ಫುಟ್ಬಾಲ್ ತಾರೆಗೆ ವಿಶೇಷ ಉಡುಗೊರೆಗಳನ್ನು ನೀಡಿದ ಜಯ್ ಷಾ!
ನವದೆಹಲಿ: ಅರ್ಜೆಂಟೀನಾದ ಫುಟ್ಬಾಲ್ ಸೂಪರ್ಸ್ಟಾರ್ ಲಿಯೋನೆಲ್ ಮೆಸ್ಸಿ (LIONEL MESSI ) ಅವರ ಭಾರತ ಪ್ರವಾಸದ ಕೊನೇ ದಿನವಾದ ಸೋಮವಾರ ರಾಷ್ಟ್ರ ರಾಜಧಾನಿಯ ಹವಾಮಾನ ವೈಪರೀತ್ಯಗಳಿಂದಾಗಿ ಕಾರ್ಯಕ್ರಮಗಳು ಸ್ವಲ್ಪ ಬದಲಾವಣೆ ಕಂಡವು. ಆದರೂ, ಭಾಗವಹಿಸಿದ ಕಾರ್ಯಕ್ರಮಗಳೆಲ್ಲ ಫುಟ್ಬಾಲ್ ಪ್ರೇಮಿಗಳಿಗೆ ಮೋಡಿ ಮಾಡಿದರು. ಮೊದಲ ದಿನ ಕೋಲ್ಕತದ ಕಾರ್ಯಕ್ರಮದಲ್ಲಿ ಗಲಾಟೆ ನಡೆದ ಬಳಿಕ ಕಲಿತ ಪಾಠದಿಂದ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದ ನಡುವೆ, ಹೈದರಾಬಾದ್ ಮತ್ತು ಮುಂಬೈನಂತೆ ನವದೆಹಲಿಯ ಕಾರ್ಯಕ್ರಮವೂ ಅಚ್ಚುಕಟ್ಟಿನಿಂದ ಸಾಗಿತು. ಸೋಮವಾರ ರಾತ್ರಿಯ ವೇಳೆಗೆ ಮೆಸ್ಸಿ 3 ದಿನಗಳ "ಗೋಟ್ ಟೂರ್' ಮುಗಿಸಿ ಭಾರತದಿಂದ ನಿರ್ಗಮಿಸಿದರು.
ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಸೆಲೆಬ್ರಿಟಿಗಳು, ಕ್ರೀಡಾತಾರೆಯರು ಮತ್ತು ಗಣ್ಯರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರೊಂದಿಗೆ, ಸ್ಟೇಡಿಯಂನಲ್ಲಿ ಸೇರಿದ್ದ ುಟ್ಬಾಲ್ ಪ್ರೇಮಿಗಳು ಮೆಸ್ಸಿ ಅವರನ್ನು ಮನಸಾರೆ ಕಣ್ತುಂಬಿಕೊಂಡು ಆನಂದಿಸಿದರು. ಕಾರ್ಯಕ್ರಮದಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಕಿರು ಭಾಷಣವನ್ನೂ ಮಾಡಿದ ಮೆಸ್ಸಿ, "ಗ್ರೇಸಿಯಸ್ ದೆಹಲಿ, ಹಸ್ತಾ ಪ್ರಂಟೊ' ಅಂದರೆ "ಧನ್ಯವಾದಗಳು ದೆಹಲಿ, ಮತ್ತೊಮ್ಮೆ ಇಲ್ಲಿಗೆ ಬರುವೆ' ಎಂದರು. 7/7 ಸೆಲೆಬ್ರಿಟಿ ಪಂದ್ಯವನ್ನು ವೀಸಿದ ಮೆಸ್ಸಿ, ಮಕ್ಕಳೊಂದಿಗೆ ಫುಟ್ಬಾಲ್ ಕೂಡ ಆಡಿದರು.
ಸ್ಟೇಡಿಯಂಗೆ ಆಗಮಿಸಿದ್ದ 25 ಸಾವಿರ ಜನರಲ್ಲಿ ಬಹುತೇಕರು ಮೆಸ್ಸಿ ಅವರ 10 ನಂಬರ್ನ ಅರ್ಜೆಂಟೀನಾ ಜೆರ್ಸಿಯನ್ನು ಧರಿಸಿ ಆಗಮಿಸಿದ್ದರು. ಮಿನರ್ವ ಅಕಾಡೆಮಿಯ ಫುಟ್ಬಾಲ್ ತಂಡವನ್ನು ಸನ್ಮಾನಿಸಿದ ಮೆಸ್ಸಿ, ಭಾರತ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಕುಟುಂಬದೊಂದಿಗೆ ಪೋಸ್ ಕೂಡ ನೀಡಿದರು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಐಸಿಸಿ ಅಧ್ಯಕ್ಷ ಜಯ್ ಷಾ, ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಹನ್ ಜೇಟ್ಲಿ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೆಸ್ಸಿಗೆ ಟಿ20 ವಿಶ್ವಕಪ್ ಟಿಕೆಟ್, ಬ್ಯಾಟ್, ಜೆರ್ಸಿ ಉಡುಗೊರೆ
ಭಾರತ ಪ್ರವಾಸದ ಕೊನೇ ದಿನ ಮೆಸ್ಸಿ ಅವರನ್ನು ಭೇಟಿಯಾದ ಐಸಿಸಿ ಚೇರ್ಮನ್ ಜಯ್ ಷಾ (jay shah), 2026ರ ಟಿ20 ವಿಶ್ವಕಪ್ನಲ್ಲಿ ಆತಿಥೇಯ ಭಾರತ ತಂಡ ಆಡಲಿರುವ ಮೊದಲ ಪಂದ್ಯದ ಟಿಕೆಟ್ಅನ್ನು ಸಾಂಕೇತಿಕವಾಗಿ ಉಡುಗೊರೆ ನೀಡಿದರು. ಜತೆಗೆ ಮೆಸ್ಸಿ ಮಾತ್ರವಲ್ಲದೆ ಅವರೊಂದಿಗೆ ಆಗಮಿಸಿದ್ದ ಇಂಟರ್ ಮಿಯಾಮಿ ಕ್ಲಬ್ನ ಸಹ-ಆಟಗಾರರಾದ ಉರುಗ್ವೆಯ ಲೂಯಿಸ್ ಸ್ಯೂರೆಜ್ ಮತ್ತು ಅರ್ಜೆಂಟೀನಾದ ರೋಡ್ರಿಗೋ ಡಿ ಪೌಲ್ಗೂ ಟೀಮ್ ಇಂಡಿಯಾದ ನೀಲಿ ಬಣ್ಣದ ಜೆರ್ಸಿಯನ್ನು ನೀಡಿದರು. ಇದರಲ್ಲಿ ಅವರ ಹೆಸರು ಮತ್ತು ಜೆರ್ಸಿ ನಂಬರ್ ಕೂಡ ಇತ್ತು. ಟೀಮ್ ಇಂಡಿಯಾ ಆಟಗಾರರ ಹಸ್ತಾಕ್ಷರವಿದ್ದ ಕ್ರಿಕೆಟ್ ಬ್ಯಾಟ್ ಒಂದನ್ನು ಕೂಡ ಜಯ್ ಷಾ ಮೆಸ್ಸಿಗೆ ಉಡುಗೊರೆ ನೀಡಿದರು.