ಸತತ 2ನೇ ಫಿಫಾ ವಿಶ್ವಕಪ್ ಗೆಲುವಿನ ಚಾನ್ಸ್! ಆರ್ಸಿಬಿ, ಪಿಎಸ್ಜಿ ಸಾಧನೆ ಸರಿಗಟ್ಟುವುದೇ ಅರ್ಜೆಂಟೀನಾ?
ಬೆಂಗಳೂರು: ಹಾಲಿ ವರ್ಷ ಈಗಾಗಲೆ 2 ಪ್ರಮುಖ ತಂಡಗಳು ಸತತ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿ ಗಮನಸೆಳೆದಿವೆ. ಚಾಂಪಿಯನ್ಸ್ ಲೀಗ್ನಲ್ಲಿ ಪ್ಯಾರಿಸ್ ಸೇಂಟ್-ಜಮೈರ್ನ್ (PSG) ಮತ್ತು ಐಪಿಎಲ್ನಲ್ಲಿ ಆರ್ಸಿಬಿ (RCB) ತಂಡ ಸತತ 2 ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿವೆ. ಇದೀಗ ಇದೇ ರೀತಿಯ ಸಾಧನೆ ಮಾಡಿದ 3ನೇ ತಂಡವೆನಿಸುವ ಅವಕಾಶ ಅರ್ಜೆಂಟೀನಾ (argentina) ಮುಂದಿದೆ.
ಫಿಫಾ ವಿಶ್ವಕಪ್ನಲ್ಲಿ ಕಳೆದ 64 ವರ್ಷಗಳಲ್ಲಿ ಯಾವುದೇ ತಂಡ ಸತತ 2 ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿಲ್ಲ ಎಂಬುದು ಕೂಡ ಗಮನಾರ್ಹ. ಫಿಫಾ ವಿಶ್ವಕಪ್ನಲ್ಲಿ ಇದುವರೆಗೆ 2 ತಂಡಗಳು ಮಾತ್ರ ಸತತ 2 ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟವೇರಿವೆ. ಇಟಲಿ ಮೊದಲಿಗೆ 1934, 1938ರಲ್ಲಿ ಈ ಸಾಧನೆ ಮಾಡಿದ್ದರೆ, ಬ್ರೆಜಿಲ್ 1958 ಮತ್ತು 1962ರಲ್ಲಿ ಸತತ 2 ಬಾರಿ ಪೀಲೆ ಮ್ಯಾಜಿಕ್ನಿಂದ ಇದನ್ನು ಪುನರಾವರ್ತಿಸಿತ್ತು.
ಮೊದಲ ಸಲ 3 ದೇಶಗಳಲ್ಲಿ ವಿಶ್ವಕಪ್
ಮೂರು ತಂಡಗಳು ಒಗ್ಗೂಡಿ ಫಿಫಾ ವಿಶ್ವಕಪ್ ಆವೃತ್ತಿಯೊಂದಕ್ಕೆ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲೆನಿಸಿದೆ. ಈ ಸಲದ ಮೂರು ಆತಿಥೇಯ ದೇಶಗಳ ಪೈಕಿ ಅಮೆರಿಕ ಈ ಹಿಂದೆ 1994ರ ಆವೃತ್ತಿ ಆಯೋಜಿಸಿದ ಅನುಭವ ಹೊಂದಿದ್ದರೆ, ಮೆಕ್ಸಿಕೋ 1970 ಮತ್ತು 1986ರಲ್ಲಿ 2 ಬಾರಿ ಆತಿಥ್ಯ ವಹಿಸಿತ್ತು. ಕೆನಡಾ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಆತಿಥ್ಯ ವಹಿಸಿಕೊಳ್ಳುತ್ತಿದೆ. ಮೆಕ್ಸಿಕೋ 3 ಫಿಫಾ ವಿಶ್ವಕಪ್ಗಳಿಗೆ ಆತಿಥ್ಯ ವಹಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗುತ್ತಿದೆ.
ಈ ಹಿಂದೆ 2002ರಲ್ಲಿ ಜಪಾನ್-ದ. ಕೊರಿಯಾ ದೇಶಗಳು ಫಿಫಾ ವಿಶ್ವಕಪ್ಗೆ ಜಂಟಿಯಾಗಿ ಆತಿಥ್ಯ ವಹಿಸಿದ್ದೇ ಮೊದಲ ಮತ್ತು ಕೊನೇ ದೃಷ್ಟಾಂತವಾಗಿತ್ತು. 2030ರಲ್ಲಿ ಮತ್ತೆ 3 ದೇಶಗಳು (ಮೊರಾಕ್ಕೊ, ಪೋರ್ಚುಗಲ್, ಸ್ಪೇನ್) ವಿಶ್ವಕಪ್ ಆತಿಥ್ಯ ವಹಿಸಲಿರುವುದು ವಿಶೇಷವಾಗಿದೆ.