FIFA WorldCup: ಔಸ್ಮಾನ್ ಡೆಂಬಲ್ ಹ್ಯಾಟ್ರಿಕ್ ಗೋಲು; ಸತತ 3 ಜಯದೊಂದಿಗೆ ನಾಕೌಟ್ಗೇರಿದ ಫ್ರಾನ್ಸ್
ಬೋಸ್ಟನ್: ಪ್ಯಾರಿಸ್ ಸೇಂಟ್-ಜಮೈರ್ನ್ ಫಾರ್ವರ್ಡ್ ಆಟಗಾರ ಮತ್ತು 2025ರ ಬ್ಯಾಲನ್ ಡಿಓರ್ ಪ್ರಶಸ್ತಿ ವಿಜೇತ ಔಸ್ಮಾನ್ ಡೆಂಬೆಲ್ (7, 20, 32ನೇ ನಿಮಿಷ) 25 ನಿಮಿಷಗಳ ಅಂತರದಲ್ಲಿ ಸಿಡಿಸಿದ ಹ್ಯಾಟ್ರಿಕ್ ಗೋಲಿನ ಸಾಹಸದಿಂದ ಹಾಲಿ ರನ್ನರ್ಅಪ್ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ (FIFA WorldCup) 23ನೇ ಆವೃತ್ತಿಯಲ್ಲಿ ನಾರ್ವೆ ಎದುರು 4-1 ಅಂತರದಿಂದ ಗೆಲುವು ಸಾಧಿಸಿದೆ. ಹ್ಯಾಟ್ರಿಕ್ ಗೆಲುವಿನಿಂದ ಲೆಸ್ ಬ್ಲೂಸ್ ತಂಡ ಐ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿದೆ. 32ರ ಘಟ್ಟದಲ್ಲಿ ಫ್ರಾನ್ಸ್ಗೆ ಸ್ವೀಡನ್ ಮತ್ತು ನಾರ್ವೆಗೆ ಐವರಿ ಕೋಸ್ಟ್ ಎದುರಾಳಿಯಾಗಲಿದೆ.
ಭಾರತೀಯ ಕಾಲಮಾನ ಪ್ರಕಾರ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 29 ವರ್ಷದ ಡೆಂಬೆಲ್ (Ousmane Dembele), 1994ರ ನಂತರ ವಿಶ್ವಕಪ್ನ ಮೊದಲಾರ್ಧದಲ್ಲೇ ಹ್ಯಾಟ್ರಿಕ್ ಗೋಲು ಸಿಡಿಸಿದ ಮೊದಲ ಆಟಗಾರ ಎನಿಸಿದರು. ಈಗಾಗಲೆ ನಾಕೌಟ್ ಸ್ಥಾನ ಖಚಿತಪಡಿಸಿಕೊಂಡಿದ್ದ ಫ್ರಾನ್ಸ್-ನಾರ್ವೆ ತಂಡಗಳು ಗುಂಪಿನ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಿದವು. ಆದರೆ ನಾರ್ವೆ ತನ್ನ ಸ್ಟಾರ್ ಆಟಗಾರ ಎರ್ಲಿಂಗ್ ಹಾಲೆಂಡ್ಗೆ ವಿಶ್ರಾಂತಿ ನೀಡಿ, ಪಂದ್ಯಕ್ಕೆ ಮೊದಲೇ ಅಗ್ರಸ್ಥಾನದ ರೇಸ್ನಿಂದ ಹಿಂದೆ ಸರಿದಂತಿತ್ತು.
ಡೆಂಬೆಲ್ 7, 20, 32ನೇ ನಿಮಿಷದಲ್ಲಿ ಸಿಡಿಸಿದ ಆಕರ್ಷಕ ಗೋಲಿನ ನಡುವೆ ನಾರ್ವೆಯ ಥೆಲೊ ಅಸ್ಗಾರ್ಡ್ 21ನೇ ನಿಮಿಷದಲ್ಲೊಂದು ಗೋಲು ಬಾರಿಸಿದರು. ಇದರಿಂದ ಫ್ರಾನ್ಸ್ 3-1 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು. ದ್ವೀತಿಯಾರ್ಧ ಬಹುತೇಕ ಗೋಲುರಹಿತವಾಗಿದ್ದ ಬಳಿಕ ಡಿಸೈರ್ ಡೌ (90+4) ಇಂಜುರಿ ಸಮಯದಲ್ಲಿ ಹೆಡರ್ ಮೂಲಕ ಫ್ರಾನ್ಸ್ ಗೆಲುವಿನ ಅಂತರ ಹಿಗ್ಗಿಸಿದರು.
ಡೆಂಬೆಲ್ 65ನೇ ನಿಮಿಷದಲ್ಲಿ ಬದಲಿ ಆಟಗಾರನಿಗೆ ಸ್ಥಾನ ಬಿಟ್ಟು ಮೈದಾನದಿಂದ ಹೊರನಡೆದರೆ, 86ನೇ ನಿಮಿಷದವರೆಗೆ ಮೈದಾನದಲ್ಲಿದ್ದ ಕಳೆದ 2 ಪಂದ್ಯಗಳ ಅವಳಿ ಗೋಲು ಸಾಧಕ ಕೈಲಿಯಾನ್ ಎಂಬಾಪೆ ಈ ಬಾರಿ ಗೋಲು ಗಳಿಸಲಾಗದೆ ನಿರಾಸೆ ಅನುಭವಿಸಿದರು.
ಫ್ರಾನ್ಸ್ ಕೋಚ್ ಡಿಡಿಯರ್ ಡಿಶಾಂಪ್ಸ್ ಅವರ ತಾಯಿ ಜಿನೆಟ್ ಡಿಶಾಂಪ್ಸ್ ಇತ್ತೀಚೆಗೆ ನಿಧನರಾಗಿರುವ ಕಾರಣ ಅವರು ತವರಿಗೆ ನಿರ್ಗಮಿಸಿದ್ದರಿಂದ ಪಂದ್ಯದ ವೇಳೆ ಹಾಜರಿರಲಿಲ್ಲ. ಡಿಡಿಯರ್ ಶನಿವಾರ ತಂಡದ ತರಬೇತಿಗೆ ಮರಳಿದರು.
*ಔಸ್ಮಾನ್ ಡೆಂಬೆಲ್ (7, 20, 32)
ಹಾಲೆಂಡ್ ಸಹಿತ 10 ಆಟಗಾರರಿಗೆ ರೆಸ್ಟ್!
ಗುಂಪಿನ ಅಗ್ರಸ್ಥಾನ ಗಳಿಸುವ ಅವಕಾಶವಿದ್ದ ಪಂದ್ಯದಲ್ಲಿ ನಾರ್ವೆ ತಂಡ ಎರ್ಲಿಂಗ್ ಹಾಲೆಂಡ್ ಸಹಿತ ಆರಂಭಿಕ 11ರ 10 ಕಾಯಂ ಆಟಗಾರರಿಗೆ ವಿಶ್ರಾಂತಿ ನೀಡಿ ಕಣಕ್ಕಿಳಿಯುವ ಮೂಲಕ ಅಚ್ಚರಿ ತಂದಿತು. ನಾರ್ವೆ ಕೋಚ್ ಸ್ಟೇಲ್ ಸೋಲ್ಬಕ್ಕೆನ್ ಪಂದ್ಯದ ನಂತರ ತನ್ನ ನಿರ್ಧಾರ ಸಮರ್ಥಿಸಿಕೊಂಡರು. ಹಾಲೆಂಡ್ ಗೈರಿನಲ್ಲಿ ಆಡಿದ ಕಳೆದ 6 ಪಂದ್ಯದಲ್ಲೂ ನಾರ್ವೆ ಸೋತಿದೆ.
*3: ಲಿಯೋನೆಲ್ ಮೆಸ್ಸಿ ಮತ್ತು ಕೆನಡಾದ ಜೊನಾಥನ್ ಡೇವಿಡ್ ಬಳಿಕ ಡೆಂಬೆಲ್ ಹಾಲಿ ವಿಶ್ವಕಪ್ನ 3ನೇ ಹ್ಯಾಟ್ರಿಕ್ ಗೋಲು ಸಾಧಕ ಎನಿಸಿದರು. ಜತೆಗೆ ಜಸ್ಟ್ ಫಾಟೇನ್ (2) ಮತ್ತು ಕೈಲಿಯಾನ್ ಎಂಬಾಪೆ ಬಳಿಕ ಫ್ರಾನ್ಸ್ನ 3ನೇ ವಿಶ್ವಕಪ್ ಹ್ಯಾಟ್ರಿಕ್ ಸಾಧಕ ಎನಿಸಿದರು. ಅವರು ವಿಶ್ವಕಪ್ನಲ್ಲಿ ಮೊದಲಾರ್ಧದಲ್ಲೇ ಹ್ಯಾಟ್ರಿಕ್ ಸಾಧಿಸಿದ 6ನೇ ಆಟಗಾರರೆನಿಸಿದರು.