FIFA WorldCup: 32ರ ಘಟ್ಟದಲ್ಲೇ ಹೊರಬಿದ್ದ ಜರ್ಮನಿ; ಪ್ರಿ ಕ್ವಾರ್ಟರ್ಫೈನಲ್ಗೇರಿದ ಪರಾಗ್ವೆ
ಬೋಸ್ಟನ್: ಪೆನಾಲ್ಟಿ ಶೂಟೌಟ್ನಲ್ಲಿ ಪರಾಗ್ವೆ ಗೋಲು ಕೀಪರ್ ಒರ್ಲ್ಯಾಂಡೊ ಗಿಲ್ ತೋರಿದ ಅಮೋಘ ನಿರ್ವಹಣೆ ಎದುರು ಮುಗ್ಗರಿಸಿದ 4 ಬಾರಿಯ ಚಾಂಪಿಯನ್ ಜರ್ಮನಿ ತಂಡ ಫಿಫಾ ವಿಶ್ವಕಪ್ (FIFA WorldCup) 23ನೇ ಆವೃತ್ತಿಯಲ್ಲಿ 32ರ ಘಟ್ಟದಲ್ಲೇ ಹೊರಬಿದ್ದಿದೆ. 12 ವರ್ಷಗಳ ಬಳಿಕ ನಾಕೌಟ್ ಹಂತಕ್ಕೇರಿದ್ದ ಜರ್ಮನಿ, ಸಡನ್ ಡೆತ್ನಲ್ಲಿ 3-4ರಿಂದ ಪರಾಭವಗೊಂಡಿತು. 16 ವರ್ಷಗಳ ಬಳಿಕ ವಿಶ್ವಕಪ್ಗೆ ಮರುಪ್ರವೇಶ ಪಡೆದಿದ್ದ ಪರಾಗ್ವೆ ಪ್ರಿ ಕ್ವಾರ್ಟರ್ಫೈನಲ್ ಹಂತಕ್ಕೇರಿ ಇತಿಹಾಸ ನಿರ್ಮಿಸಿದ್ದು, ಅಂತಿಮ 8ರ ಘಟ್ಟಕ್ಕೇರಲು ಫ್ರಾನ್ಸ್ ಅಥವಾ ಸ್ವೀಡನ್ ವಿರುದ್ಧ ಸೆಣಸಲಿದೆ.
ಭಾರತೀಯ ಕಾಲಮಾನ ಪ್ರಕಾರ ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಜೂಲಿಯೊ ಎನ್ಸಿಸೊ 42ನೇ ನಿಮಿಷದಲ್ಲಿ ಹೆಡರ್ ಮೂಲಕ ಪರಾಗ್ವೆಗೆ ಮುನ್ನಡೆ ಒದಗಿಸಿದರೆ, 54ನೇ ನಿಮಿಷದಲ್ಲಿ ಕಾಯ್ ಹಾವರ್ಟ್ಜ್ ಜರ್ಮನಿಗೆ ಸಮಬಲ ಒದಗಿಸಿದರು. ಬಳಿಕ ಪಂದ್ಯ ಹೆಚ್ಚುವರಿ ಸಮಯದಲ್ಲೂ 1-1 ಸಮಬಲದಲ್ಲಿ ಕೊನೆಗೊಂಡು ಶೂಟೌಟ್ಗೆ ವಿಸ್ತರಿಸಲ್ಪಟ್ಟಿತು. ಶೂಟೌಟ್ನಲ್ಲೂ ಮೊದಲ 5 ಹೊಡೆತಗಳಲ್ಲಿ ಉಭಯ ತಂಡಗಳು 3-3 ಸಮಬಲ ಸಾಧಿಸಿದವು. ನಂತರದ ಮೊದಲ ಸಡನ್ಡೆತ್ನಲ್ಲಿ ಜೊನಾಥನ್ ತಾಹ್ ಚೆಂಡನ್ನು ಗೋಲು ಪೆಟ್ಟಿಗೆಯ ಹೊರಗೆ ಒದ್ದರೆ, ಜೋಸ್ ಕ್ಯಾನೆಲ್ ಜರ್ಮನಿ ಗೋಲು ಕೀಪರ್ ಮ್ಯಾನ್ಯುಯೆಲ್ ನ್ಯೂಯೆರ್ರನ್ನು ವಂಚಿಸಿ ಪರಾಗ್ವೆಗೆ ಗೆಲುವು ನೀಡಿದರು. 2002ರ ವಿಶ್ವಕಪ್ನ 16ರ ಟ್ಟದಲ್ಲಿ ಜರ್ಮನಿ ವಿರುದ್ಧವೇ 0-1ರಿಂದ ಸೋತು ಹೊರಬಿದ್ದಿದ್ದ ಪರಾಗ್ವೆ 24 ವರ್ಷಗಳ ಬಳಿಕ ಸೇಡು ತೀರಿಸಿಕೊಂಡಿತು.
ಫಿಫಾ ರ್ಯಾಂಕಿಂಗ್ನಲ್ಲಿ 12ನೇ ಸ್ಥಾನದಲ್ಲಿರುವ ಜರ್ಮನಿ, 34ನೇ ರ್ಯಾಂಕ್ನ ಪರಾಗ್ವೆ ಎದುರು ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಲು ವಿಲವಾಯಿತು. ಶೂಟೌಟ್ನಲ್ಲಿ ಒರ್ಲ್ಯಾಂಡೊ ಗಿಲ್ 2 ಹೊಡೆತಗಳನ್ನು ತಡೆಯುವಲ್ಲಿ ಯಶಸ್ವಿಯಾದರು. ಪರಾಗ್ವೆ ಈ ಹಿಂದೆ ವಿಶ್ವಕಪ್ನಲ್ಲಿ ಆಡಿದ 5 ನಾಕೌಟ್ ಪಂದ್ಯಗಳಲ್ಲೂ ಗೋಲು ಗಳಿಸಲು ವಿಫಲವಾಗಿತ್ತು.
ಹೆಚ್ಚುವರಿ ಸಮಯದ 102ನೇ ನಿಮಿಷದಲ್ಲಿ ನಥಾನೀಲ್ ಬ್ರೌನ್ರ ಕಾರ್ನರ್ ಕಿಕ್ನಲ್ಲಿ ಜೊನಾಥನ್ ತಾಹ್ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ವಿಎಆರ್ ಪರಿಶೀಲನೆಯ ವೇಳೆ 26 ವರ್ಷದ ಕೀಪರ್ ಒರ್ಲ್ಯಾಂಡೊರನ್ನು ವಲ್ಡಮರ್ ಆಂಟನ್ ತಳ್ಳಿದ್ದು ಸ್ಪಷ್ಟವಾಗಿದ್ದರಿಂದ ಅದು ಫೌಲ್ ಆಗಿ, ಗೋಲು ಅಮಾನ್ಯಗೊಂಡಿತು. ಇದರಿಂದ ಜರ್ಮನಿಗೆ 2-1 ಮುನ್ನಡೆ ಸಿಗಲಿಲ್ಲ.
ಜರ್ಮನಿ ಲೀಗ್ ಹಂತದಲ್ಲಿ 10 ಗೋಲು ಸಿಡಿಸಿತ್ತು. ಇದೇ ಮೊದಲ ಬಾರಿಗೆ ವಿಶ್ವಕಪ್ ಆಡಿದ ಒರ್ಲ್ಯಾಂಡೊ, ದಾಖಲೆಯ 5ನೇ ಬಾರಿ ವಿಶ್ವಕಪ್ ಆಡಿದ ಜರ್ಮನಿ ಗೋಲು ಕೀಪರ್ ನ್ಯೂಯೆರ್ಗಿಂತ ಶೂಟೌಟ್ನಲ್ಲಿ ಗಮನಾರ್ಹ ನಿರ್ವಹಣೆ ಪ್ರದರ್ಶಿಸಿದರು. ಹಾವರ್ಟ್ಜ್ರ ಮೊದಲ ಪೆನಾಲ್ಟಿ ಕಿಕ್ಅನ್ನೇ ತಡೆದು ಒರ್ಲ್ಯಾಂಡೊ ಪರಾಗ್ವೆ ಆಟಗಾರರ ವಿಶ್ವಾಸ ಹಿಗ್ಗಿಸಿದ್ದರು.
*1: ಜರ್ಮನಿ ತಂಡ ಫಿಫಾ ವಿಶ್ವಕಪ್ನಲ್ಲಿ ಮೊದಲ ಬಾರಿ ಪೆನಾಲ್ಟಿ ಶೂಟೌಟ್ನಲ್ಲಿ ಸೋತಿತು. ಹಿಂದಿನ 4 ಪೆನಾಲ್ಟಿ ಶೂಟೌಟ್ಗಳಲ್ಲಿ ಗೆದ್ದಿತ್ತು.
*50: ಜರ್ಮನಿ ಕಳೆದ 50 ವರ್ಷಗಳಲ್ಲಿ ಮೊದಲ ಬಾರಿ ಯಾವುದೇ ಟೂರ್ನಿಯ ಶೂಟೌಟ್ನಲ್ಲಿ ಸೋತಿತು. 1976ರಲ್ಲಿ ಕೊನೆಯದಾಗಿ ಯುರೋಕಪ್ನಲ್ಲಿ ಜೆಕೋಸ್ಲೋವಾಕಿಯಾ ಎದುರು ಸೋತಿತ್ತು.
*2: ಪರಾಗ್ವೆ ವಿಶ್ವಕಪ್ನಲ್ಲಿ ಆಡಿದ 2 ಪೆನಾಲ್ಟಿ ಶೂಟೌಟ್ನಲ್ಲೂ ಗೆದ್ದ ಸಾಧನೆ ಮಾಡಿತು. 2010ರಲ್ಲಿ ಜಪಾನ್ ಎದುರು ಶೂಟೌಟ್ನಲ್ಲಿ ಗೆದ್ದಿತ್ತು.
*5: ಪರಾಗ್ವೆ ವಿಶ್ವಕಪ್ನಲ್ಲಿ 5ನೇ ಬಾರಿ ಮತ್ತು 2010ರ ಬಳಿಕ ಮೊದಲ ಬಾರಿ 16ರ ಟ್ಟಕ್ಕೇರಿದ ಸಾಧನೆ ಮಾಡಿತು.