ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ಅರ್ಜೆಂಟೀನಾ ತಾರೆ ಲಿಯೋನೆಲ್​ ಮೆಸ್ಸಿ ಗುಡ್​ಬೈ 
ಫುಟ್ಬಾಲ್

ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ಅರ್ಜೆಂಟೀನಾ ತಾರೆ ಲಿಯೋನೆಲ್​ ಮೆಸ್ಸಿ ಗುಡ್​ಬೈ

ಬ್ಯೂನಸ್​ ಐರಿಸ್​: ಅರ್ಜೆಂಟೀನಾದ ಸೂಪರ್​ಸ್ಟಾರ್​ ಲಿಯೋನೆಲ್​ ಮೆಸ್ಸಿ (Lionel Messi) ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ಸೋಮವಾರ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿದ್ದ ಅವರು, ಹಾಲಿ ವರ್ಷ ಸತತ 2ನೇ ಫಿಫಾ ವಿಶ್ವಕಪ್​ ಜಯಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದರು. 39 ವರ್ಷದ ಮೆಸ್ಸಿ ಇನ್ನು ಕ್ಲಬ್​ ಫುಟ್​ಬಾಲ್​ನಲ್ಲಿ ಮಾತ್ರ ಆಡಲಿದ್ದಾರೆ.

ಮೆಸ್ಸಿ 2006ರಿಂದ 2026ರವರೆಗೆ ಒಟ್ಟಾರೆ 6 ವಿಶ್ವಕಪ್​ಗಳಲ್ಲಿ ಆಡಿದ ದಾಖಲೆ ಹೊಂದಿದ್ದು, "ರಾಷ್ಟ್ರೀಯ ತಂಡದಿಂದ ನಾನು ನಿವೃತ್ತಿಯಾಗುತ್ತಿರುವ ಬಗ್ಗೆ ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ಈ ನಿರ್ಧಾರ ತೀವ್ರ ನೋವುಂಟು ಮಾಡಿತು ಮತ್ತು ಇನ್ನೂ ಆಳವಾಗಿ ನೋವುಂಟು ಮಾಡುತ್ತಿದೆ. ಆದರೆ ನನ್ನ ನಿವೃತ್ತಿಯ ಸಮಯ ಬಂದಿದೆ ಎಂದು ನನಗೆ ಅರ್ಥವಾಗಿದೆ' ಎಂದು ಇನ್​ಸ್ಟಾಗ್ರಾಂನಲ್ಲಿ ವಿದಾಯ ನಿರ್ಧಾರ ಪ್ರಕಟಿಸಿದ್ದಾರೆ. "ಅರ್ಜೆಂಟೀನಾ ತಂಡದ ಭಾಗವಾಗಿರುವುದನ್ನು ನಾನು ಯಾವಾಗಲೂ ಆನಂದಿಸಿದ್ದೇನೆ ಮತ್ತು ಎಲ್ಲವನ್ನೂ ನೀಡಿದ್ದೇನೆ. ಇನ್ನು ನೀಡಲು ನನ್ನ ಬಳಿ ಏನೂ ಇಲ್ಲ. ಯುವ ಆಟಗಾರರಿಗೆ ಇನ್ನು ಅರ್ಹವಾದ ಸ್ಥಾನ ಸಿಗಬೇಕು' ಎಂದು ಮೆಸ್ಸಿ ತಿಳಿಸಿದ್ದಾರೆ.

ಮೆಸ್ಸಿ 2005ರ ಆಗಸ್ಟ್​ 17ರಂದು ಹಂಗೆರಿ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ಪದಾರ್ಪಣೆ ಮಾಡಿದ್ದರು. ಆಗ 18 ವರ್ಷದ ಮೆಸ್ಸಿ 63ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದರೂ, ಎದುರಾಳಿ ಆಟಗಾರನಿಗೆ ಮೊಣಕೈಯಿಂದ ಗುದ್ದಿದ್ದ ಕಾರಣಕ್ಕೆ 47 ಸೆಕೆಂಡ್​ನಲ್ಲೇ ಮೈದಾನದಿಂದ ಹೊರಬಿದ್ದಿದ್ದರು. ಕ್ರೊವೇಷಿಯಾ ವಿರುದ್ಧ 2006ರ ಮಾರ್ಚ್​ 1ರಂದು ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ಪರ ತಮ್ಮ ಮೊಟ್ಟಮೊದಲ ಗೋಲು ಬಾರಿಸಿದ್ದರು.

ಅರ್ಜೆಂಟೀನಾ ಪರ ಒಟ್ಟು 207 ಪಂದ್ಯ ಆಡಿರುವ ಅವರು 125 ಗೋಲು ಸಿಡಿಸಿದ್ದಾರೆ. ಜತೆಗೆ 65 ಗೋಲುಗಳಿಗೆ ನೆರವಾಗಿದ್ದಾರೆ. ವೃತ್ತಿಪರ ಫುಟ್​ಬಾಲ್​ನಲ್ಲಿ ಇದುವರೆಗೆ ಒಟ್ಟಾರೆ 920 ಗೋಲು ಬಾರಿಸಿದ ಸಾಧನೆ ಅವರದಾಗಿದೆ.
ಕ್ಲಬ್​ ುಟ್​ಬಾಲ್​ನಲ್ಲಿ ಬಾರ್ಸಿಲೋನಾ, ಪ್ಯಾರಿಸ್​ ಸೇಂಟ್​-ಜಮೈರ್ನ್​ ಪರ ಆಡಿರುವ ಮೆಸ್ಸಿ, ಪ್ರಸಕ್ತ ಅಮೆರಿಕದ ಇಂಟರ್​ ಮಿಯಾಮಿ ಎ್​ಸಿ ತಂಡದ ಭಾಗವಾಗಿದ್ದಾರೆ.
ಮೆಸ್ಸಿ ಸಾಧನೆಯ ಹಾದಿ
*2022ರಲ್ಲಿ ಅರ್ಜೆಂಟೀನಾ ತಂಡದ ನಾಯಕರಾಗಿ ಫಿಫಾ ವಿಶ್ವಕಪ್​ ಗೆಲುವು.
*ದಾಖಲೆಯ 8 ಬಾರಿ ಪ್ರತಿಷ್ಠಿತ ಬ್ಯಾಲನ್​ ಡಿಓರ್​ ಪ್ರಶಸ್ತಿ ಗೆಲುವು
*ಎಂಟು ಬಾರಿ ಫಿಫಾದ ವರ್ಷದ ಆಟಗಾರ ಪ್ರಶಸ್ತಿ ಪುರಸ್ಕಾರ.
*ವೃತ್ತಿಪರ ಫುಟ್​ಬಾಲ್​ನಲ್ಲಿ ಇದುವರೆಗೆ ಒಟ್ಟು 46 ಪ್ರಶಸ್ತಿ ಗೆಲುವು.
*ಕ್ಯಾಲೆಂಡರ್​ ವರ್ಷವೊಂದರಲ್ಲಿ 91 ಗೋಲು ಸಿಡಿಸಿದ ದಾಖಲೆ.
*ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ 2ನೇ ಗರಿಷ್ಠ 125 ಗೋಲು.
*2021, 2024ರಲ್ಲಿ ಸತತ 2 ಬಾರಿ ಕೋಪಾ ಅಮೆರಿಕ ಪ್ರಶಸ್ತಿ ಜಯ.
*2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲುವು.
2022ರಲ್ಲಿ ವಿಶ್ವಕಪ್​ ಕನಸು ನನಸು
ಫಿಫಾ ವಿಶ್ವಕಪ್​ ಗೆಲ್ಲಬೇಕೆಂಬ ಮೆಸ್ಸಿ ಅವರ ಬಹುಕಾಲದ ಕನಸು 2022ರಲ್ಲಿ ಕತಾರ್​ನಲ್ಲಿ ನನಸಾಗಿತ್ತು. ಆ ಟೂರ್ನಿಯಲ್ಲಿ ಒಟ್ಟು 7 ಗೋಲು ಸಿಡಿಸಿದ್ದ ಮೆಸ್ಸಿ, ನಾಯಕರಾಗಿ 36 ವರ್ಷಗಳ ಬಳಿಕ ಅರ್ಜೆಂಟೀನಾಗೆ ವಿಶ್ವಕಪ್​ ಗೆದ್ದುಕೊಟ್ಟಿದ್ದರು. ಇದಕ್ಕೆ ಮುನ್ನ 2014ರ ವಿಶ್ವಕಪ್​ನಲ್ಲಿ ಅವರು ಫೈನಲ್​ನಲ್ಲಿ ಸೋತು ನಿರಾಸೆ ಅನುಭವಿಸಿದ್ದರು.