FIFA WorldCup: ಫೈನಲ್ ಪಂದ್ಯದ ವೇಳೆ ಟಾಮ್ ಕ್ರೂಸ್, ಶಕೀರಾ ಮಿಂಚು!
ನ್ಯೂಜೆರ್ಸಿ: ಫಿಫಾ ವಿಶ್ವಕಪ್ (FIFA WorldCup) ಫೈನಲ್ ಪಂದ್ಯಕ್ಕೆ 90 ನಿಮಿಷ ಮುನ್ನ ಅಂದರೆ ಭಾರತೀಯ ಕಾಲಮಾನ ರಾತ್ರಿ 11ರಿಂದ ಮೆಟ್ಲೈಫ್ ಸ್ಟೇಡಿಯಂನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ವಿಶೇಷ ಅತಿಥಿ ಟಾಮ್ ಕ್ರೂಸ್ ಸಹಿತ ಹಾಲಿವುಡ್ ತಾರೆಯರು ಭಾಗವಹಿಸಲಿದ್ದಾರೆ. ಗಾಯಕರಾದ ಪೋಸ್ ಮಲೋನ್, ರಾಬಿ ವಿಲಿಯಮ್ಸ್ ನಿಕೋಲ್ ಶೆರ್ಜಿಂಗರ್, ಲಾರಾ ಪೌಸಿನಿ ಮತ್ತು ಯುಟ್ಯೂಬ್ ತಾರೆ ಐಶೋಸ್ಪೀಡ್ ಕಾರ್ಯಕ್ರಮ ನೀಡಲಿದ್ದಾರೆ. ಗ್ರಾಮ್ಮಿ, ಆಸ್ಕರ್ ಪ್ರಶಸ್ತಿ ವಿಜೇತ ಗಾಯಕಿ ಜೆನ್ನಿರ್ ಹಡ್ಸನ್ ಸಮಾರೋಪದಲ್ಲಿ ಅಮೆರಿಕದ ರಾಷ್ಟ್ರಗೀತೆ ಹಾಡಲಿದ್ದಾರೆ.
ಹಾಫ್ಟೈಮ್ ಶೋನಲ್ಲಿ ಶಕೀರಾ ಆಕರ್ಷಣೆ
ಫಿಫಾ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯದ ಮೊದಲಾರ್ಧದ ಬಳಿಕ ಸೂಪರ್ ಬೌಲ್ ಮಾದರಿಯಲ್ಲಿ "ಹಾಫ್ಟೈಮ್ ಶೋ' ಆಯೋಜಿಸಿದೆ. ಮೊದಲಿಗೆ ಇದನ್ನು 30 ನಿಮಿಷ ನಡೆಸಲು ನಿರ್ಧರಿಸಿದ್ದರೂ, ಇದೀಗ ಕೊನೇಕ್ಷಣದಲ್ಲಿ 17 ನಿಮಿಷಗಳಿಗೆ ತಗ್ಗಿಸಲಾಗಿದೆ. ಈ ಪೈಕಿ 11 ನಿಮಿಷ ಸಂಗೀತ ಕಾರ್ಯಕ್ರಮ ಇರಲಿದ್ದು, ಶಕೀರಾ, ಮಡೋನ್ನಾ, ಜಸ್ಟಿನ್ ಬೀಬರ್, ಗುಸ್ಟಾವೊ ಡುಡಾಮೆಲ್ ಮತ್ತು ಬಿಟಿಎಸ್ ಟೀಮ್ ಪಾಪ್ ಸಂಗೀತ ಸುಧೆ ಹರಿಸಲಿದ್ದಾರೆ.
ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವಿಶ್ವದ ಅತ್ಯಂತ ದುಬಾರಿ ಕ್ರೀಡಾ ಸ್ಪರ್ಧೆ ಎನಿಸಿದೆ. ಪಂದ್ಯದ ಸರಾಸರಿ ಟಿಕೆಟ್ ಬೆಲೆ 10.90 ಲಕ್ಷ ರೂ. ಆಗಿದೆ. ಪಂದ್ಯದ ಟಿಕೆಟ್ಗಳ ಕನಿಷ್ಠ ಬೆಲೆ 7.17 ಲಕ್ಷ ರೂ. ಆಗಿದ್ದರೆ, ಗರಿಷ್ಠ ಬೆಲೆ 27.42 ಲಕ್ಷ ರೂ. ಆಗಿದೆ. ಪಂದ್ಯಕ್ಕೆ ಸುಮಾರು 80 ಸಾವಿರ ಪ್ರೇಕ್ಷಕರು ಹಾಜರಾಗುವ ನಿರೀಕ್ಷೆ ಇದೆ.