FIFA WorldCup: ಗುಂಪಿನ ಕೊನೇ ಲೀಗ್​ ಪಂದ್ಯಗಳೇಕೆ ಏಕಕಾಲದಲ್ಲಿ ನಡೆಯುತ್ತವೆ ಗೊತ್ತೇ? 
ಫುಟ್ಬಾಲ್

FIFA WorldCup: ಗುಂಪಿನ ಕೊನೇ ಲೀಗ್​ ಪಂದ್ಯಗಳೇಕೆ ಏಕಕಾಲದಲ್ಲಿ ನಡೆಯುತ್ತವೆ ಗೊತ್ತೇ?

ಲಾಸ್​ ಏಂಜಲೀಸ್​: ಫಿಫಾ ವಿಶ್ವಕಪ್​ನಲ್ಲಿ (FIFA WorldCup) ಲೀಗ್​ ಹಂತದ ಮೊದಲ ಸುತ್ತಿನ ಎಲ್ಲ ಪಂದ್ಯಗಳು ಪ್ರತ್ಯೇಕ ಸಮಯದಲ್ಲಿ ನಡೆದಿದ್ದರೆ, ಎಲ್ಲ 12 ಗುಂಪಿನ ಕೊನೇ ಸುತ್ತಿನ ಲೀಗ್​ ಪಂದ್ಯಗಳು ಆಯಾ ಗುಂಪಿನಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ. ಫಿಫಾ ಈ ಮಾದರಿಯನ್ನು ಅನುಸರಿಸಲು ಮಹತ್ವದ ಹಿನ್ನೆಲೆ ಇದೆ. ಅಲ್ಲದೆ ಟೂರ್ನಿ ನ್ಯಾಯೋಚಿತ ಮತ್ತು ಸ್ಪರ್ಧಾತ್ಮಕವಾಗಿ ನಡೆಯುವಂತೆ ಮಾಡುವುದು ಇದರ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಮ್ಯಾಚ್​ ಫಿಕ್ಸಿಂಗ್​ ಮತ್ತು ಪಿತೂರಿಯನ್ನು ತಪ್ಪಿಸುವ ಗುರಿಯನ್ನೂ ಈ ವಿಧಾನ ಒಳಗೊಂಡಿದೆ.
ಹಿನ್ನೆಲೆ: 1982ರ ವಿಶ್ವಕಪ್​ನಲ್ಲಿ ಅಲ್ಜೀರಿಯಾ ತಂಡ ಪಶ್ಚಿಮ ಜರ್ಮನಿ ವಿರುದ್ಧ 2-1ರಿಂದ ಗೆದ್ದು ಸ್ಮರಣೀಯ ಆರಂಭ ಕಂಡಿತ್ತು. ಆದರೆ ಆಸ್ಟ್ರಿಯಾ ವಿರುದ್ಧದ 2ನೇ ಪಂದ್ಯದಲ್ಲಿ 0-2ರಿಂದ ಸೋತಿತ್ತು. ಬಳಿಕ ಚಿಲಿ ವಿರುದ್ಧದ ಅಂತಿಮ ಲೀಗ್​ ಪಂದ್ಯದಲ್ಲಿ 3-2ರಿಂದ ಜಯಿಸಿತ್ತು. 2 ಗೆಲುವಿನೊಂದಿಗೆ ಅಲ್ಜೀರಿಯಾ ನಾಕೌಟ್​ ಹಂತಕ್ಕೇರಿದ ಮೊದಲ ಆಫ್ರಿಕಾ ದೇಶ ಎನಿಸುವ ಅತ್ಯುತ್ತಮ ಅವಕಾಶ ಹೊಂದಿತ್ತು. ಅಲ್ಜೀರಿಯಾದ ಅಂತಿಮ ಪಂದ್ಯದ ಮರುದಿನ ಪಶ್ಚಿಮ ಜರ್ಮನಿ-ಆಸ್ಟ್ರಿಯಾ ತಂಡಗಳು ಗುಂಪಿನ ಅಂತಿಮ ಪಂದ್ಯ ಆಡಬೇಕಿತ್ತು. ಈ ಪಂದ್ಯದಲ್ಲಿ ಪ. ಜರ್ಮನಿ 1-0 ಅಥವಾ 2-0 ಅಂತರದಿಂದ ಗೆದ್ದರೆ ಅದು ನಾಕೌಟ್​ಗೇರಬಹುದಾಗಿತ್ತು. ಜತೆಗೆ ಆಸ್ಟ್ರಿಯಾ ಕೂಡ ಗೋಲು ಲೆಕ್ಕಾಚಾರದಲ್ಲಿ ನಾಕೌಟ್​ಗೇರಲು 0-4 ಅಂತರದಿಂದ ಸೋಲಬಾರದಿತ್ತು. ಆ ಪಂದ್ಯದ 10ನೇ ನಿಮಿಷದಲ್ಲೇ ಜರ್ಮನಿ ಮೊದಲ ಗೋಲು ಬಾರಿಸಿತು. ಬಳಿಕ ಉಭಯ ತಂಡಗಳು ಪಂದ್ಯ ಪೂರ್ತಿ ಗೋಲು ಗಳಿಸುವ ಆಸಕ್ತಿ ತೋರಿಸದೆ ಉದ್ದೇಶಪೂರ್ವಕವಾಗಿ ನೀರಸ ಆಟವಾಡಿದವು. ಈ ಮೂಲಕ ಅಲ್ಜೀರಿಯಾ ತಂಡ ನಾಕೌಟ್​ ಹಂತಕ್ಕೇರದಂತೆ ತಡೆಯಲು ಯುರೋಪ್​ ಖಂಡದ ಪಶ್ಚಿಮ ಜರ್ಮನಿ-ಆಸ್ಟ್ರಿಯಾ ದೇಶಗಳು ಒಂದಾಗಿದ್ದವು.

ಆಗ ಜರ್ಮನಿ-ಆಸ್ಟ್ರಿಯಾ ವಿರುದ್ಧ ಮ್ಯಾಚ್​ ಫಿಕ್ಸಿಂಗ್​ ಆರೋಪ ಬಂದರೂ, ಫಿಫಾ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಅದರ ಮರು ಆವೃತ್ತಿಯಿಂದ ಅಂತಿಮ ಲೀಗ್​ ಪಂದ್ಯಗಳನ್ನು ಏಕಕಾಲದಲ್ಲೇ ಆಡಿಸಲು ಆರಂಭಿಸಿ ಗುಂಪಿನ ಎಲ್ಲ 4 ತಂಡಗಳಿಗೂ ಸಮಾನ ನ್ಯಾಯ ಒದಗಿಸಲು ಮುಂದಾಯಿತು. ಇದರಿಂದ ಅಂತಿಮ ಲೀಗ್​ ಪಂದ್ಯದ ವೇಳೆ ಯಾವುದೇ ತಂಡಕ್ಕೆ ಬೇರೆ ಪಂದ್ಯದ ಫಲಿತಾಂಶ ನೋಡಿಕೊಂಡು ಆಡುವ ಲಾಭ ಇಲ್ಲದಂತಾಯಿತು.