಮ ಪ್ರಸಿದ್ಧ ‘ಸಿಯು’ ಸಂಭ್ರಮಾಚರಣೆಯ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಇದರ ಬಳಿಕ 39ನೇ ನಿಮಿಷದಲ್ಲೂ ಮತ್ತೊಂದು ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೆಸ್ಸಿಗೂ ಇಲ್ಲದ ದಾಖಲೆ

ರೊನಾಲ್ಡೊ ಹಾಗೂ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಇಬ್ಬರೂ ಆರು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಮೊದಲ ಆಟಗಾರರು ಎಂಬ ದಾಖಲೆ ಹೊಂದಿದ್ದಾರೆ. ಆದರೆ 2010ರ ದಕ್ಷಿಣ ಆಫ್ರಿಕಾ ವಿಶ್ವಕಪ್‌ನಲ್ಲಿ ಮೆಸ್ಸಿ ಗೋಲು ಗಳಿಸಿರಲಿಲ್ಲ. ಇದರಿಂದ ಆರು ವಿಶ್ವಕಪ್‌ಗಳಲ್ಲೂ ನಿರಂತರವಾಗಿ ಗೋಲು ಗಳಿಸಿದ ಏಕೈಕ ಆಟಗಾರನಾಗಿ ರೊನಾಲ್ಡೊ ಹೊರಹೊಮ್ಮಿದ್ದಾರೆ. ಇದೇ ವೇಳೆ ಅರ್ಜೆಂಟೀನಾ ಪರ ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಹಾಗೂ ಆಸ್ಟ್ರಿಯಾ ವಿರುದ್ಧ ಎರಡು ಗೋಲು ಗಳಿಸಿದ್ದ ಮೆಸ್ಸಿ ವಿಶ್ವಕಪ್ ಇತಿಹಾಸದ ಅಗ್ರ ಗೋಲು ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲೂ ದಾಖಲೆ

ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯ ರೊನಾಲ್ಡೊ ಅವರ 230ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಇದು ಕೂಡ ವಿಶ್ವದಾಖಲೆಯಾಗಿದೆ. ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು 144 ಗೋಲುಗಳನ್ನು ದಾಖಲಿಸಿರುವ ಆಟಗಾರ ಎಂಬ ದಾಖಲೆ ಕೂಡ ರೊನಾಲ್ಡೊ ಹೆಸರಿನಲ್ಲಿದೆ. ಆದರೆ 2022ರ ವಿಶ್ವಕಪ್‌ನಲ್ಲಿ ಘಾನಾ ವಿರುದ್ಧ ಗೋಲು ಗಳಿಸಿದ ಬಳಿಕ ಪ್ರಮುಖ ಟೂರ್ನಿಗಳಲ್ಲಿ ಅವರು ಗೋಲು ಬರ ಎದುರಿಸುತ್ತಿದ್ದರು. ಡಿಆರ್ ಕಾಂಗೋ ವಿರುದ್ಧದ ಪಂದ್ಯದಲ್ಲೂ ಗೋಲು ಸಿಗದ ಕಾರಣ ಆ ಸರಣಿ 10 ಪಂದ್ಯಗಳಿಗೆ ತಲುಪಿತ್ತು. ಇದೀಗ ಉಜ್ಬೇಕಿಸ್ತಾನ್ ವಿರುದ್ಧದ ಎರಡು ಗೋಲುಗಳ ಮೂಲಕ ಆ ನಿರೀಕ್ಷೆಗೆ ತೆರೆ ಎಳೆದಿದ್ದಾರೆ.

ಕೊನೆಯ ವಿಶ್ವಕಪ್ ಸಾಧ್ಯತೆ

41 ವರ್ಷದ ರೊನಾಲ್ಡೊಗೆ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗುವ ಸಾಧ್ಯತೆ ಇದೆ. ಅವರು 2016ರಲ್ಲಿ ಪೋರ್ಚುಗಲ್‌ಗೆ ಯುರೋ ಕಪ್ ಪ್ರಶಸ್ತಿ ತಂದುಕೊಟ್ಟಿದ್ದರು. ಜೊತೆಗೆ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ರಿಯಲ್ ಮ್ಯಾಡ್ರಿಡ್ ಪರ ಐದು ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದಿದ್ದಾರೆ. ಮೊದಲ ಪಂದ್ಯದಲ್ಲಿ ಡಿಆರ್ ಕಾಂಗೋ ವಿರುದ್ಧ ಡ್ರಾ ಮಾಡಿಕೊಂಡಿದ್ದ ಪೋರ್ಚುಗಲ್, ಈ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿತ್ತು. ಉಜ್ಬೇಕಿಸ್ತಾನ್ ತಂಡವೂ ಕೊಲಂಬಿಯಾ ವಿರುದ್ಧದ ಸೋಲಿನ ಬಳಿಕ ಪುಟಿದೇಳುವ ಗುರಿ ಹೊಂದಿತ್ತು. ಆದರೆ ರೊನಾಲ್ಡೊ ಅವರ ಅದ್ಭುತ ಪ್ರದರ್ಶನದ ಮುಂದೆ ಉಜ್ಬೇಕಿಸ್ತಾನ್ ಹಿನ್ನಡೆ ಅನುಭವಿಸಿತು,(ಏಜೆನ್ಸೀಸ್​​).