ದ್ವೀಪರಾಷ್ಟ್ರ ಕ್ಯೂರಸಾವೊಗೆ ಫಿಫಾ ವಿಶ್ವಕಪ್ ಅರ್ಹತೆ; ಟೂರ್ನಿಯಲ್ಲಿ ಆಡಲಿರುವ ಅತಿ ಸಣ್ಣ ದೇಶ!
ಕಿಂಗ್ಸ್ಟನ್(ಜಮೈಕಾ): ಕೆರಿಬಿಯನ್ ಸಮುದ್ರದಲ್ಲಿರುವ ಕೇವಲ 1.56 ಲಕ್ಷ ಜನಸಂಖ್ಯೆಯ ದ್ವೀಪರಾಷ್ಟ್ರ ಕ್ಯೂರಸಾವೊ (curacao) ಮುಂದಿನ ವರ್ಷದ ಫಿಫಾ ವಿಶ್ವಕಪ್ (FIFA Worldcup) ಟೂರ್ನಿಗೆ ಅರ್ಹತೆ ಸಂಪಾದಿಸಿದೆ. ಈ ಮೂಲಕ ಜಾಗತಿಕ ಫುಟ್ಬಾಲ್ (Football) ಮಹಾಸಮರದಲ್ಲಿ ಭಾಗವಹಿಸಲಿರುವ ಅತಿ ಸಣ್ಣ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಂಗಳವಾರ ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಜಮೈಕಾ ವಿರುದ್ಧ ಗೋಲು ರಹಿತ ಡ್ರಾ ಸಾಧಿಸುವ ಮೂಲಕ ಕ್ಯೂರಸಾವೊ ಈ ಸಾಧನೆ ಮಾಡಿದೆ. ವಿಶ್ವಕಪ್ ಅರ್ಹತೆಗಾಗಿ ಈ ಪಂದ್ಯದಲ್ಲಿ ಕ್ಯೂರಸಾವೊ ಕೇವಲ ಡ್ರಾ ಮಾಡಿದರೆ ಸಾಕಾಗಿತ್ತು. ಈ ಮೂಲಕ ಬಿ ಗುಂಪಿನಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿ, ಜಮೈಕಾವನ್ನು ಬದಿಗೊತ್ತಿ ವಿಶ್ವಕಪ್ ಅರ್ಹತೆ ಪಡೆಯಿತು.
ಸುಮಾರು 3.50 ಲಕ್ಷ ಜನಸಂಖ್ಯೆಯ ಐಸ್ಲ್ಯಾಂಡ್ ದೇಶ 2018ರ ಫಿಫಾ ವಿಶ್ವಕಪ್ನಲ್ಲಿ ಆಡುವ ಮೂಲಕ ಈ ಸಾಧನೆ ಮಾಡಿದ ಹಿಂದಿನ ಅತಿಸಣ್ಣ ದೇಶವೆನಿಸಿತ್ತು.
ಆಫ್ರಿಕಾದ ಕೇವಲ 4.91 ಲಕ್ಷ ಜನಸಂಖ್ಯೆಯ ದ್ವೀಪರಾಷ್ಟ್ರ ಕೇಪ್ ವರ್ಡೆ ಕೂಡ ಮುಂದಿನ ವರ್ಷದ ಫಿಫಾ ವಿಶ್ವಕಪ್ಗೆ ಅರ್ಹತೆ ಗಳಿಸಿದ್ದು, ಟೂರ್ನಿಗೆ ಅರ್ಹತೆ ಪಡೆದ 2ನೇ ಸಣ್ಣ ದೇಶವೆನಿಸಿತ್ತು. ಇದೀಗ ವಿಶ್ವಕಪ್ ಅರ್ಹತೆ ಪಡೆದ 3ನೇ ಅತಿ ಸಣ್ಣ ದೇಶವೆನಿಸಿದೆ.
48ರಲ್ಲಿ 46 ತಂಡಗಳ ಅರ್ಹತೆ ಖಾತ್ರಿ
ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾದ ಸಂಯುಕ್ತ ಆಶ್ರಯದಲ್ಲಿ 2026ರ ಜೂನ್ 11ರಿಂದ ಜುಲೈ 19ರವರೆಗೆ ನಡೆಯಲಿರುವ ಫಿಫಾ ವಿಶ್ವಕಪ್ನಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 48ಕ್ಕೇರಿಸಲಾಗಿದ್ದು, ಈ ಪೈಕಿ 46 ತಂಡಗಳ ಅರ್ಹತೆ ಇದುವರೆಗೆ ಖಚಿತಗೊಂಡಿದೆ. ಇನ್ನು 2026ರ ಮಾರ್ಚ್ನಲ್ಲಿ ನಡೆಯಲಿರುವ 6 ತಂಡಗಳ ಇಂಟರ್ ಕಾಂಟಿನೆಂಟಲ್ ಪ್ಲೇಆಫ್ನಿಂದ ಕೊನೇ 2 ತಂಡಗಳ ಅರ್ಹತೆಯಷ್ಟೇ ಬಾಕಿ ಉಳಿದಿದೆ. 3 ಆತಿಥೇಯ ದೇಶಗಳೊಂದಿಗೆ ಉತ್ತರ, ಕೇಂದ್ರ ಅಮೆರಿಕ ಮತ್ತು ಕೆರಿಬಿಯನ್ನಿಂದ ಕ್ಯೂರಸಾವೊ, ಪನಾಮಾ ಮತ್ತು ಹೈಟಿ ಅರ್ಹತೆ ಗಳಿಸಿವೆ.
ದಕ್ಷಿಣ ಅಮೆರಿಕದಿಂದ ಅರ್ಜೆಂಟೀನಾ, ಬ್ರೆಜಿಲ್, ಕೊಲಂಬಿಯಾ, ಈಕ್ವಡಾರ್, ಪರಾಗ್ವೆ, ಉರುಗ್ವೆ, ಓಶಿಯಾನಿಯಾದಿಂದ ನ್ಯೂಜಿಲೆಂಡ್, ಯುರೋಪ್ನಿಂದ ಆಸ್ಟ್ರಿಯಾ, ಬೆಲ್ಜಿಯಂ, ಕ್ರೊವೇಷಿಯಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ನೆದರ್ಲೆಂಡ್, ನಾರ್ವೆ, ಪೋರ್ಚುಗಲ್, ಸ್ಕಾಟ್ಲೆಂಡ್, ಸ್ಪೇನ್, ಸ್ವಿರ್ಜಲೆಂಡ್, ಏಷ್ಯಾದಿಂದ ಆಸ್ಟ್ರೆಲಿಯಾ, ಇರಾನ್, ಜಪಾನ್ ಜೋರ್ಡನ್, ಕತಾರ್, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಉಜ್ಬೇಕಿಸ್ತಾನ, ಆಫ್ರಿಕಾದಿಂದ ಅಲ್ಜೀರಿಯಾ, ಕೇಪ್ ವರ್ಡೆ, ಈಜಿಪ್ಟ್, ಘಾನಾ, ಐವರಿ ಕೋಸ್ಟ್, ಮೊರಾಕ್ಕೊ, ಸೆನೆಗಲ್, ದ. ಆಫ್ರಿಕಾ ಮತ್ತು ಟುನೀಷಿಯಾ ಅರ್ಹತೆ ಗಳಿಸಿವೆ. ಡಿಸೆಂಬರ್ 5ರಂದು ವಾಷಿಂಗ್ಟನ್ನಲ್ಲಿ ಟೂರ್ನಿಯ ಡ್ರಾ ನಡೆಯಲಿದೆ.