FIFA WorldCup: ಈಜಿಪ್ಟ್​ ಎದುರು ಆಘಾತದಿಂದ ಪಾರಾದ ಅರ್ಜೆಂಟೀನಾ  
ಫುಟ್ಬಾಲ್

FIFA WorldCup: ಈಜಿಪ್ಟ್​ ಎದುರು ಆಘಾತದಿಂದ ಪಾರಾದ ಅರ್ಜೆಂಟೀನಾ

ಅಟ್ಲಾಂಟಾ: ಹಾಲಿ ಚಾಂಪಿಯನ್​ ಅರ್ಜೆಂಟೀನಾ ತಂಡ 0-2 ಹಿನ್ನಡೆಯಿಂದ ಪುಟಿದೆದ್ದು, ಈಜಿಪ್ಟ್​ ತಂಡಕ್ಕೆ 3-2 ಅಂತರದಿಂದ ಸೋಲುಣಿಸುವ ಮೂಲಕ ಫಿಫಾ ವಿಶ್ವಕಪ್​ನಲ್ಲಿ (FIFA WorldCup) ಕ್ವಾರ್ಟರ್​ಫೈನಲ್​ಗೆ ಲಗ್ಗೆಯಿಟ್ಟಿದೆ. ಎಂಜೊ ಫೆರ್ನಾಂಡೆಜ್​ (90+2ನೇ ನಿಮಿಷ) ಇಂಜುರಿ ಸಮಯದಲ್ಲಿ ಅರ್ಜೆಂಟೀನಾಗೆ ಗೆಲುವಿನ ಗೋಲು ಒದಗಿಸಿ, ಸತತ 2ನೇ ಪ್ರಶಸ್ತಿ ಜಯಿಸುವ ಆಸೆ ಜೀವಂತವಿಟ್ಟರು.
ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಯಾಸಿರ್​ ಇಬ್ರಾಹಿಂ (15ನೇ ನಿಮಿಷ) ಮತ್ತು ಮೊಸ್ತಾ ಜಿಕೋ (67) ಈಜಿಪ್ಟ್​ಗೆ 2-0 ಮುನ್ನಡೆ ಒದಗಿಸಿದರು. 79ನೇ ನಿಮಿಷದಲ್ಲಿ ಕ್ರಿಶ್ಚಿಯನ್​ ರೊಮೆರೊ ಅರ್ಜೆಂಟೀನಾಗೆ ಮೊದಲ ಗೋಲು ತಂದುಕೊಟ್ಟರು. ಬೆನ್ನಲ್ಲೇ ನಾಯಕ ಹಾಗೂ ಸ್ಟಾರ್​ ಆಟಗಾರ ಲಿಯೋನೆಲ್​ ಮೆಸ್ಸಿ (83) ಅರ್ಜೆಂಟೀನಾಗೆ ಸಮಬಲದ ಗೋಲು ನೀಡಿದರು. ಈ ಮೂಲಕ ಮೆಸ್ಸಿ ವಿಶ್ವಕಪ್​ನಲ್ಲಿ ಗೋಲುಗಳ ದಾಖಲೆಯನ್ನು 21ಕ್ಕೆ ವಿಸ್ತರಿಸಿದರು. ಪಂದ್ಯ ಹೆಚ್ಚುವರಿ ಸಮಯಕ್ಕೆ ಹೋಗುವ ಲಕ್ಷಣ ಕಂಡಾಗ ಫೆರ್ನಾಂಡೆಜ್​ ಗೆಲುವಿನ ಗೋಲು ಸಿಡಿಸಿದರು.