FIFA WorldCup: ಲಿಯೋನೆಲ್​ ಮೆಸ್ಸಿಗೆ ಲೈಫ್​ ನೀಡಿದ ದೇಶವೇ ಫೈನಲ್​ ಎದುರಾಳಿ! 
ಫುಟ್ಬಾಲ್

FIFA WorldCup: ಲಿಯೋನೆಲ್​ ಮೆಸ್ಸಿಗೆ ಲೈಫ್​ ನೀಡಿದ ದೇಶವೇ ಫೈನಲ್​ ಎದುರಾಳಿ!

ನ್ಯೂಜೆರ್ಸಿ: ಲಿಯೋನೆಲ್​ ಮೆಸ್ಸಿಗೆ ಜನ್ಮ ನೀಡಿದ್ದು ಅರ್ಜೆಂಟೀನಾವಾದರೂ, ವರ್ಣರಂಜಿತ ಫುಟ್​ಬಾಲ್​ ಜೀವನ ನೀಡಿದ್ದು ಸ್ಪೇನ್​ನ ಬಾರ್ಸಿಲೋನಾ. 12ನೇ ವಯಸ್ಸಿನಲ್ಲಿ ಹಾಮೋರ್ನ್​ ಕೊರತೆಯಿಂದ ದುರ್ಬಲವಾಗಿದ್ದ ಮೆಸ್ಸಿ 13ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಅಕಾಡೆಮಿಗೆ ಸೇರಿದ ಬಳಿಕ ಬದುಕು ಬದಲಾಗಿತ್ತು. ಬಳಿಕ 21 ವರ್ಷಗಳ ಕಾಲ ಅವರು ಸ್ಪೇನ್​ ನಗರದ ಕ್ಲಬ್​ ಪರ ಆಡಿ ಫುಟ್​ಬಾಲ್​ ಮಾಂತ್ರಿಕರಾಗಿ ಬೆಳೆದಿದ್ದರು.

ಕ್ಸಾವಿ ಹರ್ನಾಂಡೆಜ್​, ಆಂಡ್ರೆಸ್​ ಇನೀಸ್ಟ, ಸೆರ್ಗಿಯೊ ಬಸ್ಕೆಟ್ಸ್​ರಂಥ ಸ್ಪೇನ್​ ದಿಗ್ಗಜರೊಂದಿಗೆ ಆಡಿ ಪಳಗಿದ್ದರು. ಬಾರ್ಸಿಲೋನಾ ಪರ ಆಡಿದ 17 ವರ್ಷಗಳಲ್ಲಿ 10 ಲಾ ಲೀಗಾ, 4 ಚಾಂಪಿಯನ್ಸ್​ ಲೀಗ್​, 7 ಕೋಪಾ ಡೆಲ್​ ರೇ ಪ್ರಶಸ್ತಿ ಜಯಿಸಿದ್ದರು ಮತ್ತು 672 ಗೋಲು ಸಿಡಿಸಿದ್ದರು. ಆದರೆ ರಾಷ್ಟ್ರೀಯ ತಂಡದ ವಿಚಾರಕ್ಕೆ ಬಂದಾಗ, ಜನ್ಮನಿಡಿದ ಅರ್ಜೆಂಟೀನಾವನ್ನೇ ಆರಿಸಿಕೊಂಡಿದ್ದ ಮೆಸ್ಸಿ, ಈಗ 2ನೇ ಬಾರಿ ವಿಶ್ವಕಪ್​ (
FIFA WorldCup) ಗೆಲ್ಲಬೇಕಾದರೆ ಜೀವನದ ನೀಡಿದ ದೇಶದ ತಂಡವನ್ನೇ ಮಣಿಸಬೇಕಾದ ಭಾವನಾತ್ಮಕ ಸವಾಲು ಹೊಂದಿದ್ದಾರೆ. ರಾಜತಾಂತ್ರಿಕವಾಗಿ ಅರ್ಜೆಂಟೀನಾ-ಸ್ಪೇನ್​ ಉತ್ತಮ ಸಂಬಂಧ ಹೊಂದಿದ್ದು, ಫುಟ್​ಬಾಲ್​ನಲ್ಲೂ ವೈರತ್ವವಿಲ್ಲದೆ, ಸೌಹಾರ್ದ ಸಂಬಂಧವಿದೆ.
ವಿಶ್ವಕಪ್​ನಲ್ಲಿ ಏಕೈಕ ಮುಖಾಮುಖಿ
ಅರ್ಜೆಂಟೀನಾ-ಸ್ಪೇನ್​ ತಂಡಗಳು ಫಿಫಾ ವಿಶ್ವಕಪ್​ನಲ್ಲಿ ಈ ಹಿಂದೆ ಏಕೈಕ ಬಾರಿ ಮುಖಾಮುಖಿ ಆಗಿವೆ. 1966ರಲ್ಲಿ ಒಂದೇ ಗುಂಪಿನಲ್ಲಿದ್ದಾಗ ಅರ್ಜೆಂಟೀನಾ 2-1ರಿಂದ ಸ್ಪೇನ್​ಗೆ ಸೋಲುಣಿಸಿತ್ತು. ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ 14 ಬಾರಿ ಮುಖಾಮುಖಿ ಆಗಿರುವ ಉಭಯ ತಂಡಗಳು ತಲಾ 6ರಲ್ಲಿ ಗೆದ್ದಿದ್ದು, 2 ಪಂದ್ಯ ಡ್ರಾಗೊಂಡಿವೆ. 2018ರಲ್ಲಿ ಕೊನೇ ಬಾರಿ ಮುಖಾಮುಖಿ ಆದಾಗ ಸ್ಪೇನ್​ 6-1ರಿಂದ ಗೆದ್ದಿತ್ತು. ಆದರೆ ಈ ಪಂದ್ಯದಲ್ಲಿ ಮೆಸ್ಸಿ ಆಡಿರಲಿಲ್ಲ.