FIFA WorldCup: ಎರ್ಲಿಂಗ್ ಹಾಲೆಂಡ್ ಕಟ್ಟಿಹಾಕಿ ಗೆದ್ದ ಆಂಗ್ಲರು; ನಾರ್ವೆ ತಾರೆ 636 ದಿನಗಳ ಬಳಿಕ ಗೋಲುರಹಿತ!
ಮಿಯಾಮಿ: ರಿಯಲ್ ಮ್ಯಾಡ್ರಿಡ್ ಮಿಡ್ಫೀಲ್ಡರ್ ಜೂಡ್ ಬೆಲ್ಲಿಂಗ್ಹ್ಯಾಂ (45+2, 93ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ಬಲದಿಂದ ಇಂಗ್ಲೆಂಡ್ ತಂಡ ಫಿಫಾ ವಿಶ್ವಕಪ್ (FIFA WorldCup) ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ನಾರ್ವೆ ವಿರುದ್ಧ 2-1 ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ ತ್ರಿ ಲಯನ್ಸ್ ಖ್ಯಾತಿಯ ಇಂಗ್ಲೆಂಡ್ ತಂಡ 8 ವರ್ಷಗಳ ಬಳಿಕ ಮತ್ತು ಒಟ್ಟಾರೆ 4ನೇ ಬಾರಿ ವಿಶ್ವಕಪ್ ಅಂತಿಮ ನಾಲ್ಕರ ಘಟ್ಟಕ್ಕೇರಿದೆ. 28 ವರ್ಷಗಳ ಬಳಿಕ ವಿಶ್ವಕಪ್ಗೆ ಮರಳಿದ್ದ ನಾರ್ವೆ, ಕ್ವಾರ್ಟರ್ಫೈನಲ್ನಲ್ಲಿ ಸವಾಲು ಅಂತ್ಯಗೊಳಿಸಿತು. ನಾರ್ವೆಯ ಸ್ಟಾರ್ ಆಟಗಾರ ಎರ್ಲಿಂಗ್ ಹಾಲೆಂಡ್ (Erling Haaland) ಸತತ 14 ಪಂದ್ಯಗಳ ಬಳಿಕ ಗೋಲು ಸಿಡಿಸದಂತೆ ಕಟ್ಟಿಹಾಕಿದ್ದು ಆಂಗ್ಲರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಭಾರತೀಯ ಕಾಲಮಾನ ಪ್ರಕಾರ ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ನಾರ್ವೆ ಆರಂಭಿಕ ಮುನ್ನಡೆ ಸಾಧಿಸಿತು. ಆಂಡ್ರಿಯಾಸ್ ಸ್ಕೆಜೆಲ್ಡೆರಪ್ 36ನೇ ನಿಮಿಷದಲ್ಲಿ ನಾರ್ವೆಗೆ ಮುನ್ನಡೆ ಒದಗಿಸಿದರು. ಆದರೆ ಮೊದಲಾರ್ಧದ ಇಂಜುರಿ ಸಮಯದ 2ನೇ ನಿಮಿಷದಲ್ಲಿ 23 ವರ್ಷದ ಬೆಲ್ಲಿಂಗ್ಹ್ಯಾಂ ಪಂದ್ಯದ ಮೊದಲ ಗೋಲು ಬಾರಿಸಿ ಆಂಗ್ಲರಿಗೆ ಸಮಬಲ ಒದಗಿಸಿದರು. ಬಳಿಕ ದ್ವೀತಿಯಾರ್ಧದಲ್ಲಿ ಒಂದೂ ಗೋಲು ದಾಖಲಾಗದ ಕಾರಣ ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಿಸಲ್ಪಟ್ಟಿತು. ಆಗ ಮೂರು ನಿಮಿಷಗಳ ಆಟದಲ್ಲೇ ಬೆಲ್ಲಿಂಗ್ಹ್ಯಾಂ ಆಂಗ್ಲರಿಗೆ ಗೆಲುವಿನ ಗೋಲು ತಂದುಕೊಟ್ಟರು.
56ನೇ ನಿಮಿಷದಲ್ಲಿ ನಾರ್ವೆಗೆ 2-1 ಮುನ್ನಡೆ ಸಾಧಿಸುವ ಅವಕಾಶ ಲಭಿಸಿತ್ತು. ಆದರೆ ಕಾರ್ನರ್ ಕಿಕ್ನಲ್ಲಿ ಇಂಗ್ಲೆಂಡ್ ಗೋಲು ಕೀಪರ್ ಜೋರ್ಡನ್ ಪಿಕ್ಫೋರ್ಡ್ ಕೈಯಿಂದ ರಿಬೌಂಡ್ ಆದ ಚೆಂಡನ್ನು ಟಾರ್ಬ್ಜಾರ್ನ್ ಹೆಗ್ಗೆಮ್ ಗೋಲು ಪೆಟ್ಟಿಗೆ ಸೇರಿಸಿದರೂ, ಆ ವೇಳೆ ಹಾಲೆಂಡ್ ಇಂಗ್ಲೆಂಡ್ ಆಟಗಾರನೊಬ್ಬನನ್ನು ತಳ್ಳಿ ಫೌಲ್ ಮಾಡಿದ್ದ ವಿಡಿಯೋ ಪರಾಮರ್ಶೆ (ವಿಎಆರ್) ವೇಳೆ ಸ್ಪಷ್ಟವಾಗಿದ್ದರಿಂದ ಆ ಗೋಲು ಅಮಾನ್ಯಗೊಂಡಿತು. ಪಂದ್ಯದ ವೇಳೆ ಭಾರಿ ಬಿಸಿಲಿನ ವಾತಾವರಣ ಉಭಯ ತಂಡಗಳ ಆಟಗಾರರನ್ನೂ ಸತಾಯಿಸಿತು.
1966ರ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ಇದೀಗ 60 ವರ್ಷಗಳ ಬಳಿಕ ಮತ್ತೆ ಪ್ರಶಸ್ತಿ ಸುತ್ತಿಗೇರುವ ಅವಕಾಶ ಪಡೆದಿದೆ. ಬೆಲ್ಲಿಂಗ್ಹ್ಯಾಂ ಈ ಮುನ್ನ ಮೆಕ್ಸಿಕೋ ವಿರುದ್ಧದ 16ರ ಟ್ಟದ ಪಂದ್ಯದಲ್ಲೂ ಅವಳಿ ಗೋಲು ಸಿಡಿಸಿ ಮಿಂಚಿದ್ದರು. ಇಂಗ್ಲೆಂಡ್ 4ನೇ ಬಾರಿ ವಿಶ್ವಕಪ್ ಉಪಾಂತ್ಯಕ್ಕೇರಿದೆ. ಈ ಮುನ್ನ 1966, 1990, 2018ರಲ್ಲಿ ಈ ಸಾಧನೆ ಮಾಡಿತ್ತು.
ಹಾಲೆಂಡ್ 636 ದಿನಗಳ ಬಳಿಕ ಗೋಲುರಹಿತ!
ನಾರ್ವೆ ತಂಡ ಮೊಟ್ಟಮೊದಲ ಬಾರಿ 8ರ ಘಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 25 ವರ್ಷದ ತಾರೆ ಎರ್ಲಿಂಗ್ ಹಾಲೆಂಡ್, ನಿರ್ಣಾಯಕ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಇದರಿಂದಾಗಿ ಹೆಚ್ಚುವರಿ ಅವಧಿಯ ಮೊದಲಾರ್ಧದ ಬಳಿಕ ಅವರ ಬದಲಿಗೆ ಬೇರೆ ಆಟಗಾರನನ್ನು ಕಣಕ್ಕಿಳಿಸುವ ಕಠಿಣ ನಿರ್ಧಾರವನ್ನು ನಾರ್ವೆ ಕೋಚ್ ಸ್ಟೇಲ್ ಸೋಲ್ಬಕ್ಕೆನ್ ತೆಗೆದುಕೊಂಡರು. ವಿಶ್ವಕಪ್ನ ಹಿಂದಿನ 4 ಪಂದ್ಯಗಳಲ್ಲಿ 7 ಗೋಲು ಸಿಡಿಸಿದ್ದ ಹಾಲೆಂಡ್, ಸ್ಪರ್ಧಾತ್ಮಕ ಫುಟ್ಬಾಲ್ನಲ್ಲಿ ಸತತ 14 ಪಂದ್ಯ ಮತ್ತು 636 ದಿನಗಳ ಬಳಿಕ ಗೋಲು ಬಾರಿಸಲು ವಿಫಲರಾದರು. 2024ರ ಅಕ್ಟೋಬರ್ನಿಂದಲೂ ಅವರು ನಾರ್ವೆ ಪರ ಸತತ ಗೋಲು ಸಿಡಿಸುತ್ತ ಬಂದಿದ್ದರು. ಹಾಲೆಂಡ್ ಜತೆ ಮ್ಯಾಂಚೆಸ್ಟರ್ ಸಿಟಿ ತಂಡದಲ್ಲಿ ಆಡುವ ಕೆಲ ಆಟಗಾರರೇ ಇಂಗ್ಲೆಂಡ್ ತಂಡದಲ್ಲಿದ್ದರು ಮತ್ತು ಅವರು ಹಾಲೆಂಡ್ಗೆ ಚೆಂಡು ಹೆಚ್ಚು ಸಿಗದಂತೆ ನೋಡಿಕೊಂಡರು. ದ್ವೀತಿಯಾರ್ಧದಲ್ಲಿ ಹಾಲೆಂಡ್ ಮಾಡಿದ ಫೌಲ್ ನಾರ್ವೆಗೆ ಮುನ್ನಡೆಯನ್ನೂ ತಪ್ಪಿಸಿತು.