ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅರ್ಜೆಂಟೀನಾ ಅಧ್ಯಕ್ಷ ಗೈರು; ಮೂಢನಂಬಿಕೆಯೇ ಕಾರಣ!
ಬ್ಯೂನಸ್ ಐರಿಸ್: ಮೂಢನಂಬಿಕೆಯ ಕಾರಣದಿಂದಾಗಿ ಫಿಫಾ ವಿಶ್ವಕಪ್ (FIFA World Cup) ಫೈನಲ್ ಪಂದ್ಯಕ್ಕೆ ತಾನು ಹಾಜರಾಗುವುದಿಲ್ಲ ಎಂದು ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಹೇಳಿದ್ದಾರೆ. ಹಿಂದಿನ 7 ಪಂದ್ಯಗಳನ್ನು ಮನೆಯಲ್ಲಿ ವೀಕ್ಷಿಸಿದ್ದ ಅವರು, ಫೈನಲ್ ಪಂದ್ಯವನ್ನೂ ಅಲ್ಲೇ ಟಿವಿಯಲ್ಲಿ ನೋಡಲಿದ್ದಾರೆ. ಅಲ್ಲದೆ ಹಿಂದಿನ ಪಂದ್ಯಗಳನ್ನು ವೀಕ್ಷಿಸುವಾಗ ಧರಿಸಿದ್ದ ದಪ್ಪ ಜಾಕೆಟ್ಅನ್ನೇ ಮತ್ತೆ ಧರಿಸಲಿದ್ದಾರೆ. ಸ್ವಿರ್ಜಲೆಂಡ್ ವಿರುದ್ಧ ಪಂದ್ಯದ ವೇಳೆ ಅವರೊಮ್ಮೆ ಈ ಜಾಕೆಟ್ ಕಳಚಿದಾಗ ಅರ್ಜೆಂಟೀನಾ ಗೋಲು ಬಿಟ್ಟುಕೊಟ್ಟಿತ್ತಂತೆ. ಹೀಗಾಗಿ ಆ ಜಾಕೆಟ್ ಧರಿಸಿಯೇ ಫೈನಲ್ ವೀಕ್ಷಿಸಲು ಅವರು ನಿರ್ಧರಿಸಿದ್ದಾರೆ.
ಅವರ ಆಪ್ತರೂ ಆಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೈನಲ್ಗೆ ಹಾಜರಾಗುತ್ತಿದ್ದರೂ, ಮಿಲೀ ಮಾತ್ರ ಹೋಗಲ್ಲ ಎಂದಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ, ಅದರಲ್ಲೂ ಪ್ರಮುಖವಾಗಿ ಅರ್ಜೆಂಟೀನಾದಲ್ಲಿ ತಂಡಕ್ಕೆ ಅದೃಷ್ಟ ತರುವ ಮೂಢನಂಬಿಕೆಯಲ್ಲಿ ಕೆಲ ಅಭ್ಯಾಸಗಳನ್ನು ಪಾಲಿಸುವುದು ಸಾಮಾನ್ಯ. ಕೆಲವರು ಒಂದೇ ಸ್ಥಳದಲ್ಲಿ ಪಂದ್ಯ ವೀಕ್ಷಿಸಿದರೆ, ಇನ್ನು ಕೆಲವರಿಗೆ ಪಂದ್ಯ ವೀಕ್ಷಿಸಲೇ ಅವಕಾಶ ನಿರಾಕರಿಸಲಾಗುತ್ತದೆ.
ಬಾತ್ರೂಮ್ಗೆ ಹೋಗಿದ್ದಾಗ ಗೋಲು ದಾಖಲಾಗಿದ್ದರೆ, ಬಳಿಕ ಇಡೀ ಪಂದ್ಯವನ್ನು ಅಲ್ಲಿಂದಲೇ ವೀಕ್ಷಿಸುವಂತೆ ಸೂಚಿಸಲಾಗುತ್ತದೆ. ಈಜಿಪ್ಟ್ ವಿರುದ್ಧದ ಪಂದ್ಯದ ವೇಳೆ ಒಂದು ಗುಂಪಿನ ಜನರು ಬೈಬಲ್ ಓದಲು ಆರಂಭಿಸಿದಾಗ ಅರ್ಜೆಂಟೀನಾ ಗೋಲು ಸಿಡಿಸಿ ತಿರುಗೇಟು ನೀಡಿತ್ತು. ಅವರಿಗೆ ಫೈನಲ್ ವೇಳೆಯೂ ಬೈಬಲ್ ಓದಲು ಸೂಚಿಸಲಾಗಿದೆ.
ಅರ್ಜೆಂಟೀನಾ ಹಾಲಿ ಅಧ್ಯಕ್ಷರು ಕಳೆದ 36 ವರ್ಷಗಳಿಂದಲೂ ವಿಶ್ವಕಪ್ ಪಂದ್ಯಗಳಿಗೆ ಹಾಜರಾಗುತ್ತಿಲ್ಲ. 1990ರಲ್ಲಿ ಆಗಿನ ಅಧ್ಯಕ್ಷ ಕಾಲೋರ್ಸ್ ಮೆನೆಮ್ ಅರ್ಜೆಂಟೀನಾ ತಂಡವನ್ನು ಭೇಟಿಯಾದ ಬೆನ್ನಲ್ಲೇ ಮರುಪಂದ್ಯದಲ್ಲಿ ತಂಡ ಸೋತಿತ್ತು. ನಂತರದಲ್ಲಿ ಈ ಮೂಢನಂಬಿಕೆ ಪಾಲಿಸಲಾಗುತ್ತಿದೆ.