FIFA WorldCup: ಲಿಯೋನೆಲ್ ಮೆಸ್ಸಿ ಸತತ 9 ಪಂದ್ಯಗಳ ಗೋಲಿನ ಓಟಕ್ಕೆ ಸ್ವಿಸ್ ಕಡಿವಾಣ!
ಕಾನ್ಸಾಸ್ ಸಿಟಿ: ಫಿಫಾ ವಿಶ್ವಕಪ್ನಲ್ಲಿ ಲಿಯೋನೆಲ್ ಮೆಸ್ಸಿ (Lionel Messi) ಅವರ ಸತತ 9 ಪಂದ್ಯಗಳ (2022ರಲ್ಲಿ 4, 2026ರಲ್ಲಿ 5) ಗೋಲು ಸಾಧನೆಯ ಓಟಕ್ಕೆ ಸ್ವಿಸ್ ತಡೆಯೊಡ್ಡಿತು. ಆದರೆ ಪಂದ್ಯದ ಮೊದಲ ಗೋಲು ದಾಖಲಾಗುವಲ್ಲಿ ಮೆಸ್ಸಿ ಪಾತ್ರ ಪ್ರಮುಖವಾಗಿತ್ತು. ಇದೇ ವೇಳೆ ಮೆಸ್ಸಿ 4 ವಿಶ್ವಕಪ್ ಕ್ವಾರ್ಟರ್ಫೈನಲ್ಗಳಲ್ಲಿ ಆಡಿದ 4ನೇ ಆಟಗಾರ ಎನಿಸಿದರು. ಜರ್ಮನಿಯ ಲೋಥರ್ ಮಥಾಯಿಸ್, ಮಿರೋಸ್ಲಾವ್ ಕ್ಲೋಸ್, ಉವೆ ಸೀಲರ್ ಹಿಂದಿನ ಸಾಧಕರು.
3: ಅರ್ಜೆಂಟೀನಾ ತಂಡ ಹಾಲಿ ವಿಶ್ವಕಪ್ನಲ್ಲಿ ಸತತ 4ನೇ ಪಂದ್ಯದಲ್ಲಿ ಕನಿಷ್ಠ 3 ಗೋಲು ದಾಖಲಿಸಿತು.
15: ಅರ್ಜೆಂಟೀನಾ ವಿಶ್ವಕಪ್ನಲ್ಲಿ ಸತತ 15ನೇ ಪಂದ್ಯದಲ್ಲಿ ಗೋಲು ದಾಖಲಿಸಿತು. ಉರುಗ್ವೆ (16), ಜರ್ಮನಿ (18), ಹಂಗೆರಿ (17), ಬ್ರೆಜಿಲ್ (18) ಇದಕ್ಕಿಂತ ಹೆಚ್ಚು ಬಾರಿ ಸತತ ಗೋಲು ಗಳಿಸಿರುವ ತಂಡಗಳಾಗಿವೆ.
ಅಂತಿಮ 4ಕ್ಕೆ ಅಗ್ರ 4! ಇದೇ ಮೊದಲು!
ಫಿಫಾ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 4 ಸ್ಥಾನದಲ್ಲಿರುವ ತಂಡಗಳೇ (1. ಅರ್ಜೆಂಟೀನಾ, 2. ಸ್ಪೇನ್, 3. ಫ್ರಾನ್ಸ್, 4. ಇಂಗ್ಲೆಂಡ್) ಈ ಬಾರಿ ವಿಶ್ವಕಪ್ನಲ್ಲಿ ಅಂತಿಮ 4ರ ಘಟ್ಟ ತಲುಪಿರುವುದು ವಿಶೇಷವಾಗಿದೆ. 1992ರಲ್ಲಿ ಫಿಫಾ ರ್ಯಾಂಕಿಂಗ್ ಜಾರಿಗೆ ಬಂದ ನಂತರ ಈ ರೀತಿಯ ದೃಷ್ಟಾಂತ ದಾಖಲಾಗಿರಲಿಲ್ಲ. ಅಲ್ಲದೆ 1990 ಮತ್ತು 1970ರ ಬಳಿಕ ಸೆಮಿಫೈನಲ್ಗೇರಿರುವ ಎಲ್ಲ 4 ತಂಡಗಳೂ ಈ ಹಿಂದೆ ಕನಿಷ್ಠ 1 ಸಲವಾದರೂ ವಿಶ್ವಕಪ್ ಗೆದ್ದಿರುವ ತಂಡಗಳಾಗಿವೆ. ಹೀಗಾಗಿ ಈ ಬಾರಿ ಹೊಸ ತಂಡವೊಂದು ಪ್ರಶಸ್ತಿ ಜಯಿಸುವುದಿಲ್ಲ ಎಂಬುದು ಖಚಿತಗೊಂಡಿದೆ.