Cristiano Ronaldo ಚಿತ್ರ Instagram
Cristiano Ronaldo: ವಿಶ್ವ ಫುಟ್‌ಬಾಲ್‌ನ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ದೀರ್ಘಕಾಲದ ಗೆಳೆತಿ ಜಾರ್ಜಿನಾ ರೋಡ್ರಿಗಸ್ ಅವರೊಂದಿಗೆ ಸರಳವಾಗಿ ವಿವಾಹವಾಗುವ ಮೂಲಕ ತಮ್ಮ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಆಗಸ್ಟ್ 11ರ ಮಂಗಳವಾರದಂದು ಪೋರ್ಚುಗಲ್‌ನ ಕರಾವಳಿ ನಗರವಾದ ಕಸ್ಕಾಯಿಸ್‌ನಲ್ಲಿ (Cascais) ಈ ಜೋಡಿಯ ಮದುವೆ ಶಾಸ್ತ್ರಬದ್ಧವಾಗಿ ನೆರವೇರಿದೆ.
ಸಾಮಾಜಿಕ ಜಾಲತಾಣದಲ್ಲಿ ರೊನಾಲ್ಡೊ ತಮ್ಮ ಮದುವೆಯ ಉಂಗುರ ಧರಿಸಿರುವ ಕೈಗಳ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಅಧಿಕೃತಗೊಳಿಸುವುದರ ಜೊತೆಗೆ ಪೋಸ್ಟ್ಗೆ CG ಎಂದು ಬರೆದುಕೊಂಡಿದ್ದಾರೆ.
ಅತ್ಯಂತ ಆಪ್ತರ ಸಮ್ಮುಖದಲ್ಲಿ ನಡೆದ ಮದುವೆ
ಬ್ರನ್ಸ್‌ವಿಕ್ ಗ್ರೂಪ್ ನೀಡಿದ ಮಾಹಿತಿಯ ಪ್ರಕಾರ, ಲಿಸ್ಬನ್ ಬಳಿಯಿರುವ ಕಸ್ಕಾಯಿಸ್‌ನಲ್ಲಿ ನಡೆದ ಈ ಖಾಸಗಿ ಸಮಾರಂಭದಲ್ಲಿ ಕೇವಲ ಕುಟುಂಬಸ್ಥರು ಮತ್ತು ಈ ಜೋಡಿಯ ಐದು ಮುದ್ದಾದ ಮಕ್ಕಳು ಮಾತ್ರ ಭಾಗವಹಿಸಿದ್ದರು. ರೊನಾಲ್ಡೊ ಅವರ ಆಪ್ತ ಗೆಳೆಯ ಹಾಗೂ ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮಾರ್ಗನ್ ಕೂಡ ಈ ಜೋಡಿಗೆ ಶುಭ ಹಾರೈಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
2016ರಲ್ಲಿ ಶುರುವಾಗಿದ್ದ ಪ್ರೇಮಕಥೆ
2016ರಲ್ಲಿ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಗೂಚಿ (Gucci) ಶೋರೂಂನಲ್ಲಿ ಜಾರ್ಜಿನಾ ಕೆಲಸ ಮಾಡುತ್ತಿದ್ದಾಗ ರೊನಾಲ್ಡೊ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಕೆಲವೇ ದಿನಗಳ ನಂತರ ನಡೆದ ಮತ್ತೊಂದು ಬ್ರ್ಯಾಂಡ್ ಕಾರ್ಯಕ್ರಮದಲ್ಲಿ ಇಬ್ಬರೂ ಸಿಕ್ಕಾಗ ಇವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತು.
ಕಳೆದ ಒಂದು ದಶಕದಿಂದ ಒಂದಾಗಿರುವ ಈ ಜೋಡಿಯ ಬಂಧವು ಕ್ರಮೇಣ ಪ್ರೇಮವಾಗಿ ಬೆಳೆದು, ಸ್ಪೇನ್, ಇಟಲಿ, ಇಂಗ್ಲೆಂಡ್ ಹಾಗೂ ಸೌದಿ ಅರೇಬಿಯಾದಲ್ಲಿ ಒಟ್ಟಿಗೆ ನೆಲೆಸುತ್ತಾ ಐದು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಬೆಳೆಸುತ್ತಿರುವ ಆಪ್ತ ಕುಟುಂಬವಾಗಿ ರೂಪುಗೊಂಡಿದೆ.
ಮೈದಾನದಲ್ಲೂ ಬ್ಯುಸಿ!
ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 146 ಗೋಲುಗಳನ್ನು ಬಾರಿಸಿ ವಿಶ್ವ ದಾಖಲೆ ಬರೆದಿರುವ ಹಾಗೂ 5 ಬಾರಿ 'ಬ್ಯಾಲನ್ ಡಿ'ಆರ್' ಪ್ರಶಸ್ತಿ ಗೆದ್ದಿರುವ ರೊನಾಲ್ಡೊ, ಪ್ರಸ್ತುತ ಸೌದಿ ಪ್ರೋ ಲೀಗ್‌ನ 'ಅಲ್ ನಾಸ್ರ್' ಕ್ಲಬ್ ಪರವಾಗಿ ಆಡುತ್ತಿದ್ದಾರೆ. ಶನಿವಾರದಿಂದ ಪ್ರಾರಂಭವಾಗಲಿರುವ ಹೊಸ ಸೀಸನ್‌ನ ದೇಶೀಯ ಪಂದ್ಯಗಳಲ್ಲಿ ಅವರು ಮೈದಾನಕ್ಕಿಳಿಯುವ ನಿರೀಕ್ಷೆಯಿದೆ (ಏಜೆನ್ಸೀಸ್).