FIFA WorldCup: ಮೆಕ್ಸಿಕೋ ಕನಸಿನ ಓಟಕ್ಕೆ ಆಂಗ್ಲರಿಂದ ತಡೆ 
ಫುಟ್ಬಾಲ್

FIFA WorldCup: ಮೆಕ್ಸಿಕೋ ಕನಸಿನ ಓಟಕ್ಕೆ ಆಂಗ್ಲರಿಂದ ತಡೆ

ಮೆಕ್ಸಿಕೋ ಸಿಟಿ: ಜೂಡ್​ ಬೆಲ್ಲಿಂಗ್​ಹ್ಯಾಂ (36, 38ನೇ ನಿಮಿಷ) ಮತ್ತು ನಾಯಕ ಹ್ಯಾರಿ ಕೇನ್​ (60ನೇ ನಿಮಿಷ, ಪೆನಾಲ್ಟಿ) ಜೋಡಿಯ ಅಮೋಘ ನಿರ್ವಹಣೆಯ ಬಲದಿಂದ ಇಂಗ್ಲೆಂಡ್​ ತಂಡ ಫಿಫಾ ವಿಶ್ವಕಪ್ (FIFA WorldCup)​ 16ರ ಘಟ್ಟದಲ್ಲಿ ಸಹ-ಆತಿಥೇಯ ಮೆಕ್ಸಿಕೋ ತಂಡಕ್ಕೆ 3-2 ಅಂತರದಿಂದ ಸೋಲುಣಿಸಿದೆ. ಇದರಿಂದ ಟೂರ್ನಿಯಲ್ಲಿ ಮೆಕ್ಸಿಕೋ ತಂಡದ ಕನಸಿನ ಓಟಕ್ಕೆ ತಡೆಬಿದ್ದಿತು. ಜತೆಗೆ ಅಜ್ಟೆಕಾ ಸ್ಟೇಡಿಯಂನಲ್ಲಿ ಮೆಕ್ಸಿಕೋದ ಅಜೇಯ ದಾಖಲೆಯೂ ಕೊನೆಗೊಂಡಿತು. ಇಲ್ಲಿ ಆಡಿದ ಹಿಂದಿನ 10 ವಿಶ್ವಕಪ್​ ಪಂದ್ಯಗಳಲ್ಲೂ ಮೆಕ್ಸಿಕೋ ಸೋತಿರಲಿಲ್ಲ. ತ್ರಿ ಲಯನ್ಸ್​ ಖ್ಯಾತಿಯ ಇಂಗ್ಲೆಂಡ್​ ಸತತ 3ನೇ ಬಾರಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದೆ.
ಭಾರತೀಯ ಕಾಲಮಾನ ಪ್ರಕಾರ ಸೋಮವಾರ ಬೆಳಗ್ಗೆ ನಡೆದ ಪಂದ್ಯದ ಮೊದಲಾರ್ಧದಲ್ಲಿ ಬೆಲ್ಲಿಂಗ್​ಹ್ಯಾಂ ಕೇವಲ 98 ಸೆಕೆಂಡ್​ಗಳ ಅಂತರದಲ್ಲಿ 2 ಗೋಲು ಸಿಡಿಸಿ ಆಂಗ್ಲರಿಗೆ ಮುನ್ನಡೆ ಒದಗಿಸಿದರು. ಹೆಡರ್​ ಮೂಲಕ ಮೊದಲ ಗೋಲು ಬಾರಿಸಿದ ರಿಯಲ್​ ಮ್ಯಾಡ್ರಿಡ್​ನ 23 ವರ್ಷದ ತಾರೆ ಬೆಲ್ಲಿಂಗ್​ಹ್ಯಾಂ, ಹ್ಯಾರಿ ಕೇನ್​ ನೀಡಿದ ಪಾಸ್​ನಲ್ಲಿ 2ನೇ ಗೋಲು ಬಾರಿಸಿದರು. ಮೆಕ್ಸಿಕೋ ಟೂರ್ನಿಯಲ್ಲಿ ಆಡಿದ ಹಿಂದಿನ 4 ಪಂದ್ಯಗಳಲ್ಲೂ ಗೋಲು ಬಿಟ್ಟುಕೊಟ್ಟಿರಲಿಲ್ಲ. 42ನೇ ನಿಮಿಷದಲ್ಲಿ ಜೂಲಿಯನ್​ ಕ್ವಿನೋನ್ಸ್​ ಮೆಕ್ಸಿಕೋ ಹಿನ್ನಡೆ ತಗ್ಗಿಸಿದರು.

ಪಂದ್ಯದ 54ನೇ ನಿಮಿಷದಲ್ಲಿ ಜೀಸಸ್​ ಗಲ್ಲಾರ್ಡೊಗೆ ಅಪಾಯಕಾರಿ ಫೌಲ್​ ಮಾಡಿದ್ದಕ್ಕಾಗಿ ಜರೆಲ್​ ಕ್ವಾನ್ಸಾ ಕೆಂಪುಕಾರ್ಡ್​ ಪಡೆದು ಹೊರಬಿದ್ದರು. ಬಳಿಕ 10 ಆಟಗಾರರೊಂದಿಗೆ ಆಟ ಮುಂದುವರಿಸಿದ ಇಂಗ್ಲೆಂಡ್​ಗೆ 60ನೇ ನಿಮಿಷದಲ್ಲಿ ಪೆನಾಲ್ಟಿ ಲಭಿಸಿತು. ಇದರಲ್ಲಿ ಹ್ಯಾರಿ ಕೇನ್​ ಟೂರ್ನಿಯ 6ನೇ ಗೋಲು ಸಿಡಿಸಿ ಮುನ್ನಡೆಯನ್ನು 3-1ಕ್ಕೇರಿಸಿದರು. ಬಳಿಕ 69ನೇ ನಿಮಿಷದಲ್ಲಿ ಹ್ಯಾರಿ ಕೇನ್​ ಮಾಡಿದ ಫೌಲ್​ನಿಂದ ಮೆಕ್ಸಿಕೋ ಪೆನಾಲ್ಟಿ ಕಿಕ್​ ಪಡೆದಾಗ, ರೌಲ್​ ಜಿಮೆನೆಜ್​ ಗೋಲು ಬಾರಿಸಿ ಮೆಕ್ಸಿಕೋ ಹಿನ್ನಡೆ ತಗ್ಗಿಸಿದರು. ಬಳಿಕ ಮೆಕ್ಸಿಕೋ ಪಂದ್ಯದ ಉಳಿದ 21 ನಿಮಿಷ ಮತ್ತು ಇಂಜುರಿ ಸಮಯದ 11 ನಿಮಿಷಗಳಲ್ಲಿ ಸಮಬಲದ ಗೋಲು ಸಿಡಿಸಲು ನಡೆಸಿದ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ಇಂಗ್ಲೆಂಡ್​ ಗೋಲು ಕೀಪರ್​ ಜೋರ್ಡನ್​ ಪಿಕ್​ಫೋರ್ಡ್​ ಮತ್ತು ಡಿಫೆಂಡರ್​ಗಳು ಬಲಿಷ್ಠ ತಡೆಗೋಡೆ ನಿರ್ಮಿಸಿದರು.

1986ರ ವಿಶ್ವಕಪ್​ ಆತಿಥ್ಯದ ಬಳಿಕ ಮೆಕ್ಸಿಕೋ ಕ್ವಾರ್ಟರ್​ಫೈನಲ್​ಗೇರದ ಬರ ಮುಂದುವರಿದಿದೆ. ನಂತರ 8 ಬಾರಿ 16ರ ಘಟ್ಟದಲ್ಲೇ ಹೊರಬಿದ್ದಿದ್ದರೆ, 2022ರಲ್ಲಿ ಗ್ರೂಪ್​ ಹಂತವನ್ನೇ ದಾಟಿರಲಿಲ್ಲ.

1986ರಲ್ಲಿ ಡಿಗೋ ಮರಡೋನಾ "ಹ್ಯಾಂಡ್​ ಆಫ್​ ಗಾಡ್​' ಗೋಲಿನಿಂದಾಗಿ ವಿಶ್ವಕಪ್​ನಿಂದ ಹೊರಬಿದ್ದಿದ್ದ ಅಜ್ಟೆಕಾ ಸ್ಟೇಡಿಯಂನಲ್ಲೇ ಇಂಗ್ಲೆಂಡ್​, 40 ವರ್ಷಗಳ ಬಳಿಕ ಗೆಲುವಿನ ಸಂಭ್ರಮ ಕಂಡಿತು. ಪಂದ್ಯಕ್ಕೆ 80,824 ಪ್ರೇಕ್ಷಕರು ಸಾಕ್ಷಿಯಾದರು.