ಶ್ರೀಮಂತ ಫುಟ್ಬಾಲ್ ದುನಿಯಾ! ಈ ಸಲದ ವಿಶ್ವಕಪ್ನಿಂದ ದಾಖಲೆ ಆದಾಯದ ನಿರೀಕ್ಷೆಯಲ್ಲಿ ಫಿಫಾ
ಬೆಂಗಳೂರು: ಫಿಫಾ ವಿಶ್ವಕಪ್ (FIFA World Cup) 23ನೇ ಆವೃತ್ತಿಯು ಆತಿಥೇಯ ದೇಶಗಳು (3), ಭಾಗವಹಿಸುವ ತಂಡಗಳು (48) ಮತ್ತು ಆಡುತ್ತಿರುವ ಪಂದ್ಯ (104), ಕ್ರೀಡಾಂಗಣ (16) ಮತ್ತು ದಿನಗಳ (39) ಲೆಕ್ಕದಲ್ಲಿ ಹಿಂದೆಂದೂ ಕಂಡರಿಯದಷ್ಟು ದೈತ್ಯ ಫುಟ್ಬಾಲ್ ಹಬ್ಬವೆನಿಸಿದೆ. ಅದೇ ರೀತಿ ಈ ಬಾರಿ ಟೂರ್ನಿಯಿಂದ ಹರಿಯಲಿರುವ ಹಣದ ಹೊಳೆಯೂ ದೊಡ್ಡ ಪ್ರಮಾಣದಲ್ಲಿದೆ. ಒಟ್ಟಾರೆ ಲಕ್ಷ ಕೋಟಿ ರೂಪಾಯಿ ಲೆಕ್ಕದಲ್ಲೇ ಈ ಬಾರಿ ಟೂರ್ನಿಯ ಹಣಕಾಸು ಲೆಕ್ಕಾಚಾರ ನಡೆಯುತ್ತಿದೆ. ಹೀಗಾಗಿ ಟೂರ್ನಿಗೆ ಸಂಬಂಧಿಸಿದ ಆರ್ಥಿಕ ವ್ಯವಹಾರಗಳ ಸಂಪ್ತ ವಿವರ ಇಲ್ಲದೆ.
ಡೈನಾಮಿಕ್ ದರ; ಟಿಕೆಟ್ ದುಬಾರಿ
ಈ ಸಲದ ಫಿಫಾ ವಿಶ್ವಕಪ್ ಪಂದ್ಯಗಳ ಟಿಕೆಟ್ ದರ ದುಬಾರಿ ಎನಿಸಿದೆ. ಈ ಬಾರಿ ಫಿಫಾ ಟಿಕೆಟ್ ಮಾರಾಟ ಪ್ರಕ್ರಿಯೆ ಸಂಪೂರ್ಣ ನಿಯಂತ್ರಣ ತೆಗೆದುಕೊಂಡಿದ್ದು, ಕಳೆದ ಆವೃತ್ತಿಗಿಂತ ದುಪ್ಪಟ್ಟು ಬೆಲೆ ನಿಗದಿಪಡಿಸಲಾಗಿದೆ. ಜತೆಗೆ ಡೈನಾಮಿಕ್ ಮಾದರಿಯನ್ನು ಅನುಸರಿಸಲಾಗುತ್ತಿದ್ದು, ಹೆಚ್ಚಿನ ಕುತೂಹಲದ ಮತ್ತು ಸ್ಟಾರ್ ಆಟಗಾರರು ಆಡುವ ಪಂದ್ಯಗಳ ಟಿಕೆಟ್ ದರವನ್ನು ಇನ್ನಷ್ಟು ಏರಿಕೆ ಮಾಡಲಾಗಿದೆ. ಟೂರ್ನಿಯ ಕನಿಷ್ಠ ಟಿಕೆಟ್ ಬೆಲೆ 5,716 ರೂ. (60 ಡಾಲರ್) ಆಗಿದೆ. ಲೀಗ್ ಹಂತದ ಪಂದ್ಯದ ಗರಿಷ್ಠ ಟಿಕೆಟ್ ಬೆಲೆ 9.52 ಲಕ್ಷ ರೂ. ಆಗಿದೆ. ಲೀಗ್ ಪಂದ್ಯಗಳ ಸರಾಸರಿ ಟಿಕೆಟ್ ದರ 72,214 ರೂ. ಆಗಿದೆ. ನಾಕೌಟ್ ಪಂದ್ಯಗಳ ಟಿಕೆಟ್ ದರ ಕನಿಷ್ಠ 2.57 ಲಕ್ಷ ರೂ.ನಿಂದ ಗರಿಷ್ಠ 10.47 ಲಕ್ಷ ರೂ. ಆಗಿದೆ. ಫೈನಲ್ ಪಂದ್ಯದ ಟಿಕೆಟ್ ದರ ಕನಿಷ್ಠ 8.76 ಲಕ್ಷ ರೂ.ನಿಂದ ಗರಿಷ್ಠ 70 ಲಕ್ಷ ರೂ. ನಿಗದಿಯಾಗಿದೆ. ಫಿಫಾ ಹಂತ ಹಂತವಾಗಿ ಬಿಡುಗಡೆಯಾಗಿರುವ ಎಲ್ಲ ಟಿಕೆಟ್ಗಳು ಈಗಾಗಲೆ ಬಹುತೇಕ ಮಾರಾಟವಾಗಿದ್ದು, ಕಾಳಸಂತೆಯಲ್ಲೂ ದೊಡ್ಡ ಬೆಲೆಗೆ ಮಾರಾಟವಾಗುತ್ತಿವೆ. ಓರ್ವ ವ್ಯಕ್ತಿಗೆ ಪಂದ್ಯವೊಂದರ ಗರಿಷ್ಠ 4 ಟಿಕೆಟ್ ಮತ್ತು ಒಟ್ಟಾರೆ ಟೂರ್ನಿಯ 40 ಟಿಕೆಟ್ಗಳನ್ನು ಮಾತ್ರ ವಿತರಿಸಲಾಗುತ್ತದೆ ಎಂದು ಫಿಫಾ ತಿಳಿಸಿದೆ.
ಕಳೆದ ಸಲದ ಕತಾರ್ ವಿಶ್ವಕಪ್ ಈಗಾಗಲೆ ಅತ್ಯಂತ ಆಗರ್ಭ ಶ್ರೀಮಂತ ಟೂರ್ನಿಯಾಗಿ ಇತಿಹಾಸ ಸೇರಿದೆ. ಈ ಸಲದ ವಿಶ್ವಕಪ್ 2ನೇ ಶ್ರೀಮಂತ ಟೂರ್ನಿ ಎನಿಸಲಿದೆ. 3 ದೇಶಗಳ ಜತೆಯಾಗಿ ಟೂರ್ನಿ ಆಯೋಜಿಸುತ್ತಿರುವುದರಿಂದ ಈ ಸಲದ ನಿಖರ ವೆಚ್ಚ ಸ್ಪಷ್ಟವಾಗಿಲ್ಲ. ಆದರೆ ಅಂದಾಜು 1,14,383 ಕೋಟಿ ರೂ. (12 ಶತಕೋಟಿ ಡಾಲರ್) ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ. ಇದರಲ್ಲಿ 16 ಕ್ರೀಡಾಂಗಣಗಳ ನವೀಕರಣ ಕೆಲಸದ ಜತೆಗೆ ಆತಿಥೇಯ ನಗರಗಳ ಮೂಲಸೌಕರ್ಯ ಅಭಿವೃದ್ಧಿ, ತಂಡ-ಕ್ಲಬ್ಗಳಿಗೆ ಹಂಚಲಾಗುವ ಬಹುಮಾನ ಮೊತ್ತ ಎಲ್ಲವೂ ಸೇರಿದೆ. ಈ ಪೈಕಿ ಫಿಫಾ ಟೂರ್ನಿ ಆಯೋಜನೆಗಾಗಿ 36,244 ಕೋಟಿ ರೂ. ವ್ಯಯಿಸುತ್ತಿದೆ. ಭದ್ರತೆ ಮತ್ತಿತರ ಕಾರ್ಯಚರಣೆ ವೆಚ್ಚ 10,492 ಕೋಟಿ ರೂ. ಆಗಿದೆ. ಆತಿಥೇಯ ದೇಶಗಳು ಒಟ್ಟು 85,803 ಕೋಟಿ ರೂ. ವ್ಯಯಿಸಿವೆ. ಈ ಬಾರಿ ಟೂರ್ನಿಗಾಗಿ ಯಾವುದೇ ಕ್ರೀಡಾಂಗಣವನ್ನು ಹೊಸದಾಗಿ ಕಟ್ಟಲಾಗಿಲ್ಲ. ಮೊದಲೇ ಇದ್ದ ಖಾಸಗಿ&ಸರ್ಕಾರಿ ಸ್ಟೇಡಿಯಂಗಳನ್ನು ಆಧುನೀಕರಿಸಲಾಗಿದೆ. ಆಸನ ಸಂಖ್ಯೆ ಏರಿಕೆ, ರ್ಟ್ಗ್ರಾಸ್, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಇದರಲ್ಲಿ ಸೇರಿವೆ.
ಬಹುಮಾನಕ್ಕೆ 6,935 ಕೋಟಿ ರೂ.
ಫಿಫಾ ಈ ಬಾರಿ ಟೂರ್ನಿಯ ಬಹುಮಾನ ಮೊತ್ತಕ್ಕಾಗಿ 6,935 ಕೋಟಿ ರೂ. (727 ದಶಲಕ್ಷ ಡಾಲರ್) ಖರ್ಚು ಮಾಡಲಿದೆ. ಈ ಪೈಕಿ 6,247 ಕೋಟಿ ರೂ. (655 ದಶಲಕ್ಷ ಡಾಲರ್) ಟೂರ್ನಿಯಲ್ಲಿ ಆಡುವ 48 ತಂಡಗಳಿಗೆ ಹಂಚಿಕೆಯಾಗಲಿದ್ದು, ಚಾಂಪಿಯನ್ ತಂಡ 477 ಕೋಟಿ ರೂ. (50 ದಶಲಕ್ಷ ಡಾಲರ್) ಪಡೆಯಲಿದೆ. ಇನ್ನು ಟೂರ್ನಿಯಲ್ಲಿ ಆಡಲು ಆಟಗಾರರನ್ನು ಬಿಟ್ಟುಕೊಟ್ಟಿರುವ ವಿವಿಧ ದೇಶಗಳ ಫುಟ್ಬಾಲ್ ಕ್ಲಬ್ಗಳಿಗೆ ಒಟ್ಟಾರೆ 3,385 ಕೋಟಿ ರೂ. ಹಂಚಿಕೆಯಾಗಲಿದೆ. ಪ್ರತಿ ಆಟಗಾರನಿಗೆ ದಿನಕ್ಕೆ 4.76 ಲಕ್ಷ ರೂ.ಯಂತೆ ಕ್ಲಬ್ಗಳಿಗೆ ಹಣ ಲಭಿಸಲಿದೆ. ಇದರನ್ವಯ ಆಟಗಾರನೊಬ್ಬ ಫೈನಲ್ ತಲುಪಿದರೆ ಆತನ ಕ್ಲಬ್ಗೆ ಗರಿಷ್ಠ 2.72 ಕೋಟಿ ಸಿಗಲಿದೆ.
ಫಿಫಾಗೆ 1,23,906 ಕೋಟಿ ರೂ. ಆದಾಯ ನಿರೀಕ್ಷೆ
2026ರ ಫಿಫಾ ವಿಶ್ವಕಪ್ ಟೂರ್ನಿಯಿಂದ ಫಿಫಾ ಒಟ್ಟಾರೆ 1,23,906 ಕೋಟಿ ರೂ. (13 ಶತಕೋಟಿ ಡಾಲರ್) ಆದಾಯದ ನಿರೀಕ್ಷೆ ಹೊಂದಿದೆ. ಈ ಪೈಕಿ ಟೂರ್ನಿಯ ಸಮಯದಲ್ಲೇ 85,737 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಪಂದ್ಯಗಳ ಪ್ರಸಾರ ಹಕ್ಕು ಮಾರಾಟದಿಂದಲೇ ಫಿಫಾ, ಬರೋಬ್ಬರಿ 38,104 ಕೋಟಿ ರೂ. ಆದಾಯ ಗಳಿಸಲಿದೆ. ಟಿಕೆಟ್ ಮಾರಾಟದಿಂದ ಸುಮಾರು 28,577 ಕೋಟಿ ರೂ. ಆದಾಯದ ನಿರೀಕ್ಷೆ ಇದೆ. ಪ್ರಾಯೋಜಕತ್ವದಿಂದ 26,674 ಕೋಟಿ ರೂ. ಆದಾಯ ಗಳಿಸಲಿದೆ. ಕಳೆದ 2022ರ ಕತಾರ್ ವಿಶ್ವಕಪ್ನಿಂದ ಫಿಫಾ 72,115 ಕೋಟಿ ರೂ. ಆದಾಯ ಗಳಿಸಿದ್ದು ಹಾಲಿ ದಾಖಲೆಯಾಗಿದೆ. ಈ ಬಾರಿ ಪಂದ್ಯ, ತಂಡಗಳ ಸಂಖ್ಯೆ ಏರಿಕೆಯಿಂದ ಆದಾಯವೂ ಹೆಚ್ಚುವುದು ಖಚಿತವಾಗಿದೆ.
ಪ್ರತಿ ತಂಡಕ್ಕೆ ಕನಿಷ್ಠ 100 ಕೋಟಿ ರೂ.!
ಈ ಬಾರಿ ವಿಶ್ವಕಪ್ನಲ್ಲಿ ಆಡುವ ಎಲ್ಲ 48 ತಂಡಗಳು ಕನಿಷ್ಠ 100 ಕೋಟಿ ರೂ. ಪಡೆಯಲಿವೆ. ಯಾಕೆಂದರೆ ಟೂರ್ನಿಯ ಲೀಗ್ ಹಂತದಲ್ಲಿ ಹೊರಬೀಳುವ ತಂಡಕ್ಕೂ 86 ಕೋಟಿ ರೂ. ಬಹುಮಾನ ಸಿಗಲಿದೆ. ಇನ್ನು ಟೂರ್ನಿಯ ಪೂರ್ವಸಿದ್ಧತೆಗಾಗಿ ಈಗಾಗಲೆ ಎಲ್ಲ 48 ತಂಡಗಳಿಗೆ ತಲಾ 14 ಕೋಟಿ ರೂ. ವಿತರಿಸಲಾಗಿದೆ.
ದಾಖಲೆ ಬಿಯರ್ ಮಾರಾಟ ನಿರೀಕ್ಷೆ
ಫಿಫಾ ವಿಶ್ವಕಪ್ ಬಂದರೆ ಸಹಜವಾಗಿಯೇ ಬಿಯರ್ ಮಾರಾಟ ಏರಿಕೆಯಾಗುತ್ತದೆ. ಪ್ರತಿ ಅಭಿಮಾನಿಯೂ ಪಂದ್ಯ ವೀಸುವ ವೇಳೆ ಕೈಯಲ್ಲೊಂದು ಬಿಯರ್ ಬಾಟಲಿ ಹಿಡಿದುಕೊಳ್ಳಲು ಇಷ್ಟಪಡುವುದು ಇದಕ್ಕೆ ಕಾರಣ. ಈ ಬಾರಿ ವಿಶ್ವಕಪ್ ಸಮಯದಲ್ಲಿ ವಿಶ್ವದೆಲ್ಲೆಡೆ 100 ಕೋಟಿ ಪಿಂಟ್ ಬಿಯರ್ ಮಾರಾಟವಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಕತಾರ್ ವಿಶ್ವಕಪ್ ವೇಳೆ ಸ್ಟೇಡಿಯಂನೊಳಗೆ ಬಿಯರ್ ಮಾರಾಟ ನಿಷೇಧಿಸಲಾಗಿತ್ತು. ಉತ್ತರ ಅಮೆರಿಕದಲ್ಲಿ ಇತ್ತೀಚೆಗೆ ಕುಸಿತ ಕಂಡಿದ್ದ ಬಿಯರ್ ಮಾರಾಟಕ್ಕೆ ವಿಶ್ವಕಪ್ ಹುರುಪು ತುಂಬುವ ನಿರೀಕ್ಷೆ ಇದೆ. ಹಾಲಿ ಐಪಿಎಲ್ವರೆಗೆ ಆರ್ಸಿಬಿ ಒಡೆತನ ಹೊಂದಿದ್ದ ಡಿಯಾಜಿಯೋ ಕಂಪನಿ, ಟೂರ್ನಿಯ ಅಧಿಕೃತ ಬಿಯರ್ ಮಾರಾಟ ಪಾಲುದಾರನಾಗಿದೆ.
ಫಿಫಾ ವಿಶ್ವಕಪ್ ವಿಜೇತರಿಗೆ ಚಿನ್ನದ ಮಿರುಗುವ ಟ್ರೋಫಿಯನ್ನು ನೀಡಲಾಗುತ್ತದೆ. ಇದು 6.175 ಕೆಜಿ ಭಾರವಿದ್ದು, ಇದರಲ್ಲಿ 4927 ಗ್ರಾಂ 18 ಕ್ಯಾರೆಟ್ ಚಿನ್ನವಿದೆ. 36.8 ಸೆಂ.ಮೀ. ಎತ್ತರ ಮತ್ತು 12.5 ಸೆಂ.ಮೀ ತಳವ್ಯಾಸ ಹೊಂದಿರುವ ಟ್ರೋಫಿಯ ಮೌಲ್ಯ ಸುಮಾರು 7 ಕೋಟಿ ರೂ. ಆಗಿದೆ. ಆದರೆ ಟೂರ್ನಿಯ ಪ್ರತಿಷ್ಠೆ ಮತ್ತು ಇತಿಹಾಸವನ್ನು ಪರಿಗಣಿಸಿ ಇದರ ಮಾರುಕಟ್ಟೆ ಬೆಲೆ 191 ಕೋಟಿ ರೂ. ಎನ್ನಬಹುದು ಎಂಬುದು ತಜ್ಞರ ಅಭಿಪ್ರಾಯ. ಈಗಿನ ಟ್ರೋಫಿಯನ್ನು 1974ರ ಆವೃತ್ತಿಯಿಂದ ನೀಡಲಾಗುತ್ತಿದೆ. ಅದಕ್ಕೆ ಮುನ್ನ 1930ರಿಂದ 1970ರವರೆಗೆ ವಿಶ್ವಕಪ್ ವಿಜೇತರಿಗೆ ಜೂಲ್ಸ್ ರಿಮೆಟ್ ಟ್ರೋಫಿ ಎಂಬ ರೋಲಿಂಗ್ ಟ್ರೋಫಿ ನೀಡಲಾಗುತ್ತಿತ್ತು. 1970ರಲ್ಲಿ ಬ್ರೆಜಿಲ್ ತಂಡ 3ನೇ ಬಾರಿ ವಿಶ್ವಕಪ್ ಗೆದ್ದಾಗ ಟ್ರೋಫಿಯನ್ನು ಅದಕ್ಕೆ ಶಾಶ್ವತವಾಗಿ ನೀಡಲಾಯಿತು. ಬಳಿಕ ಇಟಲಿಯ ವಿನ್ಯಾಸಕ ಸಿಲ್ವಿಯೋ ಗ್ಯಾಜಾನಿಗಾ ರೂಪಿಸಿರುವ ಈಗಿನ ಟ್ರೋಫಿಯ ಪ್ರತಿಕೃತಿಯನ್ನಷ್ಟೇ ವಿಜೇತರಿಗೆ ನೀಡಲಾಗುತ್ತಿದೆ.