ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಹಾಗೂ ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ
- ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಈಗ ಭಾರತದ ಅತಿಥಿ
- ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಲಿಯೋನೆಲ್ ಮೆಸ್ಸಿ
- ಕೋಲ್ಕತ, ಹೈದರಾಬಾದ್ ಹಾಗೂ ಮುಂಬೈಗೆ ಭೇಟಿ ನೀಡಿದ ಫುಟ್ಬಾಲ್ ದಂತಕಥೆ
- ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂಧ್ರ ಫಡ್ನಾವಿಸ್ ಪತ್ನಿಯಿಂದ ಮೆಸ್ಸಿಗೆ ಅವಮಾನ ಎಂಬ ಚರ್ಚೆ
ಮುಂಬೈ: ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ( Lionel Messi ) ಅವರು ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ತಿಂಗಳ 13 ರಂದು ಭಾರತಕ್ಕೆ ಆಗಮಿಸಿದ ಮೆಸ್ಸಿ ಮೊದಲು ಪಶ್ಚಿಮ ಬಂಗಾಳದ ಕೋಲ್ಕತಗೆ ಭೇಟಿ ನೀಡಿ ಅಲ್ಲಿಂದ ನೇರವಾಗಿ ತೆಲಂಗಾಣಕ್ಕೆ ಬಂದರು. ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣದಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಂತರ ಶನಿವಾರ ಹೈದರಾಬಾದ್ನಲ್ಲೇ ವಾಸ್ತವ್ಯ ಹೂಡಿದರು. ಭಾನುವಾರ ಮುಂಬೈಗೆ ಆಗಮಿಸಿದ ಲಿಯೋನೆಲ್ ಮೆಸ್ಸಿಗೆ ಭವ್ಯ ಸ್ವಾಗತ ನೀಡಲಾಯಿತು.
ಆದರೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೆಸ್ಸಿಗೆ ಭಾರಿ ಕಿರಿಕಿರಿ ಉಂಟಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಚರ್ಚೆ ನಡೆಯುತ್ತಿದೆ. ಅಂದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರಿಂದ ಮೆಸ್ಸಿಗೆ ತುಂಬಾ ಮುಜುಗರವಾಯಿತು ಎಂಬುದು ನೆಟ್ಟಿಗರ ವಾದವಾಗಿದೆ. ಅಮೃತಾ ಫಡ್ನವಿಸ್ ಅವರ ವರ್ತನೆಯಿಂದಾಗಿ ಮೆಸ್ಸಿ ತಮ್ಮ ಅಸಹನೆ ವ್ಯಕ್ತಪಡಿಸಿದರು ಎನ್ನುತ್ತಿರುವ ನೆಟ್ಟಿಗರು ವಿಡಿಯೋವೊಂದನ್ನು ವೈರಲ್ ಮಾಡುತ್ತಿದ್ದಾರೆ.
ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಎಲ್ಲರ ಗಮನ ಸೆಳೆದರು. ಮೆಸ್ಸಿಯಂತಹ ದಿಗ್ಗಜ ಆಟಗಾರನ ಆಗಮನದಿಂದಾಗಿ ಜನರು ಕ್ರೀಡಾಂಗಣಕ್ಕೆ ಜಮಾಯಿಸಿದರು. ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ನಾಯಕರು ಕೂಡ ಮೆಸ್ಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಂತೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಮಾಡಿದ ಅತಿರೇಕದ ವರ್ತನೆ ಈಗ ಬಿಸಿ ಚರ್ಚೆಯ ವಿಷಯವಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಪತ್ನಿ ಅಮೃತಾ ಫಡ್ನವಿಸ್, ಲಿಯೋನೆಲ್ ಮೆಸ್ಸಿ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ನಡೆದುಕೊಂಡ ರೀತಿ ಈಗ ಆಕ್ಷೇಪಾರ್ಹವಾಗಿದೆ. ಬಾಯಿಯಲ್ಲಿ ಬಬಲ್ ಗಮ್ ಹಾಕಿಕೊಂಡು ಅದನ್ನು ಅಗಿಯುತ್ತಾ, ಮೆಸ್ಸಿ ಮುಂದೆ ಅತಿಯಾಗಿ ವರ್ತಿಸಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಮೆಸ್ಸಿ ಸಾಧನೆ ಮತ್ತು ಅಮೃತಾ ಅವರ ಸಾಧನೆಯನ್ನು ಹೋಲಿಕೆ ಮಾಡಿ ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿಯಾಗಿರುವುದೇ ಅಮೃತಾ ಅವರ ಸಾಧನೆಯಾಗಿದೆ. ಜಾಗತಿಕ ಕಾರ್ಯಕ್ರಮದಲ್ಲಿ ಬೇಡದ ವರ್ತನೆ ತೋರಿದ್ದಾರೆ. ಮೆಸ್ಸಿಯ ಜತೆಗೆ ಉಭಯ ಕುಶಲೋಪರಿ ನಡೆಸದೇ ಅಥವಾ ಸ್ವಾಗತ ಕೋರದೆ ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಮುಂದೆ ಬಬಲ್ ಗಮ್ ಅಗಿಯುತ್ತಾ ನಿಂತು ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅವರಿಗೆ ಅವಮಾನಿಸಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮೆಸ್ಸಿಗೆ ಆಸಕ್ತಿಯೇ ಇರಲಿಲ್ಲ, ಆದರೂ ಬಲವಂತವಾಗಿ ಪದೇಪದೆ ಸೆಲ್ಫಿ ತೆಗೆದುಕೊಂಡು ಕಿರಿಕಿರಿ ಉಂಟು ಮಾಡಿದ್ದಾರೆ. ಕನಿಷ್ಠ ಗೌರವವನ್ನು ತೋರದೇ ವರ್ತನೆ ಮಾಡಿದ್ದಾರೆ. ಐತಿಹಾಸಿಕ ಕಾರ್ಯಕ್ರಮವನ್ನು ಸಾಮಾನ್ಯ ರೀಲ್ ರೀತಿ ಮಾಡಿಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೃತಾ ವಿರುದ್ಧ ನೆಟ್ಟಿಗರು ಆಕ್ರೋಶದ ಸುರಿಮಳೆಗೈದಿದ್ದಾರೆ.
ಮೆಸ್ಸಿಯನ್ನು ಅವಮಾನಿಸಿದ್ದಕ್ಕಾಗಿ ಮೆಸ್ಸಿ ಅಭಿಮಾನಿಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಪತ್ನಿ ಅಮೃತಾ ಫಡ್ನವೀಸ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತಕ್ಕೆ ಬಂದ ಅತಿಥಿಯೊಂದಿಗೆ ಅವರು ಈ ರೀತಿ ವರ್ತಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಮೆಸ್ಸಿಗೆ ತೆಲಂಗಾಣ ರಾಜ್ಯದಲ್ಲಿ ಉತ್ತಮ ಸ್ವಾಗತ ಸಿಕ್ಕಿತು. ಆದರೆ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಮೆಸ್ಸಿ ಅವಮಾನ ಎದುರಿಸಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ, (ಏಜೆನ್ಸೀಸ್).