FIFA WorldCup: ಕ್ಯಾಮರಾ ಕೇಬಲ್​ನಿಂದಾಗಿ ವಿವಾದಕ್ಕೀಡಾದ ಗೋಲು! 
ಫುಟ್ಬಾಲ್

FIFA WorldCup: ಕ್ಯಾಮರಾ ಕೇಬಲ್​ನಿಂದಾಗಿ ವಿವಾದಕ್ಕೀಡಾದ ಬೆಲ್ಲಿಂಗ್​ಹ್ಯಾಂ ಗೋಲು!

ಮಿಯಾಮಿ: ಜೂಡ್​ ಬೆಲ್ಲಿಂಗ್​ಹ್ಯಾಂ (Jude Bellingham) ನಾರ್ವೆ ವಿರುದ್ಧದ ಫಿಫಾ ವಿಶ್ವಕಪ್ (FIFA WorldCup)​ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ಪರ ಸಿಡಿಸಿದ ಪಂದ್ಯದ ಸಮಬಲದ ಗೋಲು ಭಾರಿ ವಿವಾದಕ್ಕೀಡಾಗಿದ್ದು, ಅದರ ಮಾನ್ಯತೆ-ಅಮಾನ್ಯತೆಯ ಬಗ್ಗೆಯೂ ಬಿಸಿಬಿಸಿ ಚರ್ಚೆಗಳು ನಡೆದಿವೆ.

ನಾರ್ವೆ ಗೋಲು ಕೀಪರ್​ ಓರ್ಜನ್​ ನೈಲ್ಯಾಂಡ್​ ಗಾಳಿಯಲ್ಲಿ ಒದ್ದ ಚೆಂಡು ಅರ್ಧ ಮೈದಾನದಷ್ಟು ದೂರ ಸಾಗಿದಾಗ ಏರಿಯಲ್​ ಕ್ಯಾಮರಾದ ಕೇಬಲ್​ ಸ್ಪರ್ಶಿಸಿ ದಿಕ್ಕು ಬದಲಾಯಿಸಿದಂತೆ ಕಂಡಿತು. ಇಂಗ್ಲೆಂಡ್​ನ ಎಲಿಯಟ್​ ಆಂಡರ್​ಸನ್​ಗೆ ಈ ಚೆಂಡು ಸಿಕ್ಕ ಕೂಡಲೆ ಅವರು ಗೋಲುಪೆಟ್ಟಿಗೆಯತ್ತ ಮುನ್ನುಗ್ಗಿ ಬಂದರು. ಅಂತಿಮವಾಗಿ ಬೆಲ್ಲಿಂಗ್​ಹ್ಯಾಂಗೆ ಚೆಂಡು ಪಾಸ್​ ಆದಾಗ ಅವರು ಅದನ್ನು ಗೋಲಾಗಿಸಿದರು. ಆದರೆ ಚೆಂಡು ಕೇಬಲ್​ಗೆ ಸ್ಪರ್ಶಿಸಿದಾಗಲೇ ಆಟ ಅಲ್ಲಿಗೆ ಸ್ಥಗಿತಗೊಂಡು, ಪುನರಾರಂಭ ಕಾಣಬೇಕಾಗಿತ್ತು. ಹೀಗಾಗಿ ಈ ಗೋಲು ಅಮಾನ್ಯವಾಗಬೇಕಿತ್ತು ಎಂಬ ವಾದ ಕೇಳಿಬಂದಿತು.

ನಾರ್ವೆ ಆಟಗಾರರು ಗೋಲಿಗೆ ಆಕ್ಷೇಪ ಎತ್ತಿದರೂ, ರೆಫ್ರಿ ಅದನ್ನು ಮಾನ್ಯಗೊಳಿಸಿದರು. ಬಳಿಕ ಸ್ಪಷ್ಟನೆ ನೀಡಿದ ಫಿಫಾ, ಚೆಂಡು ಕೇಬಲ್​ಗೆ ಸ್ಪರ್ಶಿಸಿದ ಬಗ್ಗೆ ಅದರಲ್ಲಿನ ಸೆನ್ಸರ್​ನಿಂದ ಯಾವುದೇ ಮಾಹಿತಿ ದಾಖಲಾಗಿಲ್ಲ. ಹೀಗಾಗಿ ಗೋಲು ಮಾನ್ಯಗೊಂಡಿದೆ ಎಂದಿದೆ.