- ವಿಶ್ವಕಪ್‌ನಲ್ಲಿ ಮಿಂಚಿದ ಇರಾನ್ ಗೋಲ್‌ಕೀಪರ್
- 7 ಅದ್ಭುತ ಸೇವ್, ಎರಡು ಗಿನ್ನೆಸ್ ದಾಖಲೆ; ವಿಶ್ವಕಪ್‌ನಲ್ಲಿ ಗಮನ ಸೆಳೆದ ಬೇರನ್‌ವಾಂಡ್
- ಬೀದಿಯಲ್ಲಿ ಮಲಗಿ ಬದುಕಿದ್ದ ದಿನಗಳು
ಲಾಸ್ ಏಂಜಲೀಸ್: FIFA ವಿಶ್ವಕಪ್ 2026ರಲ್ಲಿ ವಿಶ್ವದ 9ನೇ ಶ್ರೇಯಾಂಕದ ಬೆಲ್ಜಿಯಂ ವಿರುದ್ಧ ಇರಾನ್ ತಂಡ 0-0 ಗೋಲುಗಳ ಸಮಬಲ ಸಾಧಿಸಿದ್ದು, ಈ ಪಂದ್ಯದಲ್ಲಿ ಗೋಲ್‌ಕೀಪರ್ ಅಲಿರೆಜಾ ಬೇರನ್‌ವಾಂಡ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಏಳು ಪ್ರಮುಖ ಸೇವ್‌ಗಳನ್ನು ಮಾಡಿ ಬೆಲ್ಜಿಯಂಗೆ ಗೋಲು ಗಳಿಸಲು ಅವಕಾಶ ನೀಡದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ಏಳು ಸೇವ್‌ಗಳಿಂದ ಬೆಲ್ಜಿಯಂಗೆ ನಿರಾಸೆ
ಬೆಲ್ಜಿಯಂ ಮೂರು ಅಂಕಗಳ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದರೂ, 6 ಅಡಿ 4 ಇಂಚು ಎತ್ತರದ ಬೇರನ್‌ವಾಂಡ್ ಅವರ ಗೋಲ್‌ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಪಂದ್ಯದಿಡೀ ಏಳು ಅದ್ಭುತ ಸೇವ್‌ಗಳನ್ನು ಮಾಡಿದ ಅವರು ಇರಾನ್‌ಗೆ ಅಮೂಲ್ಯ ಒಂದು ಅಂಕ ತಂದುಕೊಟ್ಟರು. ಈ ಫಲಿತಾಂಶದೊಂದಿಗೆ ಎರಡು ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ಇರಾನ್ ತಂಡವು ನಾಕೌಟ್ ಹಂತಕ್ಕೇರುವ ನಿರೀಕ್ಷೆಯನ್ನು ಜೀವಂತವಾಗಿರಿಸಿಕೊಂಡಿದೆ.
ಬೀದಿಯಲ್ಲಿ ಮಲಗಿ ಬದುಕಿದ್ದ ದಿನಗಳು
Alireza Beiranvand ಇರಾನ್‌ನ ಲೊರೆಸ್ತಾನ್ ಪ್ರದೇಶದ ಬಡ ಕುಟುಂಬದಲ್ಲಿ ಜನಿಸಿದ್ದರು. ಬಾಲ್ಯದಲ್ಲಿ ಫುಟ್‌ಬಾಲ್ ಆಡಲು ತಂದೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಆದರೂ ತನ್ನ ಕನಸು ಕೈಬಿಡದ ಅವರು ಹದಿಹರೆಯದಲ್ಲೇ ಮನೆಯಿಂದ ಓಡಿಹೋಗಿ ಟೆಹ್ರಾನ್‌ಗೆ ತೆರಳಿದ್ದರು. ಅಲ್ಲಿ ವಾಸಿಸಲು ಮನೆ ಅಥವಾ ಪರಿಚಯಸ್ಥರು ಯಾರೂ ಇರಲಿಲ್ಲ. ಹಲವು ತಿಂಗಳು ಸ್ಥಳೀಯ ಫುಟ್‌ಬಾಲ್ ಕ್ಲಬ್‌ಗಳ ಹೊರಗಡೆ ರಸ್ತೆಗಳಲ್ಲಿ ಮಲಗಿದ್ದರು. ಬದುಕು ಸಾಗಿಸಲು ರಸ್ತೆ ಸ್ವಚ್ಛಗೊಳಿಸುವುದು, ಕಾರ್ ವಾಶ್‌ನಲ್ಲಿ ಕೆಲಸ ಮಾಡುವುದು, ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುವುದು ಮತ್ತು ಪಿಜ್ಜಾ ಅಂಗಡಿಯಲ್ಲಿ ಹಿಟ್ಟು ತಯಾರಿಸುವಂತಹ ಕೆಲಸಗಳನ್ನು ಮಾಡಿದ್ದರು.
ಎರಡು ಗಿನ್ನೆಸ್ ವಿಶ್ವ ದಾಖಲೆ
ಬಾಲ್ಯದಲ್ಲಿ ಕುರಿಗಳನ್ನು ಕಾಪಾಡುವ ವೇಳೆ ದೂರಕ್ಕೆ ಕಲ್ಲು ಎಸೆಯುವ ಸ್ಥಳೀಯ ಆಟ ಆಡುತ್ತಿದ್ದ ಬೇರನ್‌ವಾಂಡ್ ಅವರ ಕೈಬಲ ನಂತರ ಫುಟ್‌ಬಾಲ್‌ನಲ್ಲಿ ವಿಶಿಷ್ಟ ಗುರುತನ್ನು ನೀಡಿತು.ಅವರು ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ.
2016ರಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ 61.002 ಮೀಟರ್ ದೂರಕ್ಕೆ ಚೆಂಡು ಎಸೆದು ಫುಟ್‌ಬಾಲ್ ಇತಿಹಾಸದ ಅತಿ ಉದ್ದದ ಥ್ರೋ ದಾಖಲಿಸಿದರು. 78.014 ಮೀಟರ್ ದೂರದ ಡ್ರಾಪ್ ಕಿಕ್ ಮೂಲಕ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದರು.
ಕಠಿಣ ಪರಿಸ್ಥಿತಿಯಲ್ಲೂ ಸಾಧನೆ
ರಾಜಕೀಯ ಉದ್ವಿಗ್ನತೆ ಮತ್ತು ವೀಸಾ ಸಮಸ್ಯೆಗಳ ಕಾರಣದಿಂದ ಇರಾನ್ ತಂಡಕ್ಕೆ ಅಮೆರಿಕದಲ್ಲೇ ಶಿಬಿರ ಸ್ಥಾಪಿಸಲು ಸಾಧ್ಯವಾಗಿಲ್ಲ. ತಂಡವು ಮೆಕ್ಸಿಕೊದಲ್ಲಿ ತಂಗಿದ್ದು, ಪಂದ್ಯಕ್ಕೂ ಕೆಲವೇ ಗಂಟೆಗಳ ಮೊದಲು ಅಮೆರಿಕ ಪ್ರವೇಶಿಸಲು ಅನುಮತಿ ಪಡೆಯಬೇಕಾದ ಪರಿಸ್ಥಿತಿ ಎದುರಿಸುತ್ತಿದೆ.
ದೀರ್ಘ ಪ್ರಯಾಣ, ದೈಹಿಕ ಆಯಾಸ ಮತ್ತು ಮಾನಸಿಕ ಒತ್ತಡದ ನಡುವೆಯೂ ಬೆಲ್ಜಿಯಂನಂತಹ ಬಲಿಷ್ಠ ತಂಡವನ್ನು ಗೋಲುರಹಿತ ಸಮಬಲಕ್ಕೆ ತಡೆಯುವುದು ದೊಡ್ಡ ಸಾಧನೆ ಎಂದು ಕ್ರೀಡಾ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ,(ಏಜೆನ್ಸೀಸ್).