FIFA WorldCup: ಇಂದು ಕ್ವಾರ್ಟರ್ಫೈನಲ್ನಲ್ಲಿ ಸ್ಪೇನ್-ಬೆಲ್ಜಿಯಂ ಮುಖಾಮುಖಿ
ಲಾಸ್ ಏಂಜಲೀಸ್: ಎದುರಾಳಿಗೆ ಒಂದೂ ಗೋಲು ಬಿಟ್ಟುಕೊಡದೆ ಮುನ್ನುಗ್ಗುತ್ತಿರುವ ಯುರೋಕಪ್ ಚಾಂಪಿಯನ್ ಸ್ಪೇನ್ ಮತ್ತು ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಡ್ರಾಕ್ಕೆ ತೃಪ್ತಿಪಟ್ಟ ಬಳಿಕ ಸತತ 3 ಜಯದೊಂದಿಗೆ ಬೀಗುತ್ತಿರುವ ಬೆಲ್ಜಿಯಂ ತಂಡಗಳು ಫಿಫಾ ವಿಶ್ವಕಪ್ (FIFA WorldCup) 23ನೇ ಆವೃತ್ತಿಯ ಕ್ವಾರ್ಟರ್ಫೈನಲ್ನಲ್ಲಿ ಶುಕ್ರವಾರ ರಾತ್ರಿ ಮುಖಾಮುಖಿ ಆಗಲಿವೆ. ಲಾ ರೋಜಾ ಖ್ಯಾತಿಯ ಸ್ಪೇನ್ 2010ರಲ್ಲಿ ವಿಶ್ವಕಪ್ ಗೆದ್ದ ಬಳಿಕ ಮೊದಲ ಬಾರಿ ಉಪಾಂತ್ಯಕ್ಕೇರುವ ಹಂಬಲದಲ್ಲಿದ್ದರೆ, ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ 2018ರ ಬಳಿಕ ಮತ್ತೊಮ್ಮೆ ಸೆಮಿಫೈನಲ್ ಕನಸಿನಲ್ಲಿದೆ.
ಲೂಯಿಸ್ ಡೆ ಲಾ ಫ್ಯುಯೆಂಟೆ ತರಬೇತಿಯ ಸ್ಪೇನ್ ತಂಡ 16ರ ಘಟ್ಟದಲ್ಲಿ ಪೋರ್ಚುಗಲ್ ತಂಡದ ಕನಸು ಭಗ್ನಗೊಳಿಸಿದ್ದರೆ, ಬೆಲ್ಜಿಯಂ ತಂಡ ಸಹ-ಆತಿಥೇಯ ಅಮೆರಿಕನ್ನರನ್ನು ಟೂರ್ನಿಯಿಂದ ಹೊರದಬ್ಬಿತ್ತು. ಇದುವರೆಗೆ 4 ಗೋಲು ಸಿಡಿಸಿರುವ ಮೈಕೆಲ್ ಒಯರ್ಜಾಬಲ್, ಯುವತಾರೆ ಲ್ಯಾಮಿನ್ ಯಮಲ್ ಜತೆಗೆ ಪೆಡ್ರಿ, ಅನುಭವಿ ಮಿಡ್ಫೀಲ್ಡರ್ ರೋಡ್ರಿ, ಮೈಕೆಲ್ ಮೆರಿನೊ ಸ್ಪೇನ್ನ ಪ್ರಮುಖ ಶಕ್ತಿಯಾಗಿದ್ದಾರೆ.
ರುಡಿ ಗಾರ್ಸಿಯಾ ಮಾರ್ಗದರ್ಶನದ ಬೆಲ್ಜಿಯಂಗೆ ಸ್ಟಾರ್ ಆಟಗಾರರಾದ ಕೆವಿನ್ ಡಿ ಬ್ರುಯ್ನ್, ರೊಮೆಲು ಲುಕಾಕು (3 ಗೋಲು), ತಲಾ 2 ಗೋಲು ಸಿಡಿಸಿರುವ ಚಾರ್ಲ್ಸ್ ಡಿ ಕೆಟೆಲೇರ್, ಯೂರಿ ಟೈಲೆಮನ್ಸ್, ಲಿಯಾಂಡ್ರೊ ಟ್ರಾಸಾರ್ಡ್ ಬಲವಿದೆ.
*2: ಸ್ಪೇನ್-ಬೆಲ್ಜಿಯಂ ತಂಡಗಳು ವಿಶ್ವಕಪ್ನಲ್ಲಿ ಈ ಹಿಂದೆ 2 ಬಾರಿ ಮುಖಾಮುಖಿ ಆಗಿದ್ದು, ತಲಾ ಒಂದರಲ್ಲಿ ಗೆದ್ದಿವೆ. 1986ರ ಕ್ವಾರ್ಟರ್ೈನಲ್ನಲ್ಲಿ ಬೆಲ್ಜಿಯಂ ಗೆದ್ದಿದ್ದರೆ, 1990ರ ಲೀಗ್ ಹಂತದ ಪಂದ್ಯದಲ್ಲಿ ಸ್ಪೇನ್ ಜಯಿಸಿತ್ತು.
ಬ್ರೆಜಿಲ್, ಜರ್ಮನಿ ಇಲ್ಲದ ಮೊದಲ ಅಂತಿಮ 8ರ ಘಟ್ಟ
ಫಿಫಾ ವಿಶ್ವಕಪ್ ಇತಿಹಾಸದಲ್ಲಿ 5 ಬಾರಿಯ ಚಾಂಪಿಯನ್ ಬ್ರೆಜಿಲ್ ಮತ್ತು 4 ಬಾರಿಯ ಚಾಂಪಿಯನ್ ಜರ್ಮನಿ ತಂಡಗಳೆರಡೂ ಇಲ್ಲದ ಮೊದಲ ಅಂತಿಮ ಎಂಟರ ಘಟ್ಟ ಇದಾಗಿದೆ. ಕ್ವಾರ್ಟರ್ಫೈನಲ್ ಇದ್ದ 17 ಆವೃತ್ತಿಗಳ ಪೈಕಿ 10ರಲ್ಲಿ ಇವೆರಡೂ ತಂಡಗಳು ಭಾಗವಹಿಸಿದ ಇತಿಹಾಸವಿದೆ. ಉಳಿದಂತೆ ಜರ್ಮನಿ ಈ ಹಿಂದೆ 1938, 1950, 2018 ಮತ್ತು 2022ರಲ್ಲೂ ಕ್ವಾರ್ಟರ್ಫೈನಲ್ ತಪ್ಪಿಸಿಕೊಂಡಿದ್ದರೆ, ಬ್ರೆಜಿಲ್ 1934, 1966, 1990ರಲ್ಲಿ 8ರ ಘಟ್ಟದಿಂದ ಹೊರಗುಳಿದಿತ್ತು.
2022ರಲ್ಲಿ ಕತಾರ್ನಲ್ಲಿ ನಡೆದ ವಿಶ್ವಕಪ್ನಲ್ಲಿ 8ರ ಟ್ಟದಲ್ಲಿ ಆಡಿದ್ದ 4 ತಂಡಗಳು (ಅರ್ಜೆಂಟೀನಾ, ಇಂಗ್ಲೆಂಡ್, ಫ್ರಾನ್ಸ್, ಮೊರಾಕ್ಕೊ) ಈ ಬಾರಿಯೂ ಅರ್ಹತೆ ಪಡೆದಿವೆ. ಈ 4 ತಂಡಗಳ ಪೈಕಿ ಆಗ ಇಂಗ್ಲೆಂಡ್ ಮಾತ್ರ ಕ್ವಾರ್ಟರ್ ಫೈನಲ್ನಲ್ಲೇ ಹೊರಬಿದ್ದಿತ್ತು. ಅರ್ಜೆಂಟೀನಾ-ಫ್ರಾನ್ಸ್ ಆಗ ಫೈನಲ್ವರೆಗೂ ಹೋಗಿತ್ತು. ಈ ಹಿಂದೆ 1986 ಮತ್ತು 1990ರಲ್ಲಿ ಮಾತ್ರ ಒಂದೇ ಎದುರಾಳಿಗಳು (ಜರ್ಮನಿ&ಅರ್ಜೆಂಟೀನಾ) ಸತತ 2 ಫೈನಲ್ಗಳಲ್ಲಿ ಮುಖಾಮುಖಿ ಆಗಿದ್ದವು.