ಫಿಫಾ ವಿಶ್ವಕಪ್ ಆರಂಭೋತ್ಸವದಲ್ಲಿ ಕುಣಿಯಲು ನೋರಾ ಫತೇಹಿ ಪಡೆದ ಸಂಭಾವನೆ ಎಷ್ಟು?
ಬೆಂಗಳೂರು: ಬಾಲಿವುಡ್ ನಟಿ, ಡಾನ್ಸರ್, ಗಾಯಕಿ ಹಾಗೂ ಕನ್ನಡದ ಕೆಡಿ ಸಿನಿಮಾದ ಸೆರಗು ಹಾಡಿನಿಂದ ವಿವಾದಕ್ಕೀಡಾಗಿದ್ದ ನೋರಾ ಫತೇಹಿ (Nora Fatehi) ಫಿಫಾ ವಿಶ್ವಕಪ್ (FIFA World Cup) ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದರು. ಆರಂಭೋತ್ಸವದಲ್ಲಿ ಭಾಗವಹಿಸಿದ ಕಲಾವಿದರ ಪೈಕಿ ಭಾರತದ ಏಕೈಕ ಪ್ರತಿನಿಧಿಯಾಗಿದ್ದ ಕೆನಡಾ-ಮೊರಾಕ್ಕೊ ಮೂಲದ ನೋರಾ ಫತೇಹಿ, ಟೊರಾಂಟೊದಲ್ಲಿ ಶುಕ್ರವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಹಾಡಿ ಕುಣಿದು ಜಗತ್ತಿನ ಆಕರ್ಷಣೆಗೆ ಪಾತ್ರರಾದರು.
ಸಹ-ಆತಿಥೇಯ ಕೆನಡಾ ಸಿದ್ಧಪಡಿಸಿದ್ದ "ಸರ್ ಸರ್' ಧ್ಯೇಯಗೀತೆಯ ವಿಡಿಯೋದಲ್ಲೂ ಕಾಣಿಸಿಕೊಂಡಿದ್ದ ನೋರಾ ಫತೇಹಿ, ಆರಂಭೋತ್ಸವದಲ್ಲೂ ಅದೇ ಹಾಡನ್ನು ಸಂಗೀತ ನಿರ್ದೇಶಕ ವಜ್ ಡ್ರೀಮ್ ಮತ್ತು ಬಾಂಗ್ಲಾದೇಶ ಗಾಯಕ ಸಂಜಯ್ ಜತೆ ಹಾಡಿ ಕುಣಿದು ಟೊರಾಂಟೊ ಸ್ಟೇಡಿಯಂನಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದ್ದರು. ಕೆನಡಾ ಮತ್ತು ಬೋಸ್ನಿಯಾ-ಹರ್ಜೆಗೋವಿನಾ ನಡುವಿನ ಪಂದ್ಯಕ್ಕೆ ಮುನ್ನ ಈ ಆರಂಭೋತ್ಸವ ನಡೆದಿತ್ತು.
ಸಿನಿಮಾದಲ್ಲಿ ಒಂದು ಐಟಂ ಸಾಂಗ್ನಲ್ಲಿ ಕುಣಿಯಲು ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯುವ ನೋರಾ ತೇಹಿ, ಫಿಫಾ ವಿಶ್ವಕಪ್ ಆರಂಭೋತ್ಸವದಲ್ಲಿ ನರ್ತಿಸಲು ಎಷ್ಟು ಹಣ ಪಡೆದಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಆದರೆ ನೋರಾ ಸಹಿತ ಫಿಫಾ ವಿಶ್ವಕಪ್ ಆರಂಭೋತ್ಸವದಲ್ಲಿ ಪಾಲ್ಗೊಂಡ ಎಲ್ಲ ಸ್ಟಾರ್ ಕಲಾವಿದರು ಮತ್ತು ಪಾಪ್ ತಾರೆಯರು ಯಾವುದೇ ನೇರ ಸಂಭಾವನೆಯನ್ನು ಪಡೆದಿಲ್ಲ ಎನ್ನಲಾಗಿದೆ. ಇದು ಸಂಭಾವನೆ ಪಡೆದು ಪ್ರದರ್ಶನ ನೀಡುವ ಕಾರ್ಯಕ್ರಮ ಆಗಿರಲಿಲ್ಲ. ಆದರೆ ಫಿಫಾ ಇದರ ವೆಚ್ಚವನ್ನು ಟೂರ್ನಿಯ ಒಟ್ಟಾರೆ ವೆಚ್ಚದಿಂದಲೇ ಭರಿಸಲಿದೆ. ಕಲಾವಿದರ ಎಲ್ಲ ಪ್ರಯಾಣ, ವಸತಿ, ಸಿದ್ಧತೆ, ಮೇಕಪ್ ವೆಚ್ಚವನ್ನು ಫಿಫಾ ಭರಿಸಲಿದೆ. ಜತೆಗೆ ಎಲ್ಲ ಕಲಾವಿದರಿಗೆ ಗೌರವ ಸಂಭಾವನೆಯನ್ನು ನೀಡಲಿದೆ ಎನ್ನಲಾಗಿದೆ.