FIFA WorldCup: ಸ್ಕಾಲೋನಿ-ಫ್ಯೂಯೆಂಟೆ ಕಾರ್ಯತಂತ್ರಗಳ ಅಗ್ನಿಪರೀಕ್ಷೆ; ಅಟ್ಯಾಕ್-ಡಿಫೆನ್ಸ್ ವಾರ್!
ನ್ಯೂಜೆರ್ಸಿ: ಅರ್ಜೆಂಟೀನಾ ತಂಡದ ಕೋಚ್ ಆಗಿ ಲಿಯೋನೆಲ್ ಸ್ಕಾಲೋನಿ ಮತ್ತು ಸ್ಪೇನ್ ಕೋಚ್ ಆಗಿ ಲೂಯಿಸ್ ಡೆ ಲಾ ಪ್ಯೂಯೆಂಟೆ ಅಮೋಘ ದಾಖಲೆ ಹೊಂದಿದ್ದು, ಸ್ಟಾರ್ ಆಟಗಾರರನ್ನು ತಂಡದ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು ಈ ಯಶಸ್ಸು ಸಾಧಿಸಿದ್ದಾರೆ. ಸ್ಕಾಲೋನಿ ಮಾರ್ಗದರ್ಶನದಲ್ಲಿ ಅರ್ಜೆಂಟೀನಾ ತಂಡ 2021, 2024ರ ಕೋಪಾ ಅಮೆರಿಕ ಮತ್ತು 2022ರ ವಿಶ್ವಕಪ್ ಜಯಿಸಿದ್ದರೆ, ಫ್ಯೂಯೆಂಟೆ 2022ರಲ್ಲಿ ಸ್ಪೇನ್ ತರಬೇತುದಾರರಾದ ಬಳಿಕ 2023ರ ನೇಷನ್ಸ್ ಲೀಗ್ ಮತ್ತು 2024ರ ಯುರೋ ಕಪ್ ಜಯಿಸಿದ್ದರೆ, 2025ರ ನೇಷನ್ಸ್ ಕಪ್ನಲ್ಲಿ ರನ್ನರ್ಅಪ್ ಆಗಿದ್ದರು. ಭಾನುವಾರ ಫಿಫಾ ವಿಶ್ವಕಪ್ ಫೈನಲ್ನಲ್ಲಿ ( FIFA World Cup) ಇವರಿಬ್ಬರ ಕಾರ್ಯತಂತ್ರಗಳ ಅಗ್ನಿಪರೀಕ್ಷೆ ನಡೆಯಲಿದೆ.
ಅರ್ಜೆಂಟೀನಾ ಅಟ್ಯಾಕ್-ಸ್ಪೇನ್ ಡಿಫೆನ್ಸ್!
ಫೈನಲ್ ಪಂದ್ಯ ಅರ್ಜೆಂಟೀನಾದ ಆಕ್ರಮಣ ಮತ್ತು ಸ್ಪೇನ್ನ ರಕ್ಷಣಾ ವಿಭಾಗದ ನಡುವಿನ ಕಾದಾಟವೆನಿಸಿದೆ. ಅರ್ಜೆಂಟೀನಾ ತಂಡ ಟೂರ್ನಿಯ ಪ್ರತಿ ಪಂದ್ಯದಲ್ಲೂ ಕನಿಷ್ಠ 2ರಂತೆ ಒಟ್ಟು 19 ಗೋಲು ಸಿಡಿಸಿದ ಸಾಧನೆ ಮಾಡಿದ್ದರೆ, ಸ್ಪೇನ್ ತಂಡ ಇದುವರೆಗೆ 7 ಪಂದ್ಯಗಳಲ್ಲಿ 1 ಗೋಲು ಮಾತ್ರ ಬಿಟ್ಟುಕೊಟ್ಟಿದೆ. ಅರ್ಜೆಂಟೀನಾ ಪರ ಮೆಸ್ಸಿ ಜತೆಗೆ ಒಟ್ಟು 8 ಆಟಗಾರರು ಇದುವರೆಗೆ ಕನಿಷ್ಠ 1 ಗೋಲು ಸಿಡಿಸಿದ್ದರೆ, ಸ್ಪೇನ್ ಗೋಲು ಕೀಪರ್ ಉನೈ ಸೈಮನ್ ಟೂರ್ನಿಯ ಆರಂಭಿಕ 650 ನಿಮಿಷಗಳಲ್ಲಿ ಒಂದೂ ಗೋಲು ಬಿಟ್ಟುಕೊಟ್ಟಿರಲಿಲ್ಲ. 6 ಪಂದ್ಯಗಳಲ್ಲಿ ಅವರು ಒಂದೂ ಗೋಲು ನೀಡದ "ಕ್ಲೀನ್ಶೀಟ್' ಹೊಂದಿದ್ದಾರೆ. ಅರ್ಜೆಂಟೀನಾ ತಂಡ ಇದುವರೆಗೆ 7 ಗೋಲು ಬಿಟ್ಟುಕೊಟ್ಟಿದೆ. ಆದರೆ ಅದರ ಗೋಲು ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಕಳೆದ ಆವೃತ್ತಿಯ ಗೋಲ್ಡನ್ ಗ್ಲೌ ಪ್ರಶಸ್ತಿ ವಿಜೇತ ಮತ್ತು 2024ರ ಯುರೋಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಗಮನಾರ್ಹ.