FIFA WorldCup: ಸತತ 3ನೇ ಬಾರಿ ಉಪಾಂತ್ಯಕ್ಕೇರಿದ ಫ್ರಾನ್ಸ್; 8ರ ಘಟ್ಟದಲ್ಲಿ ಹೊರಬಿದ್ದ ಮೊರಾಕ್ಕೊ
ಬೋಸ್ಟನ್: ಲೆಸ್ ಬ್ಲೂಸ್ ಖ್ಯಾತಿಯ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ನಲ್ಲಿ (FIFA WorldCup) ಸತತ ಮೂರನೇ ಬಾರಿ ಉಪಾಂತ್ಯ ಪ್ರವೇಶಿಸಿದೆ. ಹಾಲಿ ರನ್ನರ್ಅಪ್ ಫ್ರಾನ್ಸ್ ತಂಡ ಮೊದಲ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮೊರಾಕ್ಕೊ ಎದುರು 2-0 ಅಂತರದಿಂದ ಗೆದ್ದು ಈ ಸಾಧನೆ ಮೆರೆದಿದೆ. ಸ್ಟಾರ್ ಆಟಗಾರ ನಾಯಕ (Kylian Mbappe) ಕೈಲಿಯಾನ್ ಎಂಬಾಪೆ (60ನೇ ನಿಮಿಷ) ಪಂದ್ಯದ ಮೊದಲ ಗೋಲು ಬಾರಿಸಿ ಫ್ರಾನ್ಸ್ಗೆ ಮುನ್ನಡೆ ಒದಗಿಸಿದ್ದಲ್ಲದೆ, ಔಸ್ಮಾನ್ ಡೆಂಬೆಲ್ (66) ಸಿಡಿಸಿದ ಪಂದ್ಯದ 2ನೇ ಗೋಲಿಗೂ ನೆರವಾಗಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಳೆದ ಬಾರಿ ಸೆಮಿಫೈನಲ್ಗೇರಿ ಇತಿಹಾಸ ಬರೆದಿದ್ದ ಅಟ್ಲಾಸ್ ಲಯನ್ಸ್ ಖ್ಯಾತಿಯ ಮೊರಾಕ್ಕೊ ಈ ಬಾರಿ ಎಂಟರ ಘಟ್ಟದಲ್ಲೇ ಹೊರಬಿದ್ದಿತು. ಇದರೊಂದಿಗೆ ಟೂರ್ನಿಯಲ್ಲಿ ಆಫ್ರಿಕಾ ಖಂಡದ ಸವಾಲು ಅಂತ್ಯಗೊಂಡಿದೆ. ಎರಡು ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡ ಸೆಮಿಫೈನಲ್ನಲ್ಲಿ ಬೆಲ್ಜಿಯಂ ಅಥವಾ ಸ್ಪೇನ್ ಸವಾಲು ಎದುರಿಸಲಿದೆ.
ಭಾರತೀಯ ಕಾಲಮಾನ ಪ್ರಕಾರ ಗುರುವಾರ ತಡರಾತ್ರಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಒಂದೂ ಗೋಲು ದಾಖಲಾಗಲಿಲ್ಲ. 28ನೇ ನಿಮಿಷದಲ್ಲಿ ಮೊರಾಕ್ಕೊ ಡಿಫೆಂಡರ್ ನೌಸೇರ್ ಮಜರೌಯಿ ಮಾಡಿದ ಫೌಲ್ನಿಂದ ಡಿಡಿಯರ್ ಡಿಶಾಂಪ್ಸ್ ತರಬೇತಿಯ ಫ್ರಾನ್ಸ್ಗೆ ಸಿಕ್ಕ ಪೆನಾಲ್ಟಿ ಕಿಕ್ನಲ್ಲಿ ಎಂಬಾಪೆ ಗೋಲು ಬಾರಿಸದೆ ವ್ಯರ್ಥಗೊಳಿಸಿದರು. ಎಂಬಾಪೆ ಬಲ ಕಾರ್ನರ್ ಕಡೆಗೆ ಒದ್ದ ಚೆಂಡನ್ನು ಮೊರಾಕ್ಕೊ ಗೋಲು ಕೀಪರ್ ಯಾಸಿನ್ ಬೌನೌ ತಡೆದರು.
ಕೊನೆಗೆ ಪಂದ್ಯದಲ್ಲಿ ಭರ್ತಿ ಒಂದು ಗಂಟೆಯ ಆಟದ ನಂತರ ಎಂಬಾಪೆ ಬಾರಿಸಿದ ಗೋಲಿನಿಂದಲೇ ಫ್ರಾನ್ಸ್ ಖಾತೆ ತೆರೆಯಿತು. ಆರೇ ನಿಮಿಷಗಳ ಅಂತರದಲ್ಲಿ ಎಂಬಾಪೆ ನೀಡಿದ ಪಾಸ್ನಲ್ಲಿ ಡೆಂಬೆಲ್ ಕೂಡ ಗೋಲು ಬಾರಿಸಿ ಫ್ರಾನ್ಸ್ಗೆಲುವಿನ ಅಂತರ ಹಿಗ್ಗಿಸಿದರು. ಇವೆರಡೂ ಗೋಲುಗಳ ವೇಳೆ ಗೋಲು ಪೆಟ್ಟಿಗೆಯ ಕಾರ್ನರ್ನಿಂದ ಒಳನುಗ್ಗಿದ ಚೆಂಡನ್ನು ತಡೆಯಲು ಮೊರಾಕ್ಕೊ ಗೋಲಿ ಯಾಸಿನ್ ಬೌನೌ ಅಸಹಾಯಕರಾಗಿದ್ದರು.
ಬಲ ಪಾದದ ಗಾಯದ ಸಮಸ್ಯೆಯ ನಡುವೆ ಕಣಕ್ಕಿಳಿದ 27 ವರ್ಷದ ಎಂಬಾಪೆ, ಪಂದ್ಯದ 77ನೇ ನಿಮಿಷದಲ್ಲಿ ಬದಲಿ ಆಟಗಾರನಿಗೆ ಸ್ಥಾನ ಬಿಟ್ಟುಕೊಟ್ಟು ಹೊರನಡೆದರು. ಪೆನಾಲ್ಟಿ ಕಿಕ್ನಲ್ಲಿ ಗೋಲು ತಪ್ಪಿದ ಬಳಿಕ ನಮ್ಮ ನಾಯಕ ಎಂಬಾಪೆ ಗೆಲುವಿಗೆ ಹೆಚ್ಚಿನ ತುಡಿತ ಹೊಂದಿದ್ದರು ಎಂದು ಡೆಂಬೆಲ್ ಪಂದ್ಯದ ಬಳಿಕ ತಿಳಿಸಿದರು. ಫ್ರಾನ್ಸ್ ತಂಡ 2022ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಮೊರಾಕ್ಕೊ ಎದುರು ಇಷ್ಟೇ ಅಂತರದಿಂದ ಗೆದ್ದಿತ್ತು. ಫ್ರಾನ್ಸ್ ಈಗ ಸತತ 3 ವಿಶ್ವಕಪ್ ಫೈನಲ್ಗೇರಿದ 3ನೇ ದೇಶ ಎನಿಸುವ ಅವಕಾಶ ಹೊಂದಿದೆ. ಬ್ರೆಜಿಲ್ ಮತ್ತು ಜರ್ಮನಿ ಈ ಹಿಂದೆ ಸತತ 3 ಫೈನಲ್ಗೇರಿರುವ ತಂಡಗಳಾಗಿವೆ.
ಮೊರಾಕ್ಕೊಗೆ ಪಂದ್ಯದ ಮೊದಲಾರ್ಧ ಮುಕ್ತಾಯಕ್ಕೆ ಮುನ್ನ ಗೋಲು ಗಳಿಸುವ ಅತ್ಯುತ್ತಮ ಅವಕಾಶವೊಂದು ಲಭಿಸಿತ್ತು. ಆದರೆ ಅದ್ರ್ ಹಕಿಮಿ ಗೋಲು ಬಾಕ್ಸ್ನ ಹೊರಭಾಗದಿಂದ ಮಾಡಿದ ಫ್ರೀ ಕಿಕ್ ಗುರಿ ಸೇರಲಿಲ್ಲ. ಬಳಿಕ 82ನೇ ನಿಮಿಷದಲ್ಲಿ ಮೊರಾಕ್ಕೊಗೆ ಸೋಲಿನ ಅಂತರ ತಗ್ಗಿಸಿಕೊಳ್ಳುವ ಅವಕಾಶ ಲಭಿಸಿದರೂ, ಅದು ವ್ಯರ್ಥಗೊಂಡಿತು. ಮೊರಾಕ್ಕೊ ತಂಡ ತನ್ನ ಪ್ರಮುಖ ಸ್ಟ್ರೆಕರ್ ಹಾಗೂ ಟೂರ್ನಿಯಲ್ಲಿ ಈಗಾಗಲೆ 3 ಗೋಲು ಸಿಡಿಸಿದ್ದ ಇಸ್ಮಾಯಿಲ್ ಸೈಬಾರಿ ಗೈರಿನಲ್ಲಿ ಕಣಕ್ಕಿದಿತ್ತು. ಅವರು ಗಾಯದಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದರು.
*ನಾವು ವಿಶ್ವಕಪ್ ಗೆದ್ದ ನಂತರವಷ್ಟೇ ರಿಲ್ಯಾಕ್ಸ್ ಆಗಲಿದ್ದೇವೆ. ಅಲ್ಲಿಯವರೆಗೆ ನಮ್ಮ ಹೋರಾಟ ಇದ್ದೇ ಇರುತ್ತದೆ. ನಾವೀಗ ಸೆಮಿೈನಲ್ಗೇರಿರುವ ಬಗ್ಗೆ ಖುಷಿ ಇದೆ. ಆದರೆ ಟೂರ್ನಿಯಲ್ಲಿ ಇನ್ನೂ ದೂರ ಸಾಗಬೇಕಿದೆ.
| ಕೈಲಿಯಾನ್ ಎಂಬಾಪೆ, ಫ್ರಾನ್ಸ್ ನಾಯಕ
ಮೆಸ್ಸಿ ಎದುರು ಎಂಬಾಪೆ ಮೇಲುಗೈ
ಕೈಲಿಯಾನ್ ಎಂಬಾಪೆ ಹಾಲಿ ವಿಶ್ವಕಪ್ನಲ್ಲಿ 8ನೇ ಗೋಲು ಬಾರಿಸುವುದರೊಂದಿಗೆ, ಅರ್ಜೆಂಟೀನಾ ತಾರೆ ಲಿಯೋನೆಲ್ ಮೆಸ್ಸಿ ಜತೆಗೆ ಸಮಬಲ ಸಾಧಿಸಿದ್ದು, ಗೋಲ್ಡನ್ ಬೂಟ್ ರೇಸ್ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಮೆಸ್ಸಿ 8 ಗೋಲಿನೊಂದಿಗೆ ಇನ್ನೊಂದು ಗೋಲಿಗಷ್ಟೇ ನೆರವಾಗಿದ್ದರೆ, ಎಂಬಾಪೆ ಇತರ 3 ಗೋಲಿಗೆ ನೆರವಾಗಿರುವುದರಿಂದ ಮೆಸ್ಸಿಗಿಂತ ಮೇಲಿದ್ದಾರೆ. ವಿಶ್ವಕಪ್ನಲ್ಲಿ ಒಟ್ಟಾರೆ 20ನೇ ಗೋಲು ಬಾರಿಸಿರುವ ಎಂಬಾಪೆ, ಮೆಸ್ಸಿಗಿಂತ (21) ಕೇವಲ 1 ಗೋಲು ದೂರವಿದ್ದಾರೆ.
*45: ಫ್ರಾನ್ಸ್ ಈಗ ಫಿಫಾ ವಿಶ್ವಕಪ್ನಲ್ಲಿ ಗರಿಷ್ಠ ಗೆಲುವು ಕಂಡ ತಂಡಗಳ ಪಟ್ಟಿಯಲ್ಲಿ ಇಟಲಿ ಜತೆ ಸಮಬಲ ಸಾಧಿಸಿದೆ. ಬ್ರೆಜಿಲ್ (79), ಜರ್ಮನಿ (70), ಅರ್ಜೆಂಟೀನಾ (52) ಮುಂಚೂಣಿಯಲ್ಲಿರುವ ತಂಡಗಳಾಗಿವೆ.
ಸತತ 3 ಸೆಮೀಸ್ಗೇರಿದ 3ನೇ ತಂಡ
ಫ್ರಾನ್ಸ್ ಫಿಫಾ ವಿಶ್ವಕಪ್ನಲ್ಲಿ ಸತತ 3 ಬಾರಿ (2018, 2022, 2026) ಉಪಾಂತ್ಯಕ್ಕೇರಿದ 3ನೇ ತಂಡ ಎನಿಸಿದೆ. ಜರ್ಮನಿ (2002-2014ರಲ್ಲಿ ಸತತ 4, 1982-1990ರಲ್ಲಿ ಸತತ 3) ಮತ್ತು ಬ್ರೆಜಿಲ್ (1994-2002ರಲ್ಲಿ ಸತತ 3) ಹಿಂದಿನ 2 ತಂಡಗಳಾಗಿವೆ. ಫ್ರಾನ್ಸ್ ಒಟ್ಟಾರೆ 8ನೇ ಬಾರಿ ಸೆಮಿಫೈನಲ್ಗೇರಿ ಬ್ರೆಜಿಲ್ ಸಾಧನೆ ಸರಿಗಟ್ಟಿದೆ. ಜರ್ಮನಿ (12) ಅಗ್ರಸ್ಥಾನದಲ್ಲಿದೆ.