ಸತತ 3ನೇ ಬಾರಿ ಇಟಲಿ ಕೈತಪ್ಪಿದ ಫಿಫಾ ವಿಶ್ವಕಪ್ ಟಿಕೆಟ್!
ಜೆನಿಕಾ (ಬೋಸ್ನಿಯಾ): ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಇಟಲಿ (Italy) ತಂಡ ಸತತ 3ನೇ ಬಾರಿ ಫಿಫಾ ವಿಶ್ವಕಪ್ಗೆ (Fifa World Cup) ಅರ್ಹತೆ ಪಡೆಯಲು ವಿಫಲವಾಗಿದೆ. ಈ ಬಾರಿ ಫಿಫಾ ವಿಶ್ವಕಪ್ನಲ್ಲಿ ಆಡುವ ಒಟ್ಟು ತಂಡಗಳ ಸಂಖ್ಯೆ 48ಕ್ಕೆ ಏರಿಕೆಯಾಗಿರುವ ನಡುವೆಯೂ ಇಟಲಿ ಅರ್ಹತೆ ಪಡೆಯದಿರುವುದು ಫುಟ್ಬಾಲ್ ಜಗತ್ತಿನ ಅಚ್ಚರಿಯ ಬೆಳವಣಿಗೆಯಾಗಿದೆ.
ಫಿಫಾ ವಿಶ್ವ ರ್ಯಾಂಕಿಂಗ್ನಲ್ಲಿ ಸದ್ಯ 12ನೇ ಸ್ಥಾನದಲ್ಲಿರುವ ಇಟಲಿ ತಂಡ, ಮಂಗಳವಾರ ನಡೆದ ಯುರೋಪಿಯನ್ ಅರ್ಹತಾ ಟೂರ್ನಿಯ ಕೊನೆಯ ಪ್ಲೇಆಫ್ ಪಂದ್ಯದಲ್ಲಿ 66ನೇ ರ್ಯಾಂಕ್ನ ಬೋಸ್ನಿಯಾ ಮತ್ತು ಹರ್ಜೆಗೋವಿನಾ ದೇಶದ ಎದುರು ಪೆನಾಲ್ಟಿ ಶೂಟೌಟ್ನಲ್ಲಿ 1-4ರಿಂದ ಪರಾಭವಗೊಂಡಿತು.
ಪಂದ್ಯದಲ್ಲಿ 15ನೇ ನಿಮಿಷದಲ್ಲೇ ಮುನ್ನಡೆ ಸಾಧಿಸಿದ ಇಟಲಿ, 41ನೇ ನಿಮಿಷದಲ್ಲಿ ಅಲೆಸಾಂಡ್ರೊ ಬಸ್ಟೋನಿ ಕೆಂಪು ಕಾರ್ಡ್ ಪಡೆದು ಮೈದಾನ ತೊರೆದ ಬಳಿಕ 10 ಆಟಗಾರರೊಂದಿಗೆ ಆಟ ಮುಂದುವರಿಸಿತು. ಬೋಸ್ನಿಯಾ 79ನೇ ನಿಮಿಷದಲ್ಲಿ ಸಮಬಲದ ಗೋಲು ಬಾರಿಸಿ ಪಂದ್ಯವನ್ನು ಪೆನಾಲ್ಟಿ ಶೂಟೌಟ್ಗೆ ವಿಸ್ತರಿಸಿತು. ಇಟಲಿ ಈ ಮುನ್ನ 2018 ಮತ್ತು 2022ರ ಫಿಫಾ ವಿಶ್ವಕಪ್ಗೂ ಅರ್ಹತೆ ಗಳಿಸಲು ವಿಫಲವಾಗಿತ್ತು. ಅದಕ್ಕೆ ಮುನ್ನ 1958ರ ವಿಶ್ವಕಪ್ಗೂ ಅರ್ಹತೆ ಗಳಿಸಿರಲಿಲ್ಲ. ಇಟಲಿ ಈ ಹಿಂದೆ 1934, 1938, 1982 ಮತ್ತು 2006ರಲ್ಲಿ ಫಿಫಾ ವಿಶ್ವಕಪ್ ಗೆದ್ದಿತ್ತು.
ಬೋಸ್ನಿಯಾ 2014ರ ಬಳಿಕ ಮತ್ತೊಮ್ಮೆ ಫಿಫಾ ವಿಶ್ವಕಪ್ ಅರ್ಹತೆ ಸಂಪಾದಿಸಿದೆ. ಯುರೋಪಿಯನ್ ಪ್ಲೇಆಫ್ನ ಇತರ ಪಂದ್ಯಗಳಲ್ಲಿ ಸ್ವೀಡನ್, ಟರ್ಕಿ, ಜೆಕ್ ಗಣರಾಜ್ಯವೂ ಫಿಫಾ ವಿಶ್ವಕಪ್ ಅರ್ಹತೆ ಗಳಿಸಿತು. ಯುರೋಪ್ ಅರ್ಹತಾ ಸುತ್ತಿನ ಕೊನೆಯ 4 ಸ್ಥಾನಗಳಿಗಾಗಿ 8 ತಂಡಗಳು ಪೈಪೋಟಿ ನಡೆಸಿದವು.
ಫಿಫಾ ವಿಶ್ವಕಪ್ ಜೂನ್ 11ರಿಂದ ಜುಲೈ 19ರವರೆಗೆ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾದ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. 48 ತಂಡಗಳನ್ನು ತಲಾ 4ರಂತೆ 12 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಮತ್ತು 3ನೇ ಸ್ಥಾನ ಪಡೆದ 8 ಅತ್ಯುತ್ತಮ ತಂಡಗಳು ನಾಕೌಟ್ ಹಂತಕ್ಕೇರಲಿವೆ.
ಇರಾನ್ಗೆ ಕೊನೆಯ ಮತ್ತು 48ನೇ ಸ್ಪಾಟ್
ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಸಮರ ಕೊನೆಗೂ ಮುಕ್ತಾಯಗೊಂಡಿದ್ದು, ಟೂರ್ನಿಯಲ್ಲಿ ಆಡುವ ಎಲ್ಲ 48 ತಂಡಗಳು ಅಂತಿಮಗೊಂಡಿವೆ. ನಾರ್ಥರ್ನ್ ಮೆಕ್ಸಿಕೋದ ಮಾಂಟೆರ್ರಿಯಲ್ಲಿ ಮಂಗಳವಾರ ನಡೆದ ಪ್ಲೇಆಫ್ ಪಂದ್ಯದಲ್ಲಿ ಬೊಲಿವಿಯಾ ಎದುರು 2-1 ಗೋಲುಗಳಿಂದ ಗೆದ್ದ ಇರಾನ್ ಟೂರ್ನಿಯ 48ನೇ ಹಾಗೂ ಕೊನೆಯ ಸ್ಥಾನವನ್ನು ಒಲಿಸಿಕೊಂಡಿತು. 2023ರ ಸೆಪ್ಟೆಂಬರ್ 7ರಂದು ಅರ್ಹತಾ ಸುತ್ತಿನ ಪಂದ್ಯಗಳು ಆರಂಭಗೊಂಡಿದ್ದವು.
ಎ: ಮೆಕ್ಸಿಕೋ, ಜೆಕ್ ಗಣರಾಜ್ಯ, ದಣ ಆಫ್ರಿಕಾ, ದಣ ಕೊರಿಯಾ.
ಬಿ: ಕೆನಡಾ, ಬೋಸ್ನಿಯಾ-ಹರ್ಜೆಗೋವಿನಾ, ಕತಾರ್, ಸ್ವಿರ್ಜಲೆಂಡ್.
ಸಿ: ಬ್ರೆಜಿಲ್, ಹೈಟಿ, ಮೊರಾಕೊ, ಸ್ಕಾಟ್ಲೆಂಡ್.
ಡಿ: ಆಸ್ಟ್ರೆಲಿಯಾ, ಪರಾಗ್ವೆ, ಟರ್ಕಿ, ಅಮೆರಿಕ.
ಇ: ಕುರಾಕಾವೊ, ಈಕ್ವಡಾರ್, ಜರ್ಮನಿ, ಐವರಿ ಕೋಸ್ಟ್.
ಎಫ್: ನೆದರ್ಲೆಂಡ್, ಜಪಾನ್, ಸ್ವೀಡನ್, ಟುನೀಷಿಯಾ.
ಜಿ: ಬೆಲ್ಜಿಯಂ, ಈಜಿಪ್ಟ್, ಇರಾನ್, ನ್ಯೂಜಿಲೆಂಡ್.
ಎಚ್: ಕೇಪ್ ವರ್ಡೆ, ಸೌದಿ ಅರೇಬಿಯಾ, ಸ್ಪೇನ್, ಉರುಗ್ವೆ.
ಐ: :ಫ್ರಾನ್ಸ್, ನಾರ್ವೆ, ಸೆನೆಗಲ್, ಇರಾಕ್.
ಜೆ: ಅಲ್ಜೀರಿಯಾ, ಅರ್ಜೆಂಟೀನಾ, ಆಸ್ಟ್ರಿಯಾ, ಜೋರ್ಡನ್.
ಕೆ: ಕೊಲಂಬಿಯಾ, ಜಮೈಕಾ, ಪೋರ್ಚುಗಲ್, ಉಜ್ಬೇಕಿಸ್ತಾನ.
ಎಲ್: ಕ್ರೊವೇಷಿಯಾ, ಇಂಗ್ಲೆಂಡ್, ಘಾನಾ, ಪನಾಮ.