- ಫುಟ್ಬಾಲ್ ಲೋಕದ ಅತ್ಯಂತ ಪ್ರತಿಷ್ಠಿತ ಟೂರ್ನಮೆಂಟ್ ಫಿಫಾ ವಿಶ್ವಕಪ್
- ಒಟ್ಟು 48 ತಂಡಗಳು ಸ್ಪರ್ಧಿಸಲಿದ್ದು, 39 ದಿನಗಳಲ್ಲಿ 16 ಕ್ರೀಡಾಂಗಣಗಳಲ್ಲಿ 104 ಪಂದ್ಯಗಳು
- ಕ್ರಿಕೆಟ್ಗಿಂತಲೂ ಫುಟ್ಬಾಲ್ಗೆ ಸಿಕ್ಕಾಪಟ್ಟೆ ಕ್ರೇಜ್?
Cricket vs Football: ಫುಟ್ಬಾಲ್ ಲೋಕದ ಅತ್ಯಂತ ಪ್ರತಿಷ್ಠಿತ ಟೂರ್ನಮೆಂಟ್ ಫಿಫಾ ವಿಶ್ವಕಪ್ 2026ಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ. ಈ ಮೆಗಾ ಟೂರ್ನಿಯು ಇದೇ ಜೂನ್ 11ರಿಂದ ಪ್ರಾರಂಭವಾಗಲಿದ್ದು, ಮೂರು ದೇಶಗಳಲ್ಲಿ (ಯುಎಸ್ಎ, ಕೆನಡಾ, ಮೆಕ್ಸಿಕೊ) ನಡೆಯಲಿರುವುದು ವಿಶೇಷ.
ಒಟ್ಟು 48 ತಂಡಗಳು ಸ್ಪರ್ಧಿಸಲಿದ್ದು, 39 ದಿನಗಳಲ್ಲಿ 16 ಕ್ರೀಡಾಂಗಣಗಳಲ್ಲಿ 104 ಪಂದ್ಯಗಳು ನಡೆಯಲಿವೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ದೊಡ್ಡ ಟೂರ್ನಮೆಂಟ್ ಆಗಿ ಈ ಟೂರ್ನಿ ಇತಿಹಾಸದಲ್ಲಿ ದಾಖಲಾಗಲಿದೆ ಎಂಬುದು ಗಮನಾರ್ಹ. 1998ರಿಂದ ಮೊದಲ ಬಾರಿಗೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿರುವ ಫಿಫಾ, ಈ ಬಾರಿ ಬಹುಮಾನದ ಹಣವನ್ನು ಸಹ ಏರಿಸಿದೆ ಎಂದು ವರದಿಯಾಗಿದೆ.
ಈ ಬಾರಿ ಇನ್ನೂ ಅದ್ಧೂರಿ
48 ತಂಡಗಳ ನಡುವೆ ವಿತರಿಸಲಾಗುವ ಬಹುಮಾನದ ಮೊತ್ತ 655 ಡಾಲರ್ ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ಇದು 6,250 ಕೋಟಿ ರೂ.ಗಿಂತ ಹೆಚ್ಚು). ಇದು ಕಳೆದ ಫಿಫಾ ವಿಶ್ವಕಪ್‌ಗಿಂತ ಸುಮಾರು ಶೇ.50ರಷ್ಟು ಹೆಚ್ಚಾಗಿದೆ. ಫಿಫಾ ಘೋಷಿಸಿರುವ ವಿವರಗಳ ಪ್ರಕಾರ, 2026ರ ವಿಶ್ವಕಪ್‌ಗೆ ಅರ್ಹತೆ ಪಡೆಯುವ ತಂಡಕ್ಕೆ 50 ಮಿಲಿಯನ್ ಡಾಲರ್ ನೀಡಲಾಗುವುದು. ಅಂದರೆ, ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 476 ಕೋಟಿ ರೂ. ಸಿಗಲಿದೆ.
ಇನ್ನು ರನ್ನರ್ ಅಪ್ ತಂಡಕ್ಕೆ 33 ಮಿಲಿಯನ್ ಡಾಲರ್ (ಅಂದರೆ 314 ಕೋಟಿ ರೂ.) ಮತ್ತು ಮೂರನೇ ಸ್ಥಾನ ಪಡೆದ ತಂಡಕ್ಕೆ 29 ಮಿಲಿಯನ್ ಡಾಲರ್ (276 ಕೋಟಿ ರೂ.) ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 27 ಮಿಲಿಯನ್ ಡಾಲರ್ (257 ಕೋಟಿ ರೂ.) ಸಿಗಲಿದೆ. ಇದರೊಟ್ಟಿಗೆ ಕ್ವಾರ್ಟರ್ ಫೈನಲ್ ತಲುಪುವ ತಂಡಗಳಿಗೆ 19 ಮಿಲಿಯನ್ ಡಾಲರ್ (ಸುಮಾರು 181 ಕೋಟಿ ರೂ.), ಪ್ರಿ-ಕ್ವಾರ್ಟರ್ ಫೈನಲ್ ತಲುಪುವ ತಂಡಗಳಿಗೆ 15 ಮಿಲಿಯನ್ ಡಾಲರ್ (142 ಕೋಟಿ ರೂ.) ಸೇರಲಿದೆ.
ಗ್ರೂಪ್ ಸ್ಟೇಜ್ ಹಂತವನ್ನು ಮೀರಿ ಮುನ್ನಡೆಯಲು ವಿಫಲವಾದ ತಂಡಗಳಿಗೆ ಕನಿಷ್ಠ 9 ಮಿಲಿಯನ್ ಡಾಲರ್ (ಸುಮಾರು 85 ಕೋಟಿ ರೂ.) ಸಿಗಲಿದೆ. ಇದರ ಜೊತೆಗೆ, ವಿಶ್ವಕಪ್‌ಗೆ ಅರ್ಹತೆ ಪಡೆಯುವ ಪ್ರತಿ ತಂಡವು ನಿರ್ದಿಷ್ಟವಾಗಿ ತಯಾರಿ ವೆಚ್ಚಗಳಿಗಾಗಿ 1.5 ಮಿಲಿಯನ್ ಡಾಲರ್‌ಗಳನ್ನು ಪಡೆಯಲಿದೆ ಎಂಬುದು ನಿಜಕ್ಕೂ ಖುಷಿ ಸಂಗತಿ. 2026ರ ಫಿಫಾ ವಿಶ್ವಕಪ್‌ಗಾಗಿ ಕೌನ್ಸಿಲ್ ಒಟ್ಟು 727 ಮಿಲಿಯನ್ ಡಾಲರ್ ಅನ್ನು ಅನುಮೋದಿಸಿದೆ. ಇದರಲ್ಲಿ ವಿಜೇತರಿಗೆ ಬಹುಮಾನದ ಹಣ, ಆಟಗಳ ಸಂಘಟನೆ ಮತ್ತು ಪ್ರಶಸ್ತಿ ಮೊತ್ತ ಎಲ್ಲವೂ ಸೇರಿವೆ.
ಇದೇ ಕ್ರಿಕೆಟ್‌ನಲ್ಲಿ ಎಷ್ಟು?
ಇತ್ತೀಚೆಗೆ ನಡೆದ ಐಸಿಸಿ ಟಿ20 ವಿಶ್ವಕಪ್ 2026ರ ಒಟ್ಟು ಬಹುಮಾನದ ಮೊತ್ತ 11.25 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 107 ಕೋಟಿ ರೂ.). ವಿಜೇತ ಭಾರತ ತಂಡ 2.63 ಮಿಲಿಯನ್ ಡಾಲರ್ (25 ಕೋಟಿ ರೂ.) ಪಡೆಯಿತು. ರನ್ನರ್ ಅಪ್ ನ್ಯೂಜಿಲೆಂಡ್ 1.42 ಮಿಲಿಯನ್ ಡಾಲರ್ (13.53 ಕೋಟಿ ರೂ.) ಸ್ವೀಕರಿಸಿತು. ಇನ್ನು ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ 1 ಮಿಲಿಯನ್‌ಗಿಂತಲೂ ಹೆಚ್ಚು ಬಹುಮಾನದ ಮೊತ್ತವನ್ನು ಪಡೆದುಕೊಂಡಿತು.
ನಾವು ಫುಟ್‌ಬಾಲ್ ಮತ್ತು ಕ್ರಿಕೆಟ್ ಎರಡನ್ನೂ ಸೂಕ್ಷ್ಮವಾಗಿ ಗಮನಿಸಿ ನೋಡುವುದಾದರೆ, ಫಿಫಾ ವಿಶ್ವಕಪ್‌ನಲ್ಲಿ ವಿಜೇತ ತಂಡವು ಟಿ20 ವಿಶ್ವಕಪ್ 2026ರಲ್ಲಿ ಗೆದ್ದ ಭಾರತ ತಂಡಕ್ಕಿಂತ ಸುಮಾರು 19 ಪಟ್ಟು ಹೆಚ್ಚಿನ ಬಹುಮಾನದ ಮೊತ್ತವನ್ನು ಪಡೆಯಲಿದೆ. ಅದೇ ಸಮಯದಲ್ಲಿ, ಫಿಫಾ ವಿಶ್ವಕಪ್ 2026ರಲ್ಲಿ ಕೊನೆಯ ಸ್ಥಾನ ಪಡೆದ ತಂಡವು ಕನಿಷ್ಠ 10.5 ಮಿಲಿಯನ್ ಡಾಲರ್ (9 ಮಿಲಿಯನ್ ಡಾಲರ್ ಬಹುಮಾನ + ತಯಾರಿ ವೆಚ್ಚಕ್ಕಾಗಿ 1.5 ಮಿಲಿಯನ್ ಡಾಲರ್) ಪಡೆಯಲಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 100 ಕೋಟಿ ರೂ.ಗೂ ಹೆಚ್ಚಿದೆ.
ಹುಬ್ಬೇರಿಸುವ ಸಂಗತಿಯಿದು
ಈ ಬಾರಿಯ ಫುಟ್ಬಾಲ್ ವಿಶ್ವಕಪ್‌ನಲ್ಲಿ ಕೊನೆಯ ಸ್ಥಾನ ಪಡೆಯುವ ತಂಡಕ್ಕೆ ಸಿಗುವ ನಗದು ಬಹುಮಾನ, ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ 20 ತಂಡಗಳಿಗೆ (11.25 ಮಿಲಿಯನ್ ಡಾಲರ್) ವಿತರಿಸಲಾದ ಒಟ್ಟು ಬಹುಮಾನದ ಹಣಕ್ಕೆ ಸಮಾನ. ಈ ಅಂಕಿಅಂಶಗಳು ಜಾಗತಿಕ ಫುಟ್ಬಾಲ್‌ನ ವಾಣಿಜ್ಯ ಮೌಲ್ಯ, ಅಭಿಮಾನಿಗಳ ಸಂಖ್ಯೆ ಮತ್ತು ಪ್ರಸಾರ ಹಕ್ಕುಗಳ ಆದಾಯವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಕ್ರಿಕೆಟ್ ಕೆಲವು ದೇಶಗಳಿಗೆ ಸೀಮಿತವಾದ ಕ್ರೀಡೆಯಾಗಿದ್ದರೂ ಫುಟ್ಬಾಲ್ ಪ್ರಪಂಚದ ಬಹುತೇಕ ಎಲ್ಲಾ ಖಂಡಗಳಲ್ಲಿ ವ್ಯಾಪಕವಾಗಿ ಹಬ್ಬಿದೆ. ಹೀಗಾಗಿಯೇ, ಫಿಫಾ ವಿಶ್ವಕಪ್ ಬಹುಮಾನದ ಹಣವು ಕ್ರಿಕೆಟ್ ವಿಶ್ವಕಪ್‌ಗಳಿಗಿಂತ ಮೂರು ಪಟ್ಟು ಹೆಚ್ಚಿದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).