ಫಿಫಾ ವಿಶ್ವಕಪ್ನಲ್ಲಿ ಆಡಿದ ಮೊದಲ ಅಮ್ಮ-ಮಗ ಎನಿಸಿದ ಜೆನ್ನಿ-ಬಿಂಡನ್!
ನ್ಯೂಯಾರ್ಕ್: ನ್ಯೂಜಿಲೆಂಡ್ನ ಟೈಲರ್ ಬಿಂಡನ್ ಇರಾನ್ ವಿರುದ್ಧದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಫಿಫಾ ವಿಶ್ವಕಪ್ಗೆ (FIFA World Cup) ಪದಾರ್ಪಣೆ ಮಾಡುವುದರೊಂದಿಗೆ ಹೊಸ ಇತಿಹಾಸವೊಂದು ಸೃಷ್ಟಿಸಿದರು. ಯಾಕೆಂದರೆ ಇದಕ್ಕೆ ಮುನ್ನ 2007 ಮತ್ತು 2011ರ ಮಹಿಳೆಯರ ಫಿಫಾ ವಿಶ್ವಕಪ್ನಲ್ಲಿ ಅವರ ತಾಯಿ ಜೆನ್ನಿ ನ್ಯೂಜಿಲೆಂಡ್ ತಂಡದ ಗೋಲು ಕೀಪರ್ ಆಗಿ ಆಡಿದ್ದರು. ಹೀಗಾಗಿ ಫಿಫಾ ವಿಶ್ವಕಪ್ನಲ್ಲಿ ಆಡಿದ ಮೊದಲ ತಾಯಿ-ಮಗ ಎಂಬ ಹೆಗ್ಗಳಿಕೆಗೆ ಜೆನ್ನಿ-ಬಿಂಡನ್ ಪಾತ್ರರಾದರು.
ಜೆನ್ನಿ 2008 ಮತ್ತು 2012ರ ಒಲಿಂಪಿಕ್ಸ್ನಲ್ಲೂ ಭಾಗವಹಿಸಿದ್ದರು. 21 ವರ್ಷದ ಬಿಂಡನ್ ಇಂಗ್ಲಿಷ್ ಪ್ರೀಮಿಯರ್ ಲೀಗ್ನಲ್ಲಿ ನಾಟಿಂಗ್ಹ್ಯಾಂ ಫಾರೆಸ್ಟ್ ತಂಡದ ಆಟಗಾರರಾಗಿದ್ದು, ಕಿವೀಸ್ ಪರ ಮೊದಲ ಬಾರಿ ಕಣಕ್ಕಿಳಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ತಾಯಿಯೊಂದಿಗೆ, ನ್ಯೂಜಿಲೆಂಡ್ ವಾಲಿಬಾಲ್ ತಂಡದ ಮಾಜಿ ನಾಯಕರಾಗಿರುವ ಅವರ ತಂದೆ ಗ್ರಾಂಟ್ ಕೂಡ ಸಂಭ್ರಮಿಸಿದರು.
ಫಿಫಾ ವಿಶ್ವಕಪ್ನಲ್ಲಿ ಈ ಹಿಂದೆ 25ಕ್ಕೂ ಅಧಿಕ ತಂದೆ-ಮಗ ಆಡಿದ ದೃಷ್ಟಾಂತಗಳಿವೆ. ಆದರೆ ತಾಯಿ-ಮಗ ಆಡಿದ ಮೊದಲ ದೃಷ್ಟಾಂತ ಇದಾಗಿದೆ.