FIFA WorldCup: ರೆಡ್ ಡೆವಿಲ್ಸ್ ಎದುರು ಅಮೆರಿಕನ್ನರ ಕನಸು ಭಗ್ನ
ಸಿಯಾಟಲ್: ಚಾರ್ಲ್ಸ್ ಡಿ ಕೆಟೆಲೇರ್ (9, 33ನೇ ನಿಮಿಷ) ದಾಖಲಿಸಿದ ಅವಳಿ ಗೋಲು ಮತ್ತು ಇನ್ನೊಂದು ಗೋಲಿಗೆ ನೆರವಾದ ಸಾಧನೆಯಿಂದ ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ ತಂಡ ಫಿಫಾ ವಿಶ್ವಕಪ್ (FIFA WorldCup) 23ನೇ ಆವೃತ್ತಿಯಲ್ಲಿ ಸಹ-ಆತಿಥೇಯ ಅಮೆರಿಕ ತಂಡಕ್ಕೆ 4-1ರಿಂದ ಸೋಲುಣಿಸಿ, ತವರು ನೆಲದ ಕನಸಿನ ಓಟಕ್ಕೆ ತೆರೆ ಎಳೆಯಿತು. ಇದರೊಂದಿಗೆ ಬೆಲ್ಜಿಯಂ 2018ರ ಬಳಿಕ ಮತ್ತೊಮ್ಮೆ ಕ್ವಾರ್ಟರ್ಫೈನಲ್ ಹಂತಕ್ಕೇರಿದರೆ, ಅಮೆರಿಕ ಸತತ 4ನೇ ಬಾರಿ 16ರ ಘಟ್ಟದಲ್ಲೇ ಗೇಟ್ಪಾಸ್ ಪಡೆಯಿತು. ಕಳೆದ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದ ನಡುವೆಯೂ ಕಣಕ್ಕಿಳಿದ ಫೋಲಾರಿನ್ ಬಾಲೋಗುನ್ ಅಮೆರಿಕನ್ನರಿಗೆ ಯಾವುದೇ ರೀತಿಯಲ್ಲಿ ನೆರವಾಗಲಿಲ್ಲ. ಪ್ರಮುಖವಾಗಿ ರಕ್ಷಣಾ ವಿಭಾಗದ ವೈಫಲ್ಯ ಆತಿಥೇಯರ ಕನಸು ಭಗ್ನಗೊಳಿಸಿತು.
ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಕೆಟೆಲೇರ್ 9ನೇ ನಿಮಿಷದಲ್ಲೇ ಗೋಲು ಬಾರಿಸಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರೆ, ಮಲಿಕ್ ಟಿಲ್ಮನ್ 31ನೇ ನಿಮಿಷದಲ್ಲಿ ಫ್ರೀಕಿಕ್ ಗೋಲಿನೊಂದಿಗೆ ಅಮೆರಿಕಕ್ಕೆ ಸಮಬಲ ನೀಡಿದರು. ಆದರೆ 61 ಸೆಕೆಂಡ್ಗಳಲ್ಲೇ ಕೆಟೆಲೇರ್ ಹೆಡರ್ ಮೂಲಕ ತನ್ನ 2ನೇ ಗೋಲು ಬಾರಿಸಿ ಬೆಲ್ಜಿಯಂಗೆ ಮತ್ತೆ ಮುನ್ನಡೆ ಒದಗಿಸಿದರು. ದ್ವೀತಿಯಾರ್ಧದಲ್ಲಿ ಹ್ಯಾನ್ಸ್ ವನಕೆನ್ (57) ಅಮೆರಿಕದ ಗೋಲು ಕೀಪರ್ ಮ್ಯಾಟ್ ಫ್ರೀಸ್ ಮಾಡಿದ ಎಡವಟ್ಟಿನಿಂದ ಲಾಭ ಪಡೆದು ಬೆಲ್ಜಿಯಂ ಮುನ್ನಡೆ ಹಿಗ್ಗಿಸಿದರು. ಬಳಿಕ ದ್ವೀತಿಯಾರ್ಧದ ಬದಲಿ ಆಟಗಾರ ರೊಮೆಲು ಲುಕಾಕು (90+3) ಇಂಜುರಿ ಸಮಯದಲ್ಲಿ ಬೆಲ್ಜಿಯಂ ಗೆಲುವಿನ ಅಂತರ ಹಿಗ್ಗಿಸಿದರು. ಬೆಲ್ಜಿಯಂ ಅಜೇಯ ಓಟವನ್ನು 18ನೇ ಪಂದ್ಯಕ್ಕೆ ವಿಸ್ತರಿಸಿಕೊಂಡಿತು.
ಅಮೆರಿಕದ ಸ್ಟಾರ್ ಆಟಗಾರ ಕ್ರಿಶ್ಚಿಯನ್ ಪುಲಿಸಿಕ್ ಈ ಬಾರಿ ಆರಂಭಿಕ 11ರಲ್ಲೇ ಕಣಕ್ಕಿಳಿದರೂ, 52ನೇ ನಿಮಿಷದಲ್ಲಿ ಆದ ಬಲಗಾಲಿನ ಗಾಯದಿಂದಾಗಿ ಪಂದ್ಯದ ಉಳಿದ ಭಾಗವನ್ನು ಬೆಂಚ್ನಿಂದಲೇ ವೀಸಿದರು.
2002ರ ಬಳಿಕ ಮೊದಲ ಬಾರಿ ಕ್ವಾರ್ಟರ್ಫೈನಲ್ಗೇರುವ ಅಮೆರಿಕದ ಆಸೆ ಭಗ್ನವಾದರೂ, ವಿಶ್ವಕಪ್ನಲ್ಲಿ ಮೊದಲ ಬಾರಿ 3 ಪಂದ್ಯ ಗೆಲುವಿನ ಸಂಭ್ರಮ ಕಂಡಿತು. 1930ರ ಮೊದಲ ವಿಶ್ವಕಪ್ ಮುಖಾಮುಖಿಯಲ್ಲಿ ಬೆಲ್ಜಿಯಂ ವಿರುದ್ಧ ಗೆದ್ದಿದ್ದ ಅಮೆರಿಕ, ನಂತರದ 8 ಪಂದ್ಯಗಳಲ್ಲೂ ಸೋಲುಂಡಿದೆ.
*ಮಲಿಕ್ ಟಿಲ್ಮನ್ (31ನೇ ನಿಮಿಷ)
*ಚಾರ್ಲ್ಸ್ ಡಿ ಕೆಟೆಲೇರ್ (9, 33)