FIFA WorldCup 2026: ಈ ಬಾರಿ ಮೆಸ್ಸಿ-ರೊನಾಲ್ಡೊ ಮುಖಾಮುಖಿ ನಿರೀಕ್ಷೆ
ಬೆಂಗಳೂರು: ಅರ್ಜೆಂಟೀನಾ ಮತ್ತು ಪೋರ್ಚುಗಲ್ ಸೂಪರ್ಸ್ಟಾರ್ಗಳಾದ ಲಿಯೋನೆಲ್ ಮೆಸ್ಸಿ (Lionel Messi) ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ (Cristiano Ronaldo) ಈ ಹಿಂದೆ 5 ಬಾರಿ ಫಿಫಾ ವಿಶ್ವಕಪ್ ಆಡಿದ್ದಾರೆ. ಆದರೆ ಅವರ ತಂಡಗಳು ಟೂರ್ನಿಯಲ್ಲಿ ಒಮ್ಮೆಯೂ ಮುಖಾಮುಖಿ ಆಗಿಲ್ಲ. ಆದರೆ ಈ ಬಾರಿ ಇಬ್ಬರೂ ಆರನೇ ಬಾರಿ ಆಡುತ್ತಿರುವ ಸಮಯದಲ್ಲಿ ಪರಸ್ಪರ ಮುಖಾಮುಖಿ ಆಗುವ ಸಾಧ್ಯತೆ ಇದೆ. ಆದರೆ ಫಲಿತಾಂಶಗಳು ಕೂಡ ನಿರೀಕ್ಷಿತ ರೀತಿಯಲ್ಲೇ ಬರಬೇಕಾಗುತ್ತದೆ.
ಲೀಗ್ ಹಂತದಲ್ಲಿ ಅರ್ಜೆಂಟೀನಾ ಜೆ ಮತ್ತು ಪೋರ್ಚುಗಲ್ ಕೆ ಗುಂಪಿನಲ್ಲಿದೆ. ಇವೆರಡೂ ತಂಡಗಳು ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ಫೈನಲ್ ಹಂತಕ್ಕೇರಿದರೆ ಪರಸ್ಪರ ಮುಖಾಮುಖಿ ಆಗಲಿವೆ. ಎರಡೂ ತಂಡಗಳು ಗುಂಪಿನಲ್ಲಿ 2ನೇ ಸ್ಥಾನ ಪಡೆದರೆ, ಪ್ರಿ ಕ್ವಾರ್ಟರ್ಫೈನಲ್ ಹಂತದಲ್ಲೇ ಮುಖಾಮುಖಿ ಆಗಲಿವೆ. ಆದರೆ ಒಂದು ತಂಡ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದು, ಇನ್ನೊಂದು ತಂಡ 2ನೇ ಸ್ಥಾನ ಪಡೆದರೆ ಆಗ ಉಭಯ ತಂಡಗಳು ಫೈನಲ್ನಲ್ಲಷ್ಟೇ ಮುಖಾಮುಖಿ ಆಗಲಿವೆ.
39 ವರ್ಷದ ಮೆಸ್ಸಿ ಈ ಹಿಂದೆ 2022ರಲ್ಲಿ ಚಾಂಪಿಯನ್, 2014ರಲ್ಲಿ ರನ್ನರ್ಅಪ್ ಸ್ಥಾಧನೆ ಮಾಡಿದ್ದರೆ, 41 ವರ್ಷದ ರೊನಾಲ್ಡೊ 2006ರ ಸೆಮಿಫೈನಲ್ನಲ್ಲಿ ಆಡಿದ್ದೇ ಶ್ರೇಷ್ಠ ಸಾಧನೆಯಾಗಿದೆ. ಫಿಫಾ ವಿಶ್ವಕಪ್ನಲ್ಲಿ ಮೆಸ್ಸಿ ಇದುವರೆಗೆ ಆಡಿರುವ 26 ಪಂದ್ಯಗಳಲ್ಲಿ 13 ಗೋಲು ಸಿಡಿಸಿದ್ದರೆ, ರೊನಾಲ್ಡೊ 22 ಪಂದ್ಯಗಳಲ್ಲಿ 8 ಗೋಲು ಬಾರಿಸಿದ್ದಾರೆ. ಜತೆಗೆ ಮೆಸ್ಸಿ 8 ಮತ್ತು ರೊನಾಲ್ಡೊ 2 ಗೋಲುಗಳಿಗೆ ನೆರವಾಗಿದ್ದಾರೆ. ಮೆಸ್ಸಿ 10 ಮತ್ತು ರೊನಾಲ್ಡೊ 1 ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದಾರೆ.
ಕ್ಲಬ್ ಫುಟ್ಬಾಲ್ನಲ್ಲಿ ಮೆಸ್ಸಿ-ರೊನಾಲ್ಡೊ ಈ ಹಿಂದೆ ಬಾರ್ಸಿಲೋನಾ-ರಿಯಲ್ ಮ್ಯಾಡ್ರಿಡ್ ತಂಡಗಳಲ್ಲಿ ಇದ್ದಾಗ 35 ಬಾರಿ ಮುಖಾಮುಖಿ ಆಗಿದ್ದರು. ಈ ಪೈಕಿ ಮೆಸ್ಸಿ 16 ಮತ್ತು ರೊನಾಲ್ಡೊ 10ರಲ್ಲಿ ಗೆಲುವು ಕಂಡಿದ್ದರು. ಉಳಿದ 9 ಪಂದ್ಯಗಳು ಡ್ರಾಗೊಂಡಿದ್ದವು. ಇಬ್ಬರೂ 22 ಗೋಲು ಬಾರಿಸಿದ್ದಾರೆ.
ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಮೆಸ್ಸಿ-ರೊನಾಲ್ಡೊ ಈ ಹಿಂದೆ 2 ಬಾರಿ ಮುಖಾಮುಖಿ ಆಗಿದ್ದು, ತಲಾ 1 ಗೆಲುವು ಕಂಡಿದ್ದಾರೆ ಮತ್ತು ತಲಾ 1 ಗೋಲು ಬಾರಿಸಿದ್ದಾರೆ.