FIFA WorldCup: ಏಷ್ಯಾದ ನಂ. 1 ಜಪಾನ್ ದಾಖಲೆ ಜಯಭೇರಿ
ಮಾಂಟೆರ್ರಿ (ಮೆಕ್ಸಿಕೋ): ಅಯಾಸೆ ಉಯೇಡಾ (31, 83ನೇ ನಿಮಿಷ) ಸಿಡಿಸಿದ ಅವಳಿ ಗೋಲಿನ ಬಲದಿಂದ ಫಿಫಾ ವಿಶ್ವಕಪ್ (FIFA WorldCup) ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವಿನ ದಾಖಲೆ ಬರೆದಿರುವ ಏಷ್ಯಾದ ನಂ.1 ಜಪಾನ್ ತಂಡ ಸತತ 4ನೇ ಬಾರಿ ನಾಕೌಟ್ ಹಂತಕ್ಕೇರುವ ಸನಿಹ ತಲುಪಿದೆ. ಜಪಾನ್ ತಂಡ ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಬೆಳಗ್ಗೆ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಟುನೀಷಿಯಾ ವಿರುದ್ಧ 4-0 ಅಂತರದಿಂದ ಗೆಲುವು ಸಾಧಿಸಿತು. ಜಪಾನ್ ತಂಡ ವಿಶ್ವಕಪ್ ಪಂದ್ಯವೊಂದರಲ್ಲಿ 4 ಗೋಲು ಸಿಡಿಸಿದ್ದು ಇದೇ ಮೊದಲಾಗಿದೆ. ಅಲ್ಲದೆ ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ತಂಡವೆನಿಸಿದೆ.
ಸಮುರಾಯ್ ಬ್ಲೂ ಖ್ಯಾತಿಯ ಜಪಾನ್ ತಂಡದ ಪರ ಡೈಚಿ ಕಾಮಡ (4) ಮತ್ತು ಜುನ್ಯಾ ಇಟೋ (69) ತಲಾ ಒಂದು ಗೋಲು ಬಾರಿಸಿದರು. ಇದರೊಂದಿಗೆ ಜಪಾನ್ ತಂಡ ನೆದರ್ಲೆಂಡ್ ವಿರುದ್ಧ ಗೋಲು ಅಂತರ ಮತ್ತು ಅಂಕ ಗಳಿಕೆಯಲ್ಲಿ ಸಮಬಲ ಸಾಧಿಸಿದೆ. ನೆದರ್ಲೆಂಡ್&ಜಪಾನ್ ಆರಂಭಿಕ ಪಂದ್ಯದಲ್ಲಿ 2-2 ಸಮಬಲ ಸಾಧಿಸಿದ್ದವು. ಜಪಾನ್ ಇನ್ನೂ ಸ್ವೀಡನ್ ವಿರುದ್ಧ ಡ್ರಾ ಸಾಧಿಸಿದರೂ ನಾಕೌಟ್ಗೇರಬಹುದಾಗಿದೆ.
ಆಫ್ರಿಕಾದ ದೇಶ ಟುನೀಷಿಯಾ ಮೊದಲ ಪಂದ್ಯದಲ್ಲಿ ಸ್ವೀಡನ್ ವಿರುದ್ಧ 1-5ರಿಂದ ಸೋತ ಬೆನ್ನಲ್ಲೇ ತನ್ನ ಕೋಚ್ ವಜಾಗೊಳಿಸಿತ್ತು. ಆದರೆ ಜಪಾನ್ ವಿರುದ್ಧವೂ ಟುನೀಷಿಯಾದ ರಕ್ಷಣಾ ವಿಭಾಗದ ನಿರ್ವಹಣೆ ಸುಧಾರಿಸಲಿಲ್ಲ. ಟುನೀಷಿಯಾ ಸತತ 2ನೇ ಸೋಲಿನೊಂದಿಗೆ ಲೀಗ್ ಹಂತದಲ್ಲೇ ಹೊರಬಿದ್ದಿದೆ. ಟುನೀಷಿಯಾ ಹಿಂದಿನ 6 ವಿಶ್ವಕಪ್ಗಳಲ್ಲೂ ಗುಂಪು ಹಂತ ದಾಟಿರಲಿಲ್ಲ.
ಜಪಾನ್-ಟುನೀಷಿಯಾ ನಡುವಿನ ಪಂದ್ಯ ಫಿಫಾ ವಿಶ್ವಕಪ್ ಇತಿಹಾಸದ 1,000ನೇ ಪಂದ್ಯವೆನಿಸಿತು. 96 ವರ್ಷಗಳ ಹಿಂದೆ 1930ರಲ್ಲಿ ಉರುಗ್ವೆಯಲ್ಲಿ ಟೂರ್ನಿ ಆರಂಭಗೊಂಡಿತ್ತು. ಹಿಂದಿನ 22 ಆವೃತ್ತಿಗಳಲ್ಲಿ 8 ತಂಡಗಳು ಪ್ರಶಸ್ತಿ ಹಂಚಿಕೊಂಡಿವೆ. ಇದುವರೆಗೆ ಒಟ್ಟಾರೆ 88 ತಂಡಗಳು ಟೂರ್ನಿಯಲ್ಲಿ ಆಡಿವೆ.
1: ಪಂದ್ಯ ಶುರುವಾದ 3 ನಿಮಿಷ, 27 ಸೆಕೆಂಡ್ಗಳಲ್ಲೇ ಗೋಲು ಬಾರಿಸಿದ ಡೈಚಿ ಕಾಮಡ, ಫಿಫಾ ವಿಶ್ವಕಪ್ನಲ್ಲಿ ಜಪಾನ್ನ ಅತಿವೇಗದ ಗೋಲು ಸಾಧಕ ಎನಿಸಿದರು.