FIFA WorldCup: ಅರ್ಜೆಂಟೀನಾ ಪರ ಪಕ್ಷಪಾತದ ಆರೋಪ; ರೆಫ್ರಿ ವಿರುದ್ಧ ಈಜಿಪ್ಟ್​ ದೂರು 
ಫುಟ್ಬಾಲ್

FIFA WorldCup: ಅರ್ಜೆಂಟೀನಾ ಪರ ಪಕ್ಷಪಾತದ ಆರೋಪ; ರೆಫ್ರಿ ವಿರುದ್ಧ ಈಜಿಪ್ಟ್​ ದೂರು

ಅಟ್ಲಾಂಟಾ: ರೆಫ್ರಿ ಫ್ರಾಂಕೋಯಿಸ್​ ಲೆಟೆಕ್ಸಿಯರ್​ 16ರ ಘಟ್ಟದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಅರ್ಜೆಂಟೀನಾ ಪರ ಪಕ್ಷಪಾತದ ತೀರ್ಪುಗಳನ್ನು ನೀಡಿದ್ದು, ಅವರನ್ನು ಕೂಡಲೆ ಫಿಫಾ ವಿಶ್ವಕಪ್​ನಿಂದ (FIFA WorldCup) ಹೊರದಬ್ಬಬೇಕೆಂದು ಈಜಿಪ್ಟ್​ ಫುಟ್​ಬಾಲ್​ ಒಕ್ಕೂಟ, ಫಿಫಾಗೆ ದೂರು ಸಲ್ಲಿಸಿದೆ. 58ನೇ ನಿಮಿಷದಲ್ಲಿ ಮೊಸ್ತಾ ಜಿಕೋ ಬಾರಿಸಿದ ಗೋಲನ್ನು ರೆಫ್ರಿ ಅಮಾನ್ಯಗೊಳಿಸಿದ್ದಕ್ಕೆ ಈಜಿಪ್ಟ್​ ತಂಡ ತೀವ್ರ ಆಕೋಶ ವ್ಯಕ್ತಪಡಿಸಿದೆ.

ಗೋಲು ದಾಖಲಾಗುವುದಕ್ಕೆ ಮುನ್ನ ಈಜಿಪ್ಟ್​ನ ಮರ್ವನ್​ ಅಟೆಯ, ಅರ್ಜೆಂಟೀನಾದ ಲಿಸಾಂಡ್ರೊ ಮಾರ್ಟಿನೆಜ್​ ಕಾಲು ತುಳಿದು ಫೌಲ್​ ಮಾಡಿದ್ದಾರೆಂದು ವಿಎಆರ್​ ಪರಿಶೀಲನೆಯಲ್ಲಿ ರೆಫ್ರಿ ನಿರ್ಧರಿಸಿ ಗೋಲು ಅಮಾನ್ಯಗೊಳಿಸಿದ್ದರು. "ಫ್ರಾನ್ಸ್​ ರೆಫ್ರಿ ಲೆಟೆಕ್ಸಿಯರ್​ ಮತ್ತು ಅವರ ರೆಫ್ರಿ ತಂಡ ಮಾಡಿದ ಗಂಭೀರ ತಪ್ಪುಗಳು ಮತ್ತು ಅನುಸರಿಸಿದ ದ್ವಂದ್ವ ನೀತಿಗಳಿಂದಲೇ ಈಜಿಪ್ಟ್​ ತಂಡ ವಿಶ್ವಕಪ್​ನಿಂದ ಹೊರಬಿದ್ದಿದೆ' ಎಂದು ಈಜಿಪ್ಟ್ ಫುಟ್​ಬಾಲ್​ ಒಕ್ಕೂಟ ದೂರಿದೆ. ಇದಕ್ಕೆ ಮುನ್ನ ಈಜಿಪ್ಟ್​ ಕೋಚ್​ ಹೊಸಮ್​ ಹಸನ್​ ಕೂಡ ಪಂದ್ಯ ಮುಗಿದ ಬೆನ್ನಲ್ಲೇ, "ನಾವು ಹಾರ್ಡ್​ ಲಕ್​ನಿಂದ ಸೋತಿಲ್ಲ. ನಮಗೆ ಮೋಸ ಮಾಡಲಾಗಿದೆ. ನಾವು ಅನ್ಯಾಯದಿಂದಾಗಿ ಸೋತಿದ್ದೇವೆ. ಹಾಲಿ ಚಾಂಪಿಯನ್​ ತಂಡವನ್ನು, ಅದರಲ್ಲೂ ಮುಖ್ಯವಾಗಿ ಮೆಸ್ಸಿಯನ್ನು ಟೂರ್ನಿಯಲ್ಲಿ ಉಳಿಸಿಕೊಳ್ಳಲು ರೆಫ್ರಿ ಕಾರ್ಯನಿರ್ವಹಿಸಿದಂತಿತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಎಂಜೊ ಗೆಲುವಿನ ಗೋಲು ಸಿಡಿಸುವುದಕ್ಕೆ ಮುನ್ನ ಅರ್ಜೆಂಟೀನಾ ಆಟಗಾರರು, ನಾಯಕ ಮೊಹಮದ್​ ಸಲಾಹ್​ಗೆ ಮಾಡಿದ ಫೌಲ್​ನಿಂದ ನಮಗೆ ಪೆನಾಲ್ಟಿ ಕಿಕ್​ ನೀಡಬೇಕಾಗಿತ್ತು ಎಂಬುದು ಕೂಡ ಈಜಿಪ್ಟ್​ ವಾದವಾಗಿದೆ. ಪಂದ್ಯದ ನಡುವೆ ಹಸನ್​ ಮತ್ತು ಅವರ ತರಬೇತಿ ಬಳಗ, ರೆಫ್ರಿ ಜತೆಗೆ ವಾಗ್ವಾದವನ್ನೂ ನಡೆಸಿತು. ಅಲ್ಲದೆ, "ಜನಾಂಗೀಯ ನಿಂದನೆ ನಿಗ್ರಹ' ಸನ್ನೆ ಪ್ರದರ್ಶಿಸಿದ್ದಕ್ಕಾಗಿ ಹಸನ್​ ರೆಫ್ರಿಯಿಂದ ಹಳದಿ ಕಾರ್ಡ್​ ಕೂಡ ಪಡೆದರು. ಬಳಿಕ ಹಸನ್​ ತಂಡದ ಸದಸ್ಯರೊಬ್ಬರಿಗೆ ಕೆಂಪು ಕಾರ್ಡ್​ ಕೂಡ ನೀಡಲಾಯಿತು. ಪಂದ್ಯದಲ್ಲಿ ಈಜಿಪ್ಟ್​ಗೆ 5 ಹಳದಿ ಕಾರ್ಡ್​ ನೀಡಿದರೆ, ಅರ್ಜೆಂಟೀನಾ ಒಂದೂ ಕಾರ್ಡ್​ ಪಡೆಯಲಿಲ್ಲ.