EnglandVsNorway: ಪಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ನಾರ್ವೆ ವಿರುದ್ಧ 2-1 ಅಂತರದ ರೋಮಾಂಚಕ ಜಯ ಸಾಧಿಸಿದ ಇಂಗ್ಲೆಂಡ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬ್ರೆಜಿಲ್ ತಂಡವನ್ನು ಟೂರ್ನಿಯಿಂದ ಹೊರಹಾಕಿ, ಇಂಗ್ಲೆಂಡ್‌ಗೆ ತೀವ್ರ ಪೈಪೋಟಿ ನೀಡಿದ್ದ ನಾರ್ವೆ ತಂಡಕ್ಕೆ ಈ ಸೋಲು ನಿರಾಸೆ ಮೂಡಿಸಿದ್ದರೂ, ಪಂದ್ಯದುದ್ದಕ್ಕೂ ಅವರು ತೋರಿದ ದಿಟ್ಟ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಿಯಾಮಿಯಲ್ಲಿ ನಡೆದ ಈ ಪಂದ್ಯದಲ್ಲಿ ನಾರ್ವೆ ಆಟಗಾರರು ಇಂಗ್ಲೆಂಡ್‌ಗೆ ಸಮನಾದ ಪೈಪೋಟಿ ನೀಡಿದರಲ್ಲದೆ, ಪಂದ್ಯದ ಆರಂಭದಲ್ಲೇ ಆಂಡ್ರಿಯಾಸ್ ಶ್ಜೆಲ್ಡೆರಪ್ ಬಾರಿಸಿದ ಅದ್ಭುತ ಗೋಲಿನ ನೆರವಿನಿಂದ 1-0 ಮುನ್ನಡೆ ಸಾಧಿಸಿ ಇಂಗ್ಲೆಂಡ್‌ಗೆ ಶಾಕ್ ನೀಡಿದ್ದರು.
ಆದರೆ ಇಂಗ್ಲೆಂಡ್ ತಂಡದ ರಕ್ಷಣಾತ್ಮಕ ತಂತ್ರಗಳು ಮತ್ತು ಜೂಡ್ ಬೆಲ್ಲಿಂಗ್‌ಹ್ಯಾಮ್ ಅದ್ಭುತ ಫಾರ್ಮ್ ಪಂದ್ಯದ ಗತಿಯನ್ನು ಬದಲಿಸಿತು. ಆಂಥೋನಿ ಗಾರ್ಡನ್ ನೀಡಿದ ಪಾಸ್ ಅನ್ನು ಅದ್ಭುತವಾಗಿ ಗೋಲಾಗಿ ಪರಿವರ್ತಿಸಿದ ಬೆಲ್ಲಿಂಗ್‌ಹ್ಯಾಮ್, ಮೊದಲಾರ್ಧ ಮುಗಿಯುವ ಮುನ್ನವೇ ಇಂಗ್ಲೆಂಡ್ ಪರ ಸಮಬಲ ತಂದರು. ನಾರ್ವೆ ತಂಡದ ಪ್ರಮುಖ ಅಸ್ತ್ರ ಹಾಗೂ ಭರ್ಜರಿ ಫಾರ್ಮ್‌ನಲ್ಲಿದ್ದ ಸ್ಟ್ರೈಕರ್ ಎರ್ಲಿಂಗ್ ಹಾಲಂಡ್ ಅವರನ್ನು ಕಟ್ಟಿಹಾಕಲು ಇಂಗ್ಲೆಂಡ್ ಕೋಚ್ ಥಾಮಸ್ ಟುಚೆಲ್ ವಿಶೇಷ ರಕ್ಷಣಾತ್ಮಕ ತಂತ್ರ ರೂಪಿಸಿದ್ದರು. ಜಾನ್ ಸ್ಟೋನ್ಸ್ ಮತ್ತು ಮಾರ್ಕ್ ಗ್ಯುಹಿ ಅವರ ಕಠಿಣ ಡಿಫೆನ್ಸ್‌ನಿಂದಾಗಿ ಹಾಲಂಡ್‌ಗೆ ಮುಕ್ತವಾಗಿ ಗೋಲು ಗಳಿಸುವ ಯಾವುದೇ ಅವಕಾಶ ಸಿಗಲಿಲ್ಲ. ಪರಿಣಾಮವಾಗಿ, ಕಳೆದ 636 ದಿನಗಳಲ್ಲಿ ಹಾಲಂಡ್ ಅವರನ್ನು ಗೋಲು ಬಾರಿಸದಂತೆ ಕಟ್ಟಿಹಾಕಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಯಿತು.
ಪೀಲೆ ದಾಖಲೆಯನ್ನು ಸರಿಗಟ್ಟಿದ್ದ ಬೆಲ್ಲಿಂಗ್‌ಹ್ಯಾಮ್
ಪಂದ್ಯದ ದ್ವಿತೀಯಾರ್ಧದಲ್ಲಿ ನಾರ್ವೆ ಗೋಲ್‌ಕೀಪರ್ ಓರ್ಜಾನ್ ನೈಲ್ಯಾಂಡ್ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಚೆಂಡು ಜಾರಿದಾಗ, ಅಲ್ಲಿಯೇ ಇದ್ದ ಬೆಲ್ಲಿಂಗ್‌ಹ್ಯಾಮ್ ಸುಲಭವಾಗಿ ಇಂಗ್ಲೆಂಡ್ ಪರ ಎರಡನೇ ಹಾಗೂ ವಿಜಯದ ಗೋಲು ದಾಖಲಿಸಿದರು. ಈ ಅವಳಿ ಗೋಲುಗಳ ಮೂಲಕ ಬೆಲ್ಲಿಂಗ್‌ಹ್ಯಾಮ್, 24 ವರ್ಷ ವಯಸ್ಸಿನೊಳಗಾಗಿ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಬ್ರೆಜಿಲ್‌ನ ದಿಗ್ಗಜ ಪೀಲೆ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪಂದ್ಯದ ಕೊನೆಯ ಕ್ಷಣಗಳಲ್ಲಿ ನಾರ್ವೆ ಪಂದ್ಯವನ್ನು ಟೈ ಮಾಡಲು ತೀವ್ರ ಪ್ರಯತ್ನ ನಡೆಸಿತಾದರೂ, ಇಂಗ್ಲೆಂಡ್‌ನ ರಕ್ಷಣಾ ವಿಭಾಗ ಮತ್ತು ಗೋಲ್‌ಕೀಪರ್ ಜೋರ್ಡಾನ್ ಪಿಕ್‌ಫೋರ್ಡ್ ಅದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಅಲ್ಲಿ ಅರ್ಜೆಂಟೀನಾ ಅಥವಾ ಸ್ವಿಟ್ಜರ್ಲೆಂಡ್ ತಂಡವನ್ನು ಎದುರಿಸಲಿದೆ. ಸೋತರೂ ಜಗತ್ತಿನ ಗಮನ ಸೆಳೆದ ನಾರ್ವೆ ತಂಡ ಟೂರ್ನಿಯಿಂದ ಹೊರನಡೆದಿದೆ(ಏಜೆನ್ಸೀಸ್).