FIFA WorldCup: ಯುಸ್ಟಾಕ್ವಿಯೊ ಗೆಲುವಿನ ಗೋಲು; ಪ್ರಿ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟ ಕೆನಡಾ
ಲಾಸ್ ಏಂಜಲೀಸ್: ಮಿಡ್ಫೀಲ್ಡರ್ ಸ್ಟೀನ್ ಯುಸ್ಟಾಕ್ವಿಯೊ (90+2ನೇ ನಿಮಿಷ) ಇಂಜುರಿ ಸಮಯದ 2ನೇ ನಿಮಿಷದಲ್ಲಿ ಬಾರಿಸಿದ ಆಕರ್ಷಕ ಗೋಲಿನ ಬಲದಿಂದ ಸಹ-ಆತಿಥೇಯ ಕೆನಡಾ ತಂಡ ಫಿಫಾ ವಿಶ್ವಕಪ್ (FIFA WorldCup) 23ನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ಭಾರತೀಯ ಕಾಲಮಾನ ಪ್ರಕಾರ ಭಾನುವಾರ ರಾತ್ರಿ ನಡೆದ 32ರ ಘಟ್ಟದ ಮೊದಲ ಪಂದ್ಯದಲ್ಲಿ ಕೆನಡಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 1-0 ಅಂತರದಿಂದ ರೋಚಕ ಗೆಲುವು ದಾಖಲಿಸಿತು. ಕೆನಡಾಗೆ ಫಿಫಾ ವಿಶ್ವಕಪ್ ನಾಕೌಟ್ ಹಂತದಲ್ಲಿ ಇದು ಮೊಟ್ಟಮೊದಲ ಗೆಲುವಾಗಿದೆ.
ಸೋಫಿ ಸ್ಟೇಡಿಯಂನಲ್ಲಿ ಬಹುತೇಕ ಗೋಲು ರಹಿತವಾಗಿ ಸಾಗಿದ ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಿಸಲ್ಪಡುವ ಲಕ್ಷಣ ಕಾಣಿಸಿದಾಗ 29 ವರ್ಷದ ಯುಸ್ಟಾಕಿಯೊ, ಅಲಿಸ್ಟೆರ್ ಜಾನ್ಸ್ಟನ್ ನೀಡಿದ ಲಾಂಗ್ ಪಾಸ್ನಲ್ಲಿ ಪೆನಾಲ್ಟಿ ಪ್ರದೇಶದಿಂದ ಒದ್ದ ಚೆಂಡು ದಣ ಆಫ್ರಿಕಾದ ಗೋಲು ಕೀಪರ್ ಹಾಗೂ ನಾಯಕ ರೊನ್ವೆನ್ ವಿಲಿಯಮ್ಸ್ರನ್ನು ವಂಚಿಸಿ ಗೋಲು ಪೆಟ್ಟಿಗೆ ಸೇರಿತು. ಇದರಿಂದ ದ. ಆಫ್ರಿಕಾದ ಡಿಫೆಂಡರ್ಗಳು ಅದುವರೆಗೆ ನಿರ್ಮಿಸಿದ್ದ ರಕ್ಷಣಾ ಕೋಟೆ ಛಿದ್ರಗೊಂಡಿತು. ಮತ್ತೊಂದೆಡೆ ಕೆನಡಾ ಕೂಡ ಪಂದ್ಯದುದ್ದಕ್ಕೂ ಬಲಿಷ್ಠ ಗೋಡೆ ನಿರ್ಮಿಸಿ ದಣ ಆಫ್ರಿಕಾವನ್ನು ಸತಾಯಿಸಿತು.
ವಿಶ್ವ ನಂ. 30 ಕೆನಡಾ ತಂಡ ಜುಲೈ 4ರಂದು ಹ್ಯೂಸ್ಟನ್ನಲ್ಲಿ ನಡೆಯಲಿರುವ 16ರ ಟ್ಟದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಅಥವಾ ಮೊರಾಕ್ಕೊ ವಿರುದ್ಧ ಸೆಣಸಲಿದೆ.
ಪಂದ್ಯದ ಅಂತಿಮ ಸೀಟಿ ಮೊಳಗುತ್ತಿದ್ದಂತೆ ಕೆನಡಾ ಆಟಗಾರರನ್ನು ಒಗ್ಗೂಡಿಸಿದ ಕೋಚ್ ಜೆಸ್ಸಿ ಮಾರ್ಷ್, "ನೀವೇ ಕೆನಡಾದ ಹೀರೋಗಳು' ಎಂದು ಉದ್ಘೋಷ ಮಾಡಿ ಸಂಭ್ರಮಿಸಿದರು. ಗೆಲುವಿನ ರೂವಾರಿ ಯುಸ್ಟಾಕ್ವಿಯೊ ಕ್ಲಬ್ ಫುಟ್ಬಾಲ್ನಲ್ಲಿ ಲಾಸ್ ಏಂಜಲೀಸ್ ಎಫ್ಸಿ ಆಟಗಾರರಾಗಿರುವುದರಿಂದ ಸ್ಥಳಿಯರ ಪ್ರೀತಿಯನ್ನೂ ಪಡೆದರು.
ರೊನ್ವೆನ್ ವಿಲಿಯಮ್ಸ್ ಕೆನಡಾಗೆ ಗೆಲುವಿನ ಗೋಲು ಬಿಟ್ಟುಕೊಡುವ ಮುನ್ನ 5 ಗೋಲುಗಳನ್ನು ತಡೆದಿದ್ದರು. ಈ ಮೂಲಕ ಪಂದ್ಯ ಅಂತಿಮ ಕ್ಷಣದವರೆಗೂ ಕುತೂಹಲ ಉಳಿಸಿಕೊಳ್ಳುವಂತೆ ಮಾಡಿದರು.
"ಬಫಾನಾ ಬಫಾನಾ' ಖ್ಯಾತಿಯ ದ. ಆಫ್ರಿಕಾ ಪಂದ್ಯದ 6ನೇ ನಿಮಿಷದಲ್ಲಷ್ಟೇ ಗೋಲು ಗಳಿಸುವ ಅವಕಾಶ ಪಡೆದಿತ್ತು. ಉಳಿದಂತೆ ಬಹುತೇಕ ರಕ್ಷಣಾ ಕಾರ್ಯತಂತ್ರವನ್ನೇ ಅನುಸರಿಸಿತು. ಮೊದಲ ಬಾರಿ ನಾಕೌಟ್ ಪ್ರವೇಶಿಸಿದ ಸಂಭ್ರಮಕ್ಕಷ್ಟೇ ದ. ಆಫ್ರಿಕಾ ತೃಪ್ತಿಪಟ್ಟಿತು. ಕೆನಡಾದ ಸ್ಟಾರ್ ಡಿಫೆಂಡರ್ ಅಲ್ಫೋನ್ಸೊ ಡೇವಿಸ್ ಪಂದ್ಯದ 75ನೇ ನಿಮಿಷದಲ್ಲಿ ಟೂರ್ನಿಯಲ್ಲಿ ಮೊದಲ ಬಾರಿ ಕಣಕ್ಕಿಳಿದರು. ಅವರು ಗಾಯದಿಂದಾಗಿ ಲೀಗ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.
*ಫುಟ್ಬಾಲ್ ಆಟಕ್ಕಿನ್ನು ಕೆನಡಾದಲ್ಲಿ ಉಜ್ವಲ ಭವಿಷ್ಯವಿದೆ. ಪಂದ್ಯದಲ್ಲಿ ಮೊದಲೇ ಸಿಕ್ಕ ಕೆಲ ಅವಕಾಶಗಳನ್ನು ಬಳಸಿಕೊಂಡಿದ್ದರೆ ನಮಗೆ ಸುಲಭವಾಗಿ ಗೆಲುವು ಒಲಿಯುತಿತ್ತು. ಆದರೆ ಕೊನೆಗೂ ಗೆಲುವು ಬಂದ ಕ್ಷಣ, ನಮ್ಮ ಗೆಲುವನ್ನು ಅತ್ಯಂತ ನಾಟಕೀಯಗೊಳಿಸಿತು. ಈ ಗೆಲುವು ಭವಿಷ್ಯದ ತಲೆಮಾರಿಗೆ ಸ್ಫೂರ್ತಿ ತುಂಬಲಿದೆ.
| ಜೆಸ್ಸಿ ಮಾರ್ಷ್, ಕೆನಡಾ ಕೋಚ್
*ಸ್ಟೀನ್ ಯುಸ್ಟಾಕ್ವಿಯೊ (90+2ನೇ ನಿಮಿಷ)
*12: ಕೆನಡಾ ಕಳೆದ 12 ವರ್ಷಗಳಲ್ಲಿ ವಿಶ್ವಕಪ್ ನಾಕೌಟ್ ಪಂದ್ಯ ಗೆದ್ದ ಮೊದಲ ಉತ್ತರ ಅಮೆರಿಕದ ತಂಡವೆನಿಸಿತು. 2014ರಲ್ಲಿ ಕೊನೆಯದಾಗಿ ಕೋಸ್ಟಾರಿಕಾ ಈ ಸಾಧನೆ ಮಾಡಿತ್ತು.
*74: ದ. ಆಫ್ರಿಕಾದ ಹುಗೋ ಬ್ರೂಸ್ (74 ವರ್ಷ, 79 ದಿನ) ಫಿಫಾ ವಿಶ್ವಕಪ್ ನಾಕೌಟ್ನಲ್ಲಿ ಕಾರ್ಯನಿರ್ವಹಿಸಿದ ಅತ್ಯಂತ ಹಿರಿಯ ಕೋಚ್ ಎನಿಸಿದರು. ಉರುಗ್ವೆಯ ಆಸ್ಕರ್ ತಬರೇಜ್ (71 ವರ್ಷ) 2018ರಲ್ಲಿ ಹಿಂದಿನ ಹಿರಿಯ ಕೋಚ್ ಎನಿಸಿದ್ದರು.