ರಗ್ಬಿ ಪ್ರೀಮಿಯರ್ ಲೀಗ್: ಅಗ್ರಸ್ಥಾನ ಉಳಿಸಿಕೊಂಡ ಹೈದರಾಬಾದ್ ಹೀರೋಸ್ 
ಫುಟ್ಬಾಲ್

ರಗ್ಬಿ ಪ್ರೀಮಿಯರ್ ಲೀಗ್: ಅಗ್ರಸ್ಥಾನ ಉಳಿಸಿಕೊಂಡ ಹೈದರಾಬಾದ್ ಹೀರೋಸ್

ಹೈದರಾಬಾದ್: ರಗ್ಬಿ ಪ್ರೀಮಿಯರ್ ಲೀಗ್ ಪವರ್ಡ್ ಬೈ Avid ಸೀಸನ್ 2ರ ಲೀಗ್ ಹಂತದ ಕೊನೆಯ ದಿನವಾದ ಶುಕ್ರವಾರ, ಗಚಿಬೌಲಿ‌ನ ಗಂತಿ ಮೋಹನ ಚಂದ್ರ ಬಾಲಯೋಗಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಹೈದರಾಬಾದ್ ಹೀರೋಸ್ ತಂಡವು ಕೋಲ್ಕತ್ತಾ ಬಂಗಾ ಟೈಗರ್ಸ್ ವಿರುದ್ಧ 28-0 ಅಂತರದ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿತು.
ಹೈದರಾಬಾದ್ ಹೀರೋಸ್ 28-0ರಿಂದ ಕೋಲ್ಕತ್ತಾ ಬಂಗಾಳ ಟೈಗರ್ಸ್‌ನ್ನು ಮಣಿಸಿತು
ಪಂದ್ಯದ ಆರಂಭದಿಂದಲೇ ಹೈದರಾಬಾದ್ ಹೀರೋಸ್ ವೇಗದ ದಾಳಿ ಮತ್ತು ಚುರುಕಿನ ಚೆಂಡಿನ ಚಲನೆಯ ಮೂಲಕ ತನ್ನ ಪ್ರಾಬಲ್ಯ ಮೆರೆದಿತು. ಮೈದಾನದಾದ್ಯಂತ ಕೋಲ್ಕತ್ತಾ ಬಂಗಾ ಟೈಗರ್ಸ್‌ನ ರಕ್ಷಣಾ ಪಡೆಯನ್ನು ಚದುರಿಸುತ್ತಾ ನಿರಂತರ ಒತ್ತಡ ಹೇರಿತು. ಆರಂಭದ ಕೆಲವೇ ನಿಮಿಷಗಳಲ್ಲಿ ಸುಮಿತ್ ರಾಯ್ ಮೊದಲ ಟ್ರೈ ದಾಖಲಿಸಿದರೆ, ಬಳಿಕ ಎಡ ವಿಂಗ್‌ನಲ್ಲಿ ರಾವುಆಮಾ ಸೆರುವಾಕುಲಾ ಚತುರ ಡಮ್ಮಿಯ ಮೂಲಕ ಎದುರಾಳಿಯನ್ನು ಮರುಳುಗೊಳಿಸಿ ಎರಡನೇ ಟ್ರೈ ದಾಖಲಿಸಿ ಹೈದರಾಬಾದ್‌ನ ಮುನ್ನಡೆಯನ್ನು ದ್ವಿಗುಣಗೊಳಿಸಿದರು.
ಎರಡನೇ ಕ್ವಾರ್ಟರ್‌ನಲ್ಲಿಯೂ ಹೈದರಾಬಾದ್‌ನ ನಿಖರ ಪಾಸಿಂಗ್ ಮತ್ತು ಖಾಲಿ ಜಾಗಗಳ ಸದುಪಯೋಗ ಕೋಲ್ಕತ್ತಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು. ನಿರಂತರ ಒತ್ತಡದ ಫಲವಾಗಿ ಕೆವಿನ್ ವೆಕೆಸಾ ರಕ್ಷಣಾ ಪಡೆಯನ್ನು ಭೇದಿಸಿ ಮತ್ತೊಂದು ಟ್ರೈ ದಾಖಲಿಸಿದರು. ಮೂರನೇ ಕ್ವಾರ್ಟರ್‌ನ ಆರಂಭದಲ್ಲೇ ಮೌರಿಸ್ ಲಾಂಗ್‌ಬಾಟಮ್ ಮತ್ತೊಂದು ಟ್ರೈ ದಾಖಲಿಸಿ ತಂಡದ ವೇಗವನ್ನು ಮುಂದುವರಿಸಿದರು.
ಇನ್ನೊಂದೆಡೆ, ಹೈದರಾಬಾದ್‌ನ ಶಿಸ್ತುಬದ್ಧ ರಕ್ಷಣಾ ಆಟವು ಕೋಲ್ಕತ್ತಾ ತಂಡಕ್ಕೆ ಪಂದ್ಯದುದ್ದಕ್ಕೂ ಯಾವುದೇ ಮಹತ್ವದ ಅವಕಾಶ ನೀಡಲಿಲ್ಲ. ಪರಿಣಾಮ, ಎದುರಾಳಿಗೆ ಒಂದೇ ಒಂದು ಅಂಕವನ್ನೂ ನೀಡದೆ ಹೈದರಾಬಾದ್ ಹೀರೋಸ್ ಸಂಪೂರ್ಣ ಪ್ರಾಬಲ್ಯದೊಂದಿಗೆ ಭರ್ಜರಿ ಗೆಲುವು ದಾಖಲಿಸಿತು.