ಪ್ಲೀಸ್ ಹೋಗಿ ಅಂದ್ರೂ ಜಗ್ಗದ ಅಮೆರಿಕ ಅಧ್ಯಕ್ಷರು: ಪ್ರಚಾರ ಪ್ರಿಯ ಟ್ರಂಪ್ ವರ್ತನೆಯಿಂದ ಸ್ಪೇನ್ ತಂಡಕ್ಕೆ ಮುಜುಗರ! Donald Trump
- ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಸ್ಪೇನ್ ಚಾಂಪಿಯನ್ ಸಂಭ್ರಮಾಚರಣೆ ವೇಳೆ ಕ್ಯಾಮೆರಾ ಫ್ರೇಮ್ ಬಿಡದೆ ಕಾಲಹರಣ ಮಾಡಿದ ಡೊನಾಲ್ಡ್ ಟ್ರಂಪ್
- ಸ್ಪೇನ್ ನಾಯಕ ರೋಡ್ರಿಗೆ ಟ್ರೋಫಿ ಹಸ್ತಾಂತರಿಸಿದ ಮೇಲೆಯೂ ವೇದಿಕೆಯಿಂದ ನಿರ್ಗಮಿಸದೆ ಮುಜುಗರ ಸೃಷ್ಟಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್
- ಸ್ಪೇನ್ ಆಟಗಾರರ ಜೊತೆ ವೇದಿಕೆಯಲ್ಲಿ ನಿಂತು ಪೋಸ್ ನೀಡಲು ಯತ್ನಿಸಿದ ಡೊನಾಲ್ಡ್ ಟ್ರಂಪ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
- ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಹಸ್ತಲಾಘವ ನೀಡದೆ ನಿರ್ಗಮಿಸಿದ ಅರ್ಜೆಂಟೀನಾದ ಕ್ರಿಸ್ಟಿಯನ್ ರೊಮೆರೊ
ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ( Donald Trump ) ಪ್ರಚಾರಪ್ರಿಯ ಅನ್ನೋದು ಇಡೀ ಜಗತ್ತಿಗೆ ತಿಳಿದಿದೆ. ಅದನ್ನು ಸಾಬೀತು ಮಾಡುವ ಮತ್ತೊಂದು ಘಟನೆ ಫಿಫಾ ವಿಶ್ವಕಪ್ 2026ರ ಸಮಾರೋಪ ಸಮಾರಂಭದಲ್ಲಿ ನಡೆದಿದೆ.
ಸ್ಪೇನ್ ತಂಡ ಚಾಂಪಿಯನ್ ಪಟ್ಟಕ್ಕೇರಿ ವೇದಿಕೆಯ ಮೇಲೆ ಟ್ರೋಫಿ ಪಡೆದು ಸಂಭ್ರಮಾಚರಣೆ ಮಾಡುವಾಗ, ಅಮೆರಿಕ ಅಧ್ಯಕ್ಷ ಟ್ರಂಪ್, ಸ್ಪೇನ್ ನಾಯಕ ರೋಡ್ರಿಗೆ ವಿಶ್ವಕಪ್ ಟ್ರೋಫಿ ಹಸ್ತಾಂತರಿಸಿದ ಮೇಲೆಯೂ ಕ್ಯಾಮೆರಾ ಫ್ರೇಮ್‌ನಿಂದ ಹೊರಹೋಗದೆ ಅಲ್ಲಿಯೇ ಕಾಲಹರಣ ಮಾಡಲು ಯತ್ನಿಸಿದರು. ಪ್ರಶಸ್ತಿ ಸಂಭ್ರಮಕ್ಕೆ ಅಡ್ಡಿಯಾಗುತ್ತಿದ್ದಂತೆ ರೋಡ್ರಿ ಅವರು ಸೂಕ್ಷ್ಮವಾಗಿ ಪಕ್ಕಕ್ಕೆ ಜರುಗುವಂತೆ ಸನ್ನೆ ಮಾಡಿದರೂ ಜಾಗ ಬಿಡದಿದ್ದಾಗ, ಕೊನೆಗೆ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ ಅವರೇ ಮಧ್ಯಪ್ರವೇಶಿಸಿ ಟ್ರಂಪ್ ಅವರನ್ನು ಅಲ್ಲಿಂದ ಪಕ್ಕಕ್ಕೆ ಕರೆದೊಯ್ಯಬೇಕಾಯಿತು.
ವೇದಿಕೆಯಲ್ಲಿ ಸ್ಪೇನ್ ಆಟಗಾರರೊಂದಿಗೆ ತಾವೂ ಒಂದಾಗಿ ಸಂಭ್ರಮಿಸಲು ಟ್ರಂಪ್ ಬಯಸಿದಂತೆ ಕಂಡಿದ್ದು, ಅವರ ಉಪಸ್ಥಿತಿಯಿಂದ ಸ್ಪೇನ್ ನಾಯಕ ರೋಡ್ರಿ ತೀವ್ರ ಮುಜುಗರ ಅನುಭವಿಸಿದರು. ಆಚರಣೆಗೆ ಜಾಗ ಬಿಟ್ಟುಕೊಡುವಂತೆ ರೋಡ್ರಿ ವಿನಂತಿಸಿ ಪಕ್ಕಕ್ಕೆ ತಳ್ಳಿದರೂ, ಟ್ರಂಪ್ ಅಲ್ಲಿಂದ ಕದಲದೆ ಕಾಲಹರಣ ಮಾಡಿದ್ದು ಸ್ಪೇನ್ ತಂಡದ ಚಾಂಪಿಯನ್ ಸಂಭ್ರಮವನ್ನು ತುಸು ತಡೆಹಿಡಿಯುವಂತೆ ಮಾಡಿತು.
ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ, ಕೊನೆಗೆ ಟ್ರಂಪ್ ಅವರ ಕೈಹಿಡಿದು ವೇದಿಕೆಯ ಮೂಲೆಗೆ ಕರೆದೊಯ್ಯಬೇಕಾಯಿತು. ಆದಾಗ್ಯೂ, ಸಂಪೂರ್ಣವಾಗಿ ವೇದಿಕೆಯಿಂದ ನಿರ್ಗಮಿಸಲು ನಿರಾಕರಿಸಿದ ಟ್ರಂಪ್, ಸ್ಪೇನ್‌ನ ಕೊನೆಯ ಆಟಗಾರನ ಪಕ್ಕದಲ್ಲೇ ನಿಂತು ಕ್ಯಾಮೆರಾಗೆ ಪೋಸ್ ನೀಡಲು ಯತ್ನಿಸಿದ ವಿಚಿತ್ರ ಪ್ರಸಂಗ ಜರುಗಿತು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮತ್ತೊಂದು ವಿಡಿಯೋದಲ್ಲಿ, ಅರ್ಜೆಂಟೀನಾದ ರಕ್ಷಣಾತ್ಮಕ ಆಟಗಾರ ಕ್ರಿಸ್ಟಿಯನ್ ರೊಮೆರೊ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ಹಸ್ತಲಾಘವ (ಹ್ಯಾಂಡ್‌ಶೇಕ್) ನಡೆಯದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ರನ್ನರ್ಸ್ ಅಪ್ ಪದಕ ಸ್ವೀಕರಿಸುವ ವೇಳೆ ರೊಮೆರೊ, ಟ್ರಂಪ್ ಅವರ ಎದುರಲ್ಲೇ ಇದ್ದರೂ ಅವರನ್ನು ಗಮನಿಸದೆ ನೇರವಾಗಿ ಮುಂದೆ ಸಾಗಿದ್ದು, ಕ್ರೀಡಾಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.
ಅಂದಹಾಗೆ, ನ್ಯೂಯಾರ್ಕ್ ಹೊರವಲಯದಲ್ಲಿ ನಡೆದ ಈ ಚಾಂಪಿಯನ್‍ಶಿಪ್ ಹಣಾಹಣಿಯಲ್ಲಿ, 80,000 ಪ್ರೇಕ್ಷಕರ ಸಮ್ಮುಖದಲ್ಲಿ ಸ್ಪೇನ್ ತಂಡ ಅರ್ಜೆಂಟೀನಾವನ್ನು 1-0 ಅಂತರದಿಂದ ಮಣಿಸುವುದನ್ನು ಟ್ರಂಪ್ ಅವರು ತಮ್ಮ ಆಪ್ತ ಗೆಳೆಯ ಇನ್ಫಾಂಟಿನೋ ಜೊತೆ ಕುಳಿತು ವೀಕ್ಷಿಸಿದರು, (ಏಜೆನ್ಸೀಸ್).