ಚೀಫ್ ಮಿನಿಸ್ಟರ್ಸ್ ಕಪ್ ಫುಟ್ಬಾಲ್: ಸಿವಿ ರಾಮನ್, ಶಾಂತಿ ನಗರಕ್ಕೆ ಜಯ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಿ.ವಿ. ರಾಮನ್ ನಗರ ಮತ್ತು ಶಾಂತಿನಗರ ತಂಡಗಳು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (ಕೆಎಸ್ಎ್ಎ) ಆಶ್ರಯದಲ್ಲಿ ನಡೆಯುತ್ತಿರುವ 2ನೇ ಆವೃತ್ತಿಯ ಚೀಫ್ ಮಿನಿಸ್ಟರ್ಸ್ ಕಪ್ (Chief Minister Cup) ಫುಟ್ಬಾಲ್ ಟೂರ್ನಿಯಲ್ಲಿ ಶುಭಾರಂಭ ಕಂಡಿವೆ.
ಬೆಂಗಳೂರು ಫುಟ್ಬಾಲ್ ಸ್ಟೇಡಿಯಂನಲ್ಲಿ ಭಾನುವಾರ ಆರಂಭಗೊಂಡ ಟೂರ್ನಿಯಲ್ಲಿ ಸಿ.ವಿ. ರಾಮನ್ ನಗರ ತಂಡ ಎ ಗುಂಪಿನ ಮೊದಲ ಪಂದ್ಯದಲ್ಲಿ ಶಿವಾಜಿನಗರ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಸಿ.ವಿ.ರಾಮನ್ ನಗರ ಪರ ಆರ್. ಸಚಿನ್ (20ನೇ ನಿಮಿಷ) ಮತ್ತು ಆರ್. ಸತೀಶ್ ಕುಮಾರ್ (77ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರು.
ಬಿ ಗುಂಪಿನ ಪಂದ್ಯದಲ್ಲಿ ಶಾಂತಿನಗರ ತಂಡ ಆರ್ಆರ್ ನಗರವನ್ನು 4-1 ಗೋಲುಗಳಿಂದ ಸೋಲಿಸಿತು. ಶಾಂತಿನಗರ ಪರ ಸಂಜಯ್ ಎಸ್. (83, 90+7) ಎರಡು ಗೋಲು ಸಿಡಿಸಿದರೆ, ರೋಶನ್ ಸಿಂಗ್ (14), ಜಿ. ಜಾನ್ ಪೀಟರ್ (50) ತಲಾ ಒಂದು ಗೋಲು ಬಾರಿಸಿದರು. ಆರ್ಆರ್ ನಗರ ಪರ ರಾಬಿನ್ಸನ್ (41) ಒಂದು ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.
ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ (ಎಐಎಫ್ಎಫ್) ಉಪಾಧ್ಯಕ್ಷ, ಕೆಎಸ್ಎಫ್ಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಟೂರ್ನಿಗೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಎಂ. ಸತ್ಯನಾರಾಯಣ ಮತ್ತು ಮೊಹಮದ್ ಹ್ಯಾರಿಸ್ ನಲಪಾಡ್ ಹಾಜರಿದ್ದರು.