Football: ಭಾರತಕ್ಕೆ ಕಿರಿಯರ ಏಷ್ಯನ್ ಕಪ್ ಅರ್ಹತೆ
ಅಹಮದಾಬಾದ್: ಭಾರತದ ಕಿರಿಯರ ಫುಟ್ಬಾಲ್ ತಂಡ 17 ವಯೋಮಿತಿ ಬಾಲಕರ ಎಎಫ್ಸಿ ಏಷ್ಯನ್ ಕಪ್ಗೆ (2026 AFC U17 Asian Cup) ಅರ್ಹತೆ ಸಂಪಾದಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಅರ್ಹತಾ ಸುತ್ತಿನಲ್ಲಿ ಇರಾನ್ ವಿರುದ್ಧದ ಡಿ ಗುಂಪಿನ ಕೊನೇ ಪಂದ್ಯದಲ್ಲಿ 2-1 ಗೋಲುಗಳಿಂದ ಗೆಲುವು ದಾಖಲಿಸುವ ಮೂಲಕ ಭಾರತ ಈ ಸಾಧನೆ ಮಾಡಿದೆ. ಹಿರಿಯರ ಫುಟ್ಬಾಲ್ ತಂಡ ಪರದಾಡುತ್ತಿರುವ ನಡುವೆ ಕಿರಿಯರ ಈ ಸಾಧನೆ ಭಾರತೀಯ ಫುಟ್ಬಾಲ್ಗೆ ಹೊಸ ಪುಳಕ ನೀಡಿದೆ.
ಇಕೆಎ ಅರೆನಾದಲ್ಲಿ (EKA Arena) ಭಾನುವಾರ ನಡೆದ ಪಂದ್ಯದಲ್ಲಿ ಡಲ್ಲಲ್ಮುವೊನ್ ಗಾಂಗ್ಟೆ (45+1 ನಿಮಿಷ) ಮತ್ತು ಗುನ್ಲೈಬಾ ವಾಂಗ್ಕೀರಕ್ಪಮ್ (52) ಸಿಡಿಸಿದ ಗೋಲಿನ ನೆರವಿನಿಂದ ಭಾರತ ಗೆಲುವು ಸಾಧಿಸಿತು. ಇದಕ್ಕೆ ಮುನ್ನ ಅಮಿರೆಜಾ ವಲಿಪೂರ್ 19ನೇ ನಿಮಿಷದಲ್ಲಿ ಸಾಧಿಸಿದ ಗೋಲಿನಿಂದ ಇರಾನ್ ಆರಂಭಿಕ ಮುನ್ನಡೆ ಸಾಧಿಸಿತ್ತು.
ಮುಂದಿನ 17 ವಯೋಮಿತಿ ಏಷ್ಯನ್ ಕಪ್ 2026ರ ಮೇ 7ರಿಂದ 24ರವರೆಗೆ ಸೌದಿ ಅರೇಬಿಯಾದಲ್ಲಿ ನಡೆಯಲಿದ್ದು, ಭಾರತ ತಂಡ 10ನೇ ಬಾರಿ ಟೂರ್ನಿಯಲ್ಲಿ ಆಡಲಿದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಆಡಲಿವೆ.
ಗುಂಪಿನಲ್ಲಿ 7 ಅಂಕ ಹೊಂದಿದ್ದ ಇರಾನ್ ಅಜೇಯವಾಗಿತ್ತು ಮತ್ತು ಪಂದ್ಯದಲ್ಲಿ ಫೇವರಿಟ್ ಆಗಿ ಕಣಕ್ಕಿಳಿದಿತ್ತು. ಇರಾನ್ ಡ್ರಾ ಸಾಧಿಸಿದರೂ ಮುನ್ನಡೆಯುತ್ತಿತ್ತು. 4 ಅಂಕವನ್ನಷ್ಟೇ ಹೊಂದಿದ್ದ ಭಾರತಕ್ಕೆ ಅರ್ಹತೆ ಸಂಪಾದಿಸಲು ಗೆಲುವು ಅನಿವಾರ್ಯವಾಗಿತ್ತು.