FIFA WorldCup: ನಾಕೌಟ್ಗೇರಿದ ಸಣ್ಣ ರಾಷ್ಟ್ರ ಕೇಪ್ ವರ್ಡೆ
ಹ್ಯೂಸ್ಟನ್: ಕೇವಲ ಐದೂವರೆ ಲಕ್ಷ ಜನಸಂಖ್ಯೆ ಹೊಂದಿರುವ ಆಫ್ರಿಕಾ ಖಂಡದ ಪಶ್ಚಿಮ ಕರಾವಳಿಯ ದ್ವೀಪರಾಷ್ಟ್ರ ಕೇಪ್ ವರ್ಡೆ (Cape Verde), ಫಿಫಾ ವಿಶ್ವಕಪ್ನಲ್ಲಿ (FIFA WorldCup) ನಾಕೌಟ್ ಹಂತಕ್ಕೇರಿದ ಅತಿ ಸಣ್ಣ ದೇಶವೆನಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. 40 ವರ್ಷದ ಗೋಲು ಕೀಪರ್ ವೊಜಿನ್ಹಾ ತೋರಿದ ಅಮೋಘ ನಿರ್ವಹಣೆಯ ಬಲದಿಂದ ಸತತ 3ನೇ ಪಂದ್ಯದಲ್ಲೂ ಡ್ರಾ ಸಾಧಿಸುವ ಮೂಲಕ ಕೇಪ್ ವರ್ಡೆ ಈ ಸಾಧನೆ ಮೆರೆದಿದೆ.
ಭಾರತೀಯ ಕಾಲಮಾನ ಪ್ರಕಾರ ಶನಿವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಕೇಪ್ ವರ್ಡೆ ತಂಡ ಸೌದಿ ಅರೇಬಿಯಾ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತು. ಇದಕ್ಕೆ ಮುನ್ನ ಸ್ಪೇನ್ (0-0), ಉರುಗ್ವೆ (2-2) ವಿರುದ್ಧವೂ ಡ್ರಾ ಸಾಧಿಸಿ ಅಂಕ ಹಂಚಿಕೊಂಡಿತ್ತು. ಎಚ್ ಗುಂಪಿನ 2ನೇ ಸ್ಥಾನಿಯಾಗಿ ಕೇಪ್ ವರ್ಡೆ ನಾಕೌಟ್ಗೇರಿತು.
"ನಮ್ಮದು ಸಣ್ಣ ದೇಶ. ಆದರೆ ನಾವು ದೊಡ್ಡ ಹೃದಯ ಮತ್ತು ನಾವು ಹೋರಾಟಗಾರರು' ಎಂದು ವೊಜಿನ್ಹಾ ಪಂದ್ಯದ ಬಳಿಕ ಹೆಮ್ಮೆಯಿಂದ ಹೇಳಿಕೊಂಡರು. ಕೇಪ್ ವರ್ಡೆಗೆ 32ರ ಘಟ್ಟದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಎದುರಾಳಿಯಾಗಿದೆ. ಕೇಪ್ ವರ್ಡೆ ಲೀಗ್ ಹಂತದ ಮೂರೂ ಪಂದ್ಯಗಳಲ್ಲಿ ಡ್ರಾ ಸಾಧಿಸಿ ನಾಕೌಟ್ಗೇರಿದ ಕೆಲವೇ ತಂಡಗಳಲ್ಲಿ ಒಂದೆನಿಸಿದೆ. ಕೇಪ್ ವರ್ಡೆ 2010ರ ಬಳಿಕ ಪದಾರ್ಪಣೆಯ ವಿಶ್ವಕಪ್ನಲ್ಲೇ ನಾಕೌಟ್ಗೇರಿದ ಮೊದಲ ತಂಡವೆನಿಸಿತು.