FIFA WorldCup: ಜೊನಾಥನ್ ಡೇವಿಡ್ ಹ್ಯಾಟ್ರಿಕ್ ಗೋಲು; ಕೆನಡಾಗೆ ಭರ್ಜರಿ ಗೆಲುವು
ವ್ಯಾಂಕೋವರ್: ಜೊನಾಥನ್ ಡೇವಿಡ್ (29, 45+3, 90+2ನೇ ನಿಮಿಷ) ಸಿಡಿಸಿದ ಹ್ಯಾಟ್ರಿಕ್ ಗೋಲಿನ ಬಲದಿಂದ ಸಹ-ಆತಿಥೇಯ ಕೆನಡಾ ತಂಡ ಫಿಫಾ ವಿಶ್ವಕಪ್ (FIFA WorldCup) ಇತಿಹಾಸದಲ್ಲಿ ಮೊಟ್ಟಮೊದಲ ಗೆಲುವಿನ ಸಂಭ್ರಮ ಕಂಡಿದೆ. ಕತಾರ್ ವಿರುದ್ಧ ಗುರುವಾರ ಬೆಳಗ್ಗೆ (ಭಾರತೀಯ ಕಾಲಮಾನ) ನಡೆದ ಬಿ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಗೋಲಿನ ಮಳೆ ಹರಿಸಿದ ಕೆನಡಾ 6-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ನಾಕೌಟ್ ಪ್ರವೇಶವನ್ನು ಬಹುತೇಕ ಖಾತ್ರಿಪಡಿಸಿಕೊಂಡಿದೆ. ಕೆನಡಾ ಮೊದಲ ಪಂದ್ಯದಲ್ಲಿ ಬೋಸ್ನಿಯಾ ಎದುರು ಡ್ರಾಕ್ಕೆ ತೃಪ್ತಿಪಟ್ಟಿತ್ತು.
ಸೈಲ್ ಲ್ಯಾರಿನ್ ಸಿಡಿಸಿದ ಟೂರ್ನಿಯ 2ನೇ ಗೋಲಿನ ಬಲದಿಂದ ಕೆನಡಾ 16ನೇ ನಿಮಿಷದಲ್ಲಿ ಮೊದಲ ಬಾರಿ ಮುನ್ನಡೆ ಸಾಧಿಸಿತು. ಬಳಿಕ ಜೊನಾಥನ್ ಡೇವಿಡ್ 29ನೇ ನಿಮಿಷ ಮತ್ತು ಮೊದಲಾರ್ಧದ ಇಂಜುರಿ ಸಮಯದಲ್ಲಿ ಗೋಲು ಬಾರಿಸಿ ಕೆನಡಾ ಮುನ್ನಡೆಯನ್ನು 3-0ಗೆ ಹಿಗ್ಗಿಸಿದರು. ಇಸ್ಮಾಯಿಲ್ ಕೋನೆಗೆ ಬದಲಿಗನಾಗಿ ಬಂದ ನಾಥನ್ ಸಾಲಿಬಾ (64) ದ್ವೀತಿಯಾರ್ಧದಲ್ಲಿ ಮುನ್ನಡೆ ವಿಸ್ತರಿಸಿದರೆ, ಮೊಹಮ್ಮದ್ ಮನೈ 75ನೇ ನಿಮಿಷದಲ್ಲಿ ಮಾಡಿದ ಸ್ವಗೋಲಿನ ಪ್ರಮಾದ ಕತಾರ್ಗೆ ಮತ್ತಷ್ಟು ಹೊಡೆತ ನೀಡಿತು.
ಕೊನೆಗೆ ಜೊನಾಥನ್ ಪಂದ್ಯದ ಕೊನೆಯ ಇಂಜುರಿ ಸಮಯದಲ್ಲಿ ತನ್ನ 3ನೇ ಗೋಲು ಬಾರಿಸಿದರು. ಈ ಮೂಲಕ ಲಿಯೋನೆಲ್ ಮೆಸ್ಸಿ ಬಳಿಕ ಟೂರ್ನಿಯ 2ನೇ ಹ್ಯಾಟ್ರಿಕ್ ಸಾಧಕರೆನಿಸಿದರು. ಕೆನಡಾ ವಿಶ್ವಕಪ್ನಲ್ಲಿ ಆಡಿದ ಈ ಹಿಂದಿನ 7 ಪಂದ್ಯಗಳಲ್ಲೂ ಗೆದ್ದಿರಲಿಲ್ಲ. ಅಲ್ಲದೆ ಈ 7 ಪಂದ್ಯಗಳಲ್ಲಿ ಒಟ್ಟು 3 ಗೋಲು ಮಾತ್ರ ಸಿಡಿಸಿತ್ತು.
ಕತಾರ್ಗೆ ಅವಳಿ ರೆಡ್ ಕಾರ್ಡ್
ಕಳೆದ ಆವೃತ್ತಿಯ ಆತಿಥೇಯ ಕತಾರ್ ತಂಡ ಪಂದ್ಯದಲ್ಲಿ ಅವಳಿ ರೆಡ್ ಕಾರ್ಡ್ ಪಡೆದು, 9 ಆಟಗಾರರೊಂದಿಗೆ ಪಂದ್ಯ ಮುಗಿಸಿತು. ಹೋಮಮ್ ಅಹಮದ್ 33 ಮತ್ತು ಅಸಿಮ್ ಮಡಿಬೊ 51ನೇ ನಿಮಿಷದಲ್ಲಿ ರೆಡ್ ಕಾರ್ಡ್ ಪಡೆದು ಹೊರನಡೆದ ಕಾರಣ, ಕತಾರ್ ಕೊನೇ 40ಕ್ಕೂ ಹೆಚ್ಚು ನಿಮಿಷ 9 ಆಟಗಾರರೊಂದಿಗೆ ಆಡಿತು. ಅಸಿಮ್ ರೆಡ್ ಕಾರ್ಡ್ ಪಡೆಯಲು ಕಾರಣವಾದ ಆಕ್ರಮಣಕಾರಿ ವರ್ತನೆಯಿಂದ ಕೆನಡಾ ಮಿಡ್ಫೀಲ್ಡರ್ ಇಸ್ಮಾಯಿಲ್ ಕೋನೆ ಎಡಗಾಲಿಗೆ ಗಂಭೀರ ಗಾಯವಾಗಿ ಮೈದಾನ ತೊರೆದರು. ಕೋನೆ ಕಾಲಿನ ಎರಡು ಮೂಳೆ ಮುರಿದಿರುವುದು ಬಳಿಕ ದೃಢಪಟ್ಟಿದೆ.
*ಜೊನಾಥನ್ ಡೇವಿಡ್ (29, 45+3, 90+2)
*ಮೊಹಮ್ಮದ್ ಮನೈ (75, ಸ್ವಗೋಲು)
*1: ಜೊನಾಥನ್ ಡೇವಿಡ್ ಫಿಫಾ ವಿಶ್ವಕಪ್ ಪಂದ್ಯವೊಂದರಲ್ಲಿ ಒಂದಕ್ಕಿಂತ ಹೆಚ್ಚು ಗೋಲು ಸಿಡಿಸಿದ ಮೊದಲ ಕೆನಡಾ ಆಟಗಾರರೆನಿಸಿದರು.
*5: ಕೆನಡಾ ಫಿಫಾ ವಿಶ್ವಕಪ್ ಪಂದ್ಯವೊಂದರಲ್ಲಿ 5ಕ್ಕಿಂತ ಹೆಚ್ಚು ಗೋಲು ಸಿಡಿಸಿದ ಯುರೋಪ್-ಉತ್ತರ ಅಮೆರಿಕ ಹೊರಗಿನ ಮೊದಲ ದೇಶ ಎನಿಸಿತು.
ಆಕ್ರಮಣಕಾರಿ ಆಟಕ್ಕೆ ಸಾಯಾದ ಕತಾರ್-ಕೆನಡಾ ನಡುವಿನ ಪಂದ್ಯದ ಅಂತಿಮ ಸೀಟಿ ಮೊಳಗಿದ ಬಳಿಕವೂ ಉಭಯ ತಂಡಗಳ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ನಡುವೆ ಜಗಳ ನಡೆಯಿತು. ಕೆನಡಾ ಗೆಲುವಿನ ಬೆನ್ನಲ್ಲೇ ಉಭಯ ತಂಡಗಳ ಸದಸ್ಯರು ಕೈಕೈ ಮಿಲಾಯಿಸುವ ತನಕ ಮುನ್ನುಗ್ಗಿದರು. ಆಗ ಕೆಲ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಬಂದು ಗಲಾಟೆ ಬಿಡಿಸಿದರು.