SpainVsBelgium | ಮೈಕೆಲ್ ಮೆರಿನೊ ಕೊನೆಯ ಕ್ಷಣದ ಮ್ಯಾಜಿಕ್!...ಬೆಲ್ಜಿಯಂ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಸ್ಪೇನ್!  
ಫುಟ್ಬಾಲ್

ಮೈಕೆಲ್ ಮೆರಿನೊ ಕೊನೆಯ ಕ್ಷಣದ ಮ್ಯಾಜಿಕ್!...ಬೆಲ್ಜಿಯಂ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಸ್ಪೇನ್ | SpainVsBelgium

SpainVsBelgium: ಫಿಫಾ ವಿಶ್ವಕಪ್​ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ರೋಚಕ ಜಯ ಸಾಧಿಸಿದ ಸ್ಪೇನ್, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬದಲಿ ಆಟಗಾರ ಮೈಕೆಲ್ ಮೆರಿನೊ ಪಂದ್ಯದ ಕೊನೆಯ ಕ್ಷಣಗಳಲ್ಲಿ ಗಳಿಸಿದ ಅದ್ಭುತ ಗೋಲು ಸ್ಪೇನ್ ತಂಡದ ವಿಜಯಕ್ಕೆ ಕಾರಣವಾಯಿತು. ಈ ಗೆಲುವಿನೊಂದಿಗೆ ಸ್ಪೇನ್ ಈಗ ಡಲ್ಲಾಸ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಎದುರಿಸಲಿದೆ.
ಪಂದ್ಯದ ಆರಂಭದಿಂದಲೇ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಪೆಡ್ರಿ ಬದಲಿಗೆ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದ ಫ್ಯಾಬಿಯನ್ ರೂಯಿಜ್, ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ಅವರ ನಂಬಿಕೆಯನ್ನು ಉಳಿಸಿಕೊಂಡರು. ಪಂದ್ಯದ 30ನೇ ನಿಮಿಷದಲ್ಲಿ, ಪೆಡ್ರೊ ಪೋರೊ ನೀಡಿದ ಪಾಸ್ ಅನ್ನು ಡ್ಯಾನಿ ಓಲ್ಮೊ ಗೋಲು ಬಾರಿಸಿದರು. ಬೆಲ್ಜಿಯಂ ಕೀಪರ್ ತಿಬೌಟ್ ಕೌರ್ಟೊಯಿಸ್ ಅದನ್ನು ತಡೆದರಾದರೂ, ರಿಬೌಂಡ್ ಆದ ಚೆಂಡನ್ನು ಅದ್ಭುತವಾಗಿ ನೆಟ್‌ಗೆ ತಳ್ಳಿದ ರೂಯಿಜ್ ಸ್ಪೇನ್‌ಗೆ 1-0 ಮುನ್ನಡೆ ತಂದುಕೊಟ್ಟರು.

ತಿರುಗೇಟು ನೀಡಿದ ಬೆಲ್ಜಿಯಂ

ಸ್ಪೇನ್ ಮುನ್ನಡೆ ಸಾಧಿಸಿದ ಕೇವಲ 11 ನಿಮಿಷಗಳಲ್ಲಿ ಬೆಲ್ಜಿಯಂ ಅದ್ಭುತವಾಗಿ ಕಂಬ್ಯಾಕ್ ಮಾಡಿತು. ತಿಮೋತಿ ಕ್ಯಾಸ್ಟಾಗ್ನೆ ನೀಡಿದ ಕ್ರಾಸ್ ಅನ್ನು ಸ್ಪೇನ್ ಡಿಫೆಂಡರ್ ಪೌ ಕುಬಾರ್ಸಿಗಿಂತ ಎತ್ತರಕ್ಕೆ ಜಿಗಿದ ಚಾರ್ಲ್ಸ್ ಡಿ ಕೆಟೆಲೇರೆ ಹೆಡರ್ ಮೂಲಕ ಗೋಲಾಗಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು. ಈ ಗೋಲಿನೊಂದಿಗೆ ಈ ಟೂರ್ನಿಯಲ್ಲಿ ಸತತ 10 ಗಂಟೆಗಳಿಗೂ ಹೆಚ್ಚು ಕಾಲ ಗೋಲು ಬಿಟ್ಟುಕೊಡದ ಸ್ಪೇನ್‌ನ ದಾಖಲೆಗೆ ಬ್ರೇಕ್ ಬಿತ್ತು.

ದ್ವಿತೀಯಾರ್ಧದಲ್ಲಿ ಸ್ಪೇನ್ ಪ್ರಾಬಲ್ಯ ಮತ್ತು ಕೌರ್ಟೊಯಿಸ್‌ಗೆ ಗಾಯ

ದ್ವಿತೀಯಾರ್ಧದಲ್ಲಿ ಸ್ಪೇನ್ ಸಂಪೂರ್ಣವಾಗಿ ಪಂದ್ಯದ ನಿಯಂತ್ರಣ ಸಾಧಿಸಿತು. ಲಮೈನ್ ಯಮಾಲ್ ಬೆಲ್ಜಿಯಂ ಡಿಪೆನ್ಸ್​ಗೆ ಆತಂಕ ತಂದಿಟ್ಟರು. ಆದರೆ ಬೆಲ್ಜಿಯಂ ಗೋಲ್‌ಕೀಪರ್ ಕೌರ್ಟೊಯಿಸ್, ಮೈಕೆಲ್ ಒಯಾರ್ಜಬಾಲ್ ಅವರ ಯತ್ನಗಳನ್ನು ತಡೆದರು. ಆದರೆ 72ನೇ ನಿಮಿಷದಲ್ಲಿ ಬೆಲ್ಜಿಯಂಗೆ ದೊಡ್ಡ ಆಘಾತ ಎದುರಾಯಿತು. ತೊಡೆಯ ಗಾಯಕ್ಕೆ ಒಳಗಾದ ಕೌರ್ಟೊಯಿಸ್ ಮೈದಾನ ತೊರೆದರು. ಅವರ ಬದಲಿಗೆ ಮ್ಯಾಂಚೆಸ್ಟರ್ ಯುನೈಟೆಡ್‌ನ ಯುವ ಕೀಪರ್ ಸೆನ್ನೆ ಲ್ಯಾಮೆನ್ಸ್ ಕಣಕ್ಕಿಳಿದರು.

ಮೆರಿನೊ ಬರೆದ ಗೆಲುವಿನ ಸ್ಕ್ರಿಪ್ಟ್

ಪಂದ್ಯದ ಗತಿಯನ್ನು ಬದಲಿಸಲು ಸ್ಪೇನ್ ಪೆಡ್ರಿ, ಫೆರಾನ್ ಟೊರೆಸ್ ಮತ್ತು ಮೈಕೆಲ್ ಮೆರಿನೊ ಅವರನ್ನು ಮೈದಾನಕ್ಕಿಳಿಸಿತು. ಮತ್ತೊಂದೆಡೆ ಬೆಲ್ಜಿಯಂ ರೋಮೆಲು ಲುಕಾಕು ಮತ್ತು ಆಕ್ಸೆಲ್ ವಿಟ್ಸೆಲ್ ಅವರನ್ನು ಕಣಕ್ಕಿಳಿಸಿತು. ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿದ್ದಾಗ ಪೌ ಕುಬಾರ್ಸಿ ಬಾರಿಸಿದ ಲಾಂಗ್-ರೇಂಜ್ ಶಾಟ್ ಅನ್ನು ತಡೆಯುವಲ್ಲಿ ಕೀಪರ್ ಲ್ಯಾಮೆನ್ಸ್ ಎಡವಿದರು. ಜಾರಿದ ಚೆಂಡನ್ನು ಅತ್ಯಂತ ಚುರುಕಾಗಿ ಪಡೆದ ಮೈಕೆಲ್ ಮೆರಿನೊ, ಭರ್ಜರಿ ಗೋಲು ಬಾರಿಸಿ ಸ್ಪೇನ್‌ಗೆ 2-1 ರ ನಿರ್ಣಾಯಕ ಮುನ್ನಡೆ ತಂದುಕೊಟ್ಟರು.

ಕೊನೆಯ ಕ್ಷಣದ ರೋಮಾಂಚನ

ಪಂದ್ಯದ ಇಂಜುರಿ ಟೈಮ್‌ನ (7 ನಿಮಿಷಗಳು) ಕೊನೆಯ ಕ್ಷಣದಲ್ಲಿ ಬೆಲ್ಜಿಯಂಗೆ ಸಮಬಲ ಸಾಧಿಸುವ ಸುವರ್ಣ ಅವಕಾಶವಿತ್ತು. ಸ್ಪೇನ್ ಕೀಪರ್ ಉನೈ ಸಿಮನ್ ಮಾಡಿದ ತಪ್ಪಿನಿಂದಾಗಿ ಗೋಲು ಪೆಟ್ಟಿಗೆ ಖಾಲಿಯಿತ್ತು, ಆದರೆ ಬೆಲ್ಜಿಯಂನ ಅಲೆಕ್ಸಿಸ್ ಸಲೆಮೇಕರ್ಸ್ ಚೆಂಡನ್ನು ತನ್ನ ಸಹ ಆಟಗಾರನಿಗೆ ತಲುಪಿಸುವಲ್ಲಿ ವಿಫಲರಾದರು. ಆ ಮೂಲಕ ಬೆಲ್ಜಿಯಂನ ವಿಶ್ವಕಪ್ ಕನಸು ಭಗ್ನಗೊಂಡಿತು. ಈ ಸೋಲಿನೊಂದಿಗೆ ಬೆಲ್ಜಿಯಂನ ಸ್ಟಾರ್ ಆಟಗಾರರಾದ ತಿಬೌಟ್ ಕೌರ್ಟೊಯಿಸ್, ಕೆವಿನ್ ಡಿ ಬ್ರುಯ್ನೆ ಮತ್ತು ರೊಮೆಲು ಲುಕಾಕು ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಕೊನೆಗೊಂಡಿತೇ ಎಂಬ ಪ್ರಶ್ನೆ ಈಗ ಕಾಡತೊಡಗಿದೆ. ಧೀರ ಹೋರಾಟ ನೀಡಿದ ಬೆಲ್ಜಿಯಂ ಟೂರ್ನಿಯಿಂದ ಹೊರಬಿದ್ದರೆ, ಸ್ಪೇನ್ ಸೆಮಿಫೈನಲ್‌ಗೆ ಮುನ್ನಡೆದಿದೆ(ಏಜೆನ್ಸೀಸ್).