FIFA WorldCup: ಸತತ 2ನೇ ಜಯದೊಂದಿಗೆ ನಾಕೌಟ್​ಗೇರಿದ ಆತಿಥೇಯ ಅಮೆರಿಕ 
ಫುಟ್ಬಾಲ್

FIFA WorldCup: ಸತತ 2ನೇ ಜಯದೊಂದಿಗೆ ನಾಕೌಟ್​ಗೇರಿದ ಆತಿಥೇಯ ಅಮೆರಿಕ

ಸಿಯಾಟಲ್​: ಮೆಕ್ಸಿಕೋದ ನಂತರ ಮತ್ತೊಂದು ಸಹ-ಆತಿಥೇಯ ದೇಶವಾಗಿರುವ ಅಮೆರಿಕ ಕೂಡ ಫಿಫಾ ವಿಶ್ವಕಪ್ (FIFA WorldCup)​ 23ನೇ ಆವೃತ್ತಿಯಲ್ಲಿ ಸತತ 2ನೇ ಜಯದೊಂದಿಗೆ ನಾಕೌಟ್​ ಪ್ರವೇಶ ಖಾತ್ರಿಪಡಿಸಿಕೊಂಡಿದೆ. ಸ್ಟಾರ್​ ಆಟಗಾರ ಕ್ರಿಶ್ಚಿಯನ್​ ಪುಲಿಸಿಕ್​ ಗೈರಿನ ನಡುವೆಯೂ ಅಮೆರಿಕ ತಂಡ ಆಸ್ಟ್ರೆಲಿಯಾ ವಿರುದ್ಧದ ತನ್ನ 2ನೇ ಪಂದ್ಯದಲ್ಲಿ 2-0 ಅಂತರದಿಂದ ಜಯ ದಾಖಲಿಸಿತು. ಸ್ಟಾರ್ಸ್​ ಆಂಡ್​ ಸ್ಟ್ರಿಪ್ಸ್​ ಖ್ಯಾತಿಯ ಅಮೆರಿಕ 1930ರ ಬಳಿಕ ವಿಶ್ವಕಪ್​ನಲ್ಲಿ ಮೊದಲ ಬಾರಿ ಸತತ 2 ಪಂದ್ಯ ಗೆದ್ದ ಸಾಧನೆ ಮಾಡಿದೆ.
ಭಾರತೀಯ ಕಾಲಮಾನ ಪ್ರಕಾರ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕ 11ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತು. ಕಳೆದ ಪಂದ್ಯದ ಹೀರೋ ಫೋಲಾರಿನ್​ ಬಾಲೋಗುನ್​, ರಿಕಾರ್ಡೊ ಪೆಪಿಗೆ ಪಾಸ್​ ಮಾಡಿದ ಚೆಂಡನ್ನು ತಡೆಯಲು ಅಡ್ಡ ಬಂದ ಆಸೀಸ್​ ಡಿಫೆಂಡರ್​ ಕ್ಯಾಮರೂನ್​ ಬರ್ಗೆಸ್​ ಆಕಸ್ಮಿಕವಾಗಿ ತಮ್ಮ ತಂಡದ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಒದ್ದು ಸ್ವಗೋಲಿನ ಪ್ರಮಾದ ಎಸಗಿದರು. ಬಳಿಕ 43ನೇ ನಿಮಿಷದಲ್ಲಿ ಅಮೆರಿಕ ತಂಡದ ಅತಿ ಕಿರಿಯ ಆಟಗಾರರೆನಿಸಿರುವ 21 ವರ್ಷದ ಅಲೆಕ್ಸ್​ ಫ್ರೀಮನ್​ ಮುನ್ನಡೆಯನ್ನು 2-0ಕ್ಕೆ ವಿಸ್ತರಿಸಿದರು.
ಮೊದಲಿಗೆ ಆಫ್​ಸೈಡ್​ ನೀಡಲಾದ ಈ ಗೋಲು, ವಿಎಆರ್​ ಪರಾಮರ್ಶೆಯ ಬಳಿಕ ಮಾನ್ಯಗೊಂಡಿತು. ಅಲೆಕ್ಸ್​ ಸೂಪರ್​ಬೌಲ್​ ಚಾಂಪಿಯನ್​ ಆಂಟೋನಿಯೊ ಫ್ರೀಮನ್​ ಪುತ್ರರಾಗಿದ್ದಾರೆ.

ಅಮೆರಿಕ ದ್ವೀತಿಯಾರ್ಧದಲ್ಲಿ ಗೋಲು ಬಾರಿಸಲು ಶಕ್ತವಾಗಲಿಲ್ಲ. ಆದರೆ ಪಂದ್ಯದುದ್ದಕ್ಕೂ ಪ್ರಾಬಲ್ಯ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. 87 ಪಂದ್ಯಗಳಲ್ಲಿ 33 ಗೋಲು ಸಿಡಿಸಿರುವ ಪುಲಿಸಿಕ್​ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದರು.
ಅಮೆರಿಕ: 2
*ಕ್ಯಾಮರೂನ್​ ಬರ್ಗೆಸ್​ (11, ಸ್ವಗೋಲು)
*ಅಲೆಕ್ಸ್​ ಫ್ರೀಮನ್​ (43)
ಆಸ್ಟ್ರೆಲಿಯಾ: 0
*7: ಹಾಲಿ ಟೂರ್ನಿಯ ಮೊದಲ 32 ಪಂದ್ಯಗಳಲ್ಲೇ 7ನೇ ಸ್ವಗೋಲು ದಾಖಲಾಗಿದೆ. 2018ರಲ್ಲಿ 12 ಸ್ವಗೋಲು ದಾಖಲಾಗಿದ್ದು ಗರಿಷ್ಠ.
*6: ಅಮೆರಿಕ ವಿಶ್ವಕಪ್​ನ ಲೀಗ್​ ಹಂತದಲ್ಲಿ 6 ಗೋಲು ಸಿಡಿಸಿದ್ದು ಇದೇ ಮೊದಲಾಗಿದೆ. ಜತೆಗೆ 1930, 2002ರ ಟೂರ್ನಿಯಲ್ಲಿ ಒಟ್ಟು 7 ಗೋಲು ಬಾರಿಸಿದ ಸಾಧನೆಯನ್ನೂ ಹಿಮ್ಮೆಟ್ಟಿಸುವ ಅವಕಾಶ ಪಡೆದಿದೆ.
4: ಅಮೆರಿಕ ಫಿಫಾ ವಿಶ್ವಕಪ್​ನಲ್ಲಿ ಸತತ 4ನೇ ಬಾರಿ ನಾಕೌಟ್​ ಹಂತಕ್ಕೇರಿದೆ. ಅಲ್ಲದೆ 3ನೇ ಬಾರಿ ಗುಂಪಿನ ಅಗ್ರಸ್ಥಾನ ಖಚಿತಪಡಿಸಿಕೊಂಡಿದೆ.