FIFA WorldCup: ಬಾಲೋಗುನ್ ಪಂದ್ಯ ನಿಷೇಧ ಹಿಂಪಡೆದ ಫಿಫಾ; ಟ್ರಂಪ್ ಮಧ್ಯಪ್ರವೇಶ ಕಾರಣ!
- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶ; ಫಿಫಾ ಅಧ್ಯಕ್ಷರ ಜತೆ ಮಾತುಕತೆ
- ಬೆಲ್ಜಿಯಂ, ಯುಎಎಫ್ಎ ತೀವ್ರ ಆಕ್ಷೇಪ, ಮೇಲ್ಮನವಿ ಸಾಧ್ಯತೆ
ಸಿಯಾಟಲ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಧ್ಯಪ್ರವೇಶಿಸಿ, ಫಿಫಾ ಅಧ್ಯಕ್ಷ ಗಿಯಾನ್ನಿ ಇನ್ಫಾಂಟಿನೋಗೆ ಕರೆ ಮಾಡಿ ಮಾತನಾಡಿದ ಬೆನ್ನಲ್ಲೇ ಸ್ಟಾರ್ ಆಟಗಾರ ಫೋಲಾರಿನ್ ಬಾಲೋಗುನ್ ರೆಡ್ ಕಾರ್ಡ್ ಪಡೆದ ಬಳಿಕ ಎದುರಾಗಿದ್ದ 1 ಪಂದ್ಯ ನಿಷೇಧವನ್ನು ಫಿಫಾ ಹಿಂಪಡೆದಿದೆ. ಇದರಿಂದಾಗಿ ಬಾಲೋಗುನ್ ಬೆಲ್ಜಿಯಂ ವಿರುದ್ಧದ ಫಿಫಾ ವಿಶ್ವಕಪ್ (FIFA WorldCup) 16ರ ಘಟ್ಟದ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಆದರೆ ಫಿಫಾದ ಈ ನಿರ್ಧಾರಕ್ಕೆ ಬೆಲ್ಜಿಯಂ ತಂಡ ಮತ್ತು ಯುರೋಪ್ ಫುಟ್ಬಾಲ್ ಒಕ್ಕೂಟ (ಯುಎಎಫ್ಎ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಈ ನಿರ್ಧಾರದ ವಿರುದ್ಧ ಬೆಲ್ಜಿಯಂ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.
ಬಾಲೋಗುನ್ ಬೋಸ್ನಿಯಾ ವಿರುದ್ಧದ 32ರ ಘಟ್ಟದ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿದ್ದರು. ಇದರಿಂದ 16ರ ಘಟ್ಟದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಆದರೆ ಟ್ರಂಪ್, ಇನ್ಫಾಂಟಿನೋಗೆ ಕರೆ ಮಾಡಿ ರೆಡ್ ಕಾರ್ಡ್ ನಿರ್ಧಾರವನ್ನು ಪರಾಮರ್ಶೆ ಮಾಡುವಂತೆ ಕೋರಿದ್ದರು. ಇದರ ಬೆನ್ನಲ್ಲೇ ಫಿಫಾ, 1 ಪಂದ್ಯ ನಿಷೇಧ ರದ್ದುಗೊಳಿಸಿದರೆ, ಫಿಫಾಗೆ ಟ್ರಂಪ್ ಧನ್ಯವಾದ ಹೇಳಿದ್ದಾರೆ.
ಕಳೆದ 64 ವರ್ಷಗಳಲ್ಲಿ ಮೊದಲ ಬಾರಿ ರೆಡ್ ಕಾರ್ಡ್ ಪಡೆದ ಆಟಗಾರನಿಗೆ ಮರುಪಂದ್ಯ ಆಡುವ ಅವಕಾಶ ಲಭಿಸಿದೆ. 1962ರಲ್ಲಿ ಬ್ರೆಜಿಲ್ ತಾರೆ ಗ್ಯಾರಿಂಚಾಗೆ ಫೈನಲ್ ಆಡುವ ಅವಕಾಶ ಕಲ್ಪಿಸಲಾಗಿತ್ತು.