ಲಿಯೋನೆಲ್​ ಮೆಸ್ಸಿ ಎಡಗಾಲಿಗೆ 8,163 ಕೋಟಿ ರೂ. (900 ದಶಲಕ್ಷ ಡಾಲರ್​) ಮೊತ್ತದ ವಿಮೆ ಹೊಂದಿದ್ದಾರೆ 
ಫುಟ್ಬಾಲ್

ಲಿಯೋನೆಲ್​ ಮೆಸ್ಸಿ ಭಾರತಕ್ಕೆ ಬಂದರೂ ಫುಟ್​ಬಾಲ್​ ಪಂದ್ಯ ಆಡದಿರುವುದಕ್ಕೆ ಹೀಗಿದೆ ಕಾರಣ...

ಬೆಂಗಳೂರು: ಅರ್ಜೆಂಟೀನಾದ ಫುಟ್​ಬಾಲ್​ ಸೂಪರ್​ಸ್ಟಾರ್​ ಲಿಯೋನೆಲ್​ ಮೆಸ್ಸಿ (Lionel Messi) ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡು ಫುಟ್​ಬಾಲ್​ (Football) ಅಭಿಮಾನಿಗಳಿಗೆ ಪುಳಕ ನೀಡಿದರು. ಆದರೆ ಅವರು ಭಾರತದ 4 ನಗರಗಳಿಗೆ ಭೇಟಿ ನೀಡಿದರೂ, ಎಲ್ಲೂ ಪ್ರದರ್ಶನ ಫುಟ್​ಬಾಲ್​ ಪಂದ್ಯಗಳಲ್ಲೂ ಆಡಲಿಲ್ಲ. ಅದಕ್ಕೆ ವಿಶೇಷವಾದ ಕಾರಣವೊಂದಿದೆ!
38 ವರ್ಷದ ಲಿಯೋನೆಲ್​ ಮೆಸ್ಸಿ ತಮ್ಮ ಎಡಗಾಲಿಗೆ 8,163 ಕೋಟಿ ರೂ. (900 ದಶಲಕ್ಷ ಡಾಲರ್​) ಮೊತ್ತದ ವಿಮೆ (foot insurance) ಹೊಂದಿದ್ದಾರೆ. ಇದರ ಷರತ್ತುಗಳ ಅನ್ವಯ ಅವರು, ಭಾರತದಲ್ಲಿ ಪ್ರದರ್ಶನ ಫುಟ್​ಬಾಲ್​ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ವಿಮಾ ಕರಾರಿನ ಅನ್ವಯ ಅವರು, ಕ್ಲಬ್​ ಮತ್ತು ದೇಶದ ಪರ ಹೊರತಾಗಿ ಇತರ ಪಂದ್ಯಗಳನ್ನು ಆಡುವಂತಿಲ್ಲ.
ವಿಮಾನ ವಿಳಂಬ, ಮೋದಿ ಭೇಟಿ ರದ್ದು
ಸೋಮವಾರ ಪ್ರತಿಕೂಲ ಹವಾಮಾನದಿಂದಾಗಿ ಮುಂಬೈನಿಂದ ದೆಹಲಿಗೆ ಮೆಸ್ಸಿ ಅವರ ವಿಮಾನ ಪ್ರಯಾಣ ವಿಳಂಬಗೊಂಡಿತು. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಮೆಸ್ಸಿ ಭೇಟಿಯಾಗುವ ಕಾರ್ಯಕ್ರಮ ರದ್ದುಗೊಂಡಿತು. ಮಧ್ಯಾಹ್ನ ಮೋದಿ&ಮೆಸ್ಸಿ 21 ನಿಮಿಷಗಳ ಭೇಟಿ ಸಮಯ ನಿಗದಿಯಾಗಿತ್ತು. ಆದರೆ ಮೋದಿ ವಿದೇಶಿ ಪ್ರವಾಸಕ್ಕೆ ತೆರಳಬೇಕಿದ್ದ ಕಾರಣ, ಈ ಭೇಟಿ ರದ್ದುಗೊಂಡಿತು. ಬೆಳಗ್ಗೆ 10.45ಕ್ಕೆ ದೆಹಲಿ ತಲುಪಬೇಕಿದ್ದ ಮೆಸ್ಸಿ ಅವರ ಬಾಡಿಗೆ ವಿಮಾನ, ಮಂಜಿನ ವಾತಾವರಣದಿಂದಾಗಿ ಸರಿಯಾದ ಸಮಯದಲ್ಲಿ ಹಾರಾಟ ನಡೆಸದೆ ಮಧ್ಯಾಹ್ನ 2.30ಕ್ಕೆ ತಲುಪಿತು. ಕ್ರಿಕೆಟಿಗ ವಿರಾಟ್​ ಕೊಹ್ಲಿ ಮತ್ತು ಮೆಸ್ಸಿ ಅವರ ಬಹುನಿರೀತ ಭೇಟಿಯೂ ನಡೆಯಲಿಲ್ಲ.