ಮೆಸ್ಸಿ ಕೈಗೆ ಫಿಫಾ ವಿಶ್ವಕಪ್​ ಒಪ್ಪಿಸಲು ಇಡೀ ಟೂರ್ನಿಯೇ ಫಿಕ್ಸ್ ಆಗಿದೆ: ಈಜಿಪ್ಟ್ ಆಟಗಾರನಿಂದ ಶಾಕಿಂಗ್​ ಹೇಳಿಕೆ! FIFA World Cup 2026  
ಫುಟ್ಬಾಲ್

ಮೆಸ್ಸಿ ಕೈಗೆ ಫಿಫಾ ವಿಶ್ವಕಪ್​ ಒಪ್ಪಿಸಲು ಇಡೀ ಟೂರ್ನಿಯೇ ಫಿಕ್ಸ್ ಆಗಿದೆ: ಈಜಿಪ್ಟ್ ಆಟಗಾರನಿಂದ ಶಾಕಿಂಗ್​ ಹೇಳಿಕೆ! FIFA World Cup 2026

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್​ನಲ್ಲಿ ಅರ್ಜೆಂಟೀನಾ ವಿರುದ್ಧ ಸೋತು ಹೊರಬಿದ್ದ ಬೆನ್ನಲ್ಲೇ ಈಜಿಪ್ಟ್ ಆಕ್ರೋಶ
  • ಟೂರ್ನಿ ಮೊದಲೇ ಫಿಕ್ಸ್ ಆಗಿದೆ ಎಂದು ರೆಫರಿ ವಿರುದ್ಧ ಜಿಕೊ ಗಂಭೀರ ಆರೋಪ
  • ಈಜಿಪ್ಟ್ ಗೋಲು ರದ್ದು, ಪೆನಾಲ್ಟಿ ನಿರಾಕರಣೆ ಬೆನ್ನಲ್ಲೇ ಭುಗಿಲೆದ್ದ ವಿವಾದ
  • ಈಜಿಪ್ಟ್ ವಿರುದ್ಧ 2-3 ಅಂತರದಲ್ಲಿ ಅರ್ಜೆಂಟೀನಾಗೆ ಐತಿಹಾಸಿಕ ಕಮ್‌ಬ್ಯಾಕ್ ಗೆಲುವು
FIFA World Cup 2026 : ಫಿಫಾ ವಿಶ್ವಕಪ್‌ನ ರೌಂಡ್ ಆಫ್ 16 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 2-3 ಅಂತರದಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಈಜಿಪ್ಟ್ ತಂಡದ ಆಟಗಾರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಪಂದ್ಯದಲ್ಲಿ ರೆಫರಿ ತೆಗೆದುಕೊಂಡು ನಿರ್ಧಾರಗಳು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿವೆ.
ಪಂದ್ಯದ ವೇಳೆ ಮೆಸ್ಸಿ ಪೆನಾಲ್ಟಿ ಮಿಸ್ ಮಾಡಿದ್ದು ಹಾಗೂ ಈಜಿಪ್ಟ್ ಗಳಿಸಿದ ಗೋಲನ್ನು ವಿಎಆರ್ ಮೂಲಕ ರದ್ದುಗೊಳಿಸಿದ್ದು ಮತ್ತು ಈಜಿಪ್ಟ್‌ಗೆ ಸಿಗಬೇಕಿದ್ದ ಪೆನಾಲ್ಟಿಯನ್ನು ನಿರಾಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಇದೇ ಬೇಸರದಲ್ಲಿ ಮಾತನಾಡಿದ, ರದ್ದಾದ ಗೋಲು ಬಾರಿಸಿದ ಈಜಿಪ್ಟ್ ಫಾರ್ವರ್ಡ್ ಆಟಗಾರ ಮುಸ್ತಫಾ ಜಿಕೊ, ಈ ಬಾರಿ ವಿಶ್ವಕಪ್ ಅನ್ನು ಅರ್ಜೆಂಟೀನಾ ಕೈಗೊಪ್ಪಿಸಲು ಟೂರ್ನಿಯನ್ನು ಮೊದಲೇ ಫಿಕ್ಸ್ ಮಾಡಲಾಗಿದೆ ಎಂದು ನೇರವಾಗಿಯೇ ರೆಫರಿ ವಿರುದ್ಧ ಗಂಭೀರ ಆರೋಪ ಮಾಡಿರುವುದು ಜಾಗತಿಕ ಫುಟ್‌ಬಾಲ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಪಂದ್ಯದ 60ನೇ ನಿಮಿಷದ ಸುಮಾರಿಗೆ ಮುಸ್ತಫಾ ಜಿಕೊ ಗಳಿಸಿದ ಗೋಲಿನ ನೆರವಿನಿಂದ ಈಜಿಪ್ಟ್ 2-0 ಅಂತರದ ಭರ್ಜರಿ ಮುನ್ನಡೆ ಸಾಧಿಸಿತ್ತು. ಆದರೆ, ಈ ಗೋಲಿಗೆ ಕಾರಣವಾದ ಮೂವ್ ವೇಳೆ ಈಜಿಪ್ಟ್‌ನ ಹೈಸಮ್ ಹಸನ್, ಅರ್ಜೆಂಟೀನಾದ ಡಿಫೆಂಡರ್ ಲಿಸಾಂಡ್ರೊ ಮಾರ್ಟಿನೆಜ್ ವಿರುದ್ಧ ಫೌಲ್ ಮಾಡಿದ್ದಾರೆ ಎಂದು ವಿಎಆರ್ ಪರಿಶೀಲನೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ರೆಫರಿ ಆ ಗೋಲನ್ನು ರದ್ದುಗೊಳಿಸಿದರು. ಇದು ಈಜಿಪ್ಟ್​ ಸೋಲಿಗೆ ಪ್ರಮುಖ ಕಾರಣವಾಯಿತು.
ಈ ಪಂದ್ಯವನ್ನು ಸೋತ ಬಳಿಕ ಮಾತನಾಡಿದ ಜಿಕೊ, ಪಂದ್ಯದ ರೆಫರಿ ಫ್ರಾಂಕೋಯಿಸ್ ಲೆಟೆಕ್ಸಿಯರ್ ವಿರುದ್ಧ ಆಕ್ರೋಶ ಹೊರಹಾಕಿದರು. ರೆಫರಿ ಅತ್ಯಂತ ಅನ್ಯಾಯವಾಗಿ ವರ್ತಿಸಿದ್ದಾರೆ, ನಮ್ಮ ದೇಶದ ಶ್ರಮವನ್ನು ರೆಫರಿ ಸಂಪೂರ್ಣ ಹಾಳುಮಾಡಿದ್ದಾರೆ ಅಂತ ಜಿಕೊ ಕಿಡಿಕಾರಿದ್ದಾರೆಂದು ಪ್ರಸಿದ್ಧ ಇಟಾಲಿಯನ್ ಪತ್ರಕರ್ತ ಫ್ಯಾಬ್ರಿಜಿಯೊ ರೊಮಾನೋ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಶ್ವಕಪ್ ಅನ್ನು ನೇರವಾಗಿ ಅರ್ಜೆಂಟೀನಾ ಕೈಗೆ ನೀಡಲಾಗುತ್ತಿದೆ, ಅವರೇ ಕಪ್ ಗೆಲ್ಲಲಿದ್ದಾರೆ. ಇದರಲ್ಲಿ ಯಾವುದೇ ನ್ಯಾಯವಿಲ್ಲ, ಇದು ಸ್ಪಷ್ಟ ಮತ್ತು ಬಹಿರಂಗ ಅನ್ಯಾಯವಾಗಿದೆ. ಪಂದ್ಯದ ಆರಂಭದಿಂದಲೂ ರೆಫರಿ ನಮ್ಮ ವಿರುದ್ಧವಾಗಿಯೇ ಇದ್ದರು. ನಾವು ಅರ್ಜೆಂಟೀನಾ ವಿರುದ್ಧ 2-0 ಅಂತರದಲ್ಲಿ ಗೆದ್ದು ಮುನ್ನಡೆಯುವುದನ್ನು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ, ಈ ಇಡೀ ಟೂರ್ನಿಯೇ ಮೊದಲೇ ಫಿಕ್ಸ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಒಂದು ಆರೋಪ ಫುಟ್​ಬಾಲ್​ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ, ಮಂಗಳವಾರ ನಡೆದ ಪಂದ್ಯದ ಬಹುಪಾಲು ಸಮಯ, ತಮ್ಮ ಆರನೇ ಹಾಗೂ ಬಹುಶಃ ಕೊನೆಯ ವಿಶ್ವಕಪ್ ಆಡುತ್ತಿರುವ 39 ವರ್ಷದ ಲಿಯೋನೆಲ್ ಮೆಸ್ಸಿಗೆ ಅತ್ಯಂತ ನೋವಿನ ವಿದಾಯವಾಗಲಿದೆ ಎಂದೇ ತೋರುತ್ತಿತ್ತು. ಏಕೆಂದರೆ, ಮೆಸ್ಸಿ ತಂಡ ಸಂಪೂರ್ಣ ಹಿನ್ನಡೆ ಅನುಭವಿಸಿತ್ತು. ಪಂದ್ಯದ ಎರಡೂ ಅವಧಿಗಳಲ್ಲಿ ಯಾಸರ್ ಇಬ್ರಾಹಿಂ ಮತ್ತು ಮುಸ್ತಫಾ ಜಿಕೊ ಗಳಿಸಿದ ಅದ್ಭುತ ಗೋಲುಗಳ ನೆರವಿನಿಂದ ಈಜಿಪ್ಟ್ ಮೇಲುಗೈ ಸಾಧಿಸಿತ್ತು. ಒಂದು ವೇಳೆ ವಿಡಿಯೋ ರಿವ್ಯೂ ಮೂಲಕ ಮತ್ತೊಂದು ಗೋಲನ್ನು ರದ್ದುಗೊಳಿಸದೇ ಇದ್ದಿದ್ದರೆ ಈಜಿಪ್ಟ್ 3-0 ಅಂತರದ ಪ್ರಚಂಡ ಮುನ್ನಡೆ ಕಾಯ್ದುಕೊಳ್ಳುತ್ತಿತ್ತು. ಇದರಿಂದಾಗಿ, 1958 ಮತ್ತು 1962ರಲ್ಲಿ ಬ್ರೆಜಿಲ್ ಮಾಡಿದ ಸಾಧನೆಯ ನಂತರ ಸತತವಾಗಿ ಎರಡನೇ ಬಾರಿಗೆ ವಿಶ್ವಕಪ್ ಮುಕುಟ ಧರಿಸುವ ಅರ್ಜೆಂಟೀನಾದ ಕನಸು ಸಂಪೂರ್ಣವಾಗಿ ಭಗ್ನಗೊಂಡಂತೆ ಕಾಣುತ್ತಿತ್ತು ಮತ್ತು ಅವರು ಟೂರ್ನಿಯಿಂದ ಹೊರಬೀಳುವುದು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ, 79ನೇ ನಿಮಿಷದಲ್ಲಿ ಅರ್ಜೆಂಟೀನಾದ ಡಿಫೆಂಡರ್ ಕ್ರಿಸ್ಟಿಯನ್ ರೊಮೆರೊ ಹೆಡರ್ ಮೂಲಕ ಗೋಲು ಬಾರಿಸಿ ತಂಡದ ಮರುಹೋರಾಟಕ್ಕೆ ನಾಂದಿ ಹಾಡಿದರು. ಇದರ ಬೆನ್ನಲ್ಲೇ 83ನೇ ನಿಮಿಷದಲ್ಲಿ ಅಬ್ಬರಿಸಿದ ಲಿಯೋನೆಲ್ ಮೆಸ್ಸಿ, ಈ ಟೂರ್ನಿಯಲ್ಲಿ ತಮ್ಮ 8ನೇ ಹಾಗೂ ವಿಶ್ವಕಪ್ ಇತಿಹಾಸದಲ್ಲಿ ತಮ್ಮ ದಾಖಲೆಯ 21ನೇ ಗೋಲು ಗಳಿಸಿ ಪಂದ್ಯವನ್ನು 2-2 ರಿಂದ ಸಮಬಲಕ್ಕೆ ತಂದರು. ಇನ್ನು ಪಂದ್ಯದ ಇಂಜುರಿ ಟೈಮ್‌ನಲ್ಲಿ (ಹೆಚ್ಚುವರಿ ಸಮಯ) ಎಂಜೊ ಫೆರ್ನಾಂಡಿಸ್ ವಿನ್ನಿಂಗ್ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾದ ಐತಿಹಾಸಿಕ ಕಮ್‌ಬ್ಯಾಕ್ ಪೂರ್ಣಗೊಳಿಸಿದರು. ಪಂದ್ಯ ಮುಕ್ತಾಯದ ವಿಸಿಲ್​ ಬಿದ್ದ ತಕ್ಷಣವೇ ನಾಯಕ ಮೆಸ್ಸಿ ಮೈದಾನದಲ್ಲೇ ಆನಂದಬಾಷ್ಪ ಸುರಿಸಿದ್ದು ಎಲ್ಲರ ಗಮನ ಸೆಳೆಯಿತು, (ಏಜೆನ್ಸೀಸ್​).