ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ  
ಫುಟ್ಬಾಲ್

ನಿಮ್ಮ ಶ್ವಾಸಕೋಶಕ್ಕೆ ಇನ್ಶೂರೆನ್ಸ್​ ಇದೆಯಾ? ಲಿಯೋನೆಲ್ ಮೆಸ್ಸಿಗೆ ವಿಶೇಷ ಸ್ವಾಗತ ಕೋರಿದ ದೆಹಲಿ ಫ್ಯಾನ್ಸ್​! Lionel Messi

ಪ್ರಮುಖ ಮುಖ್ಯಾಂಶಗಳು

  • ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ
  • ಈಗಾಗಲೇ ಕೋಲ್ಕತ, ಹೈದರಾಬಾದ್​ ಹಾಗೂ ಮುಂಬೈಗೆ ಭೇಟಿ ನೀಡಿರುವ ಮೆಸ್ಸಿ
  • ಇಂದು ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ
  • ಮೆಸ್ಸಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಪರಿಸ್ಥಿತಿಯನ್ನು ಮೀಮ್ಸ್​ ಮೂಲಕ ವ್ಯಂಗ್ಯವಾಡಿದ ಫ್ಯಾನ್ಸ್​
ನವದೆಹಲಿ: ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ( Lionel Messi ) ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಕೋಲ್ಕತ, ಹೈದರಾಬಾದ್​ ಹಾಗೂ ಮುಂಬೈಗೆ ಭೇಟಿ ನೀಡಿರುವ ಮೆಸ್ಸಿ ಇಂದು ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಲಿದ್ದಾರೆ. ದೆಹಲಿ ಅಂದ ತಕ್ಷಣ ನಿಮ್ಮ ನೆನಪಿಗೆ ಒಂದು ಸಂಗತಿ ಬರಲೇಬೇಕು. ಅದೇನೆಂದರೆ, ಅಲ್ಲಿನ ವಾಯು ಗುಣಮಟ್ಟ.
ದೆಹಲಿಯಲ್ಲಿ ತೀವ್ರ ವಾಯು ಮಾಲಿನ್ಯದಿಂದ ಗಾಳಿಯ ಗುಣಮಟ್ಟ ತೀವ್ರ ಕುಸಿದಿದೆ. ಇದೇ ಸಂದರ್ಭದಲ್ಲಿ ಮೆಸ್ಸಿ ಅವರು ದೆಹಲಿಗೆ ಆಗಮಿಸುತ್ತಿರುವುದರಿಂದ ನೆಟ್ಟಿಗರು ಒಂದು ಪ್ರಶ್ನೆ ಕೇಳಿದ್ದಾರೆ. ಅದೇನೆಂದರೆ, ನಿಮ್ಮ ಶ್ವಾಸಕೋಶಕ್ಕೆ ಇನ್ಶೂರೆನ್ಸ್​ ಮಾಡಿಸಿದ್ದೀರಾ ಮೆಸ್ಸಿ? ಎಂದು ಕೇಳಿದ್ದಾರೆ. ಈ ಮೂಲಕ ದೆಹಲಿಯ ವಾಯುಮಾಲಿನ್ಯವನ್ನು ವ್ಯಂಗ್ಯವಾಡಿ, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಅಂದಹಾಗೆ, ಮೂರು ದಿನಗಳ ಪ್ರವಾಸದಲ್ಲಿ ಇಂದು ಮೆಸ್ಸಿಯವರ ಕೊನೆಯ ದಿನ. ಇಂದು ರಾಷ್ಟ್ರ ರಾಜಧಾನಿ ಹಾಗೂ ದೇಶದ ಆಡಳಿತದ ಕೇಂದ್ರ ಬಿಂದು ದೆಹಲಿಗೆ ಮೆಸ್ಸಿ ಆಗಮಿಲಿದ್ದಾರೆ. ಮೆಸ್ಸಿಯನ್ನು ಅದ್ಧೂರಿಯಾಗಿ ಸ್ವಾಗತಿಸಲು ನವದೆಹಲಿ ಸಜ್ಜಾಗಿದೆ. ಆದರೆ, ದಟ್ಟ ಮಂಜಿನಿಂದಾಗಿ ಮೆಸ್ಸಿಯನ್ನು ಸ್ಪಷ್ಟವಾಗಿ ಕಣ್ತುಂಬಿಕೊಳ್ಳುವುದು ಅಭಿಮಾನಿಗಳಿಗೆ ಸಾಧ್ಯವಾಗುತ್ತಾ ಅನ್ನೋದೆ ಚಿಂತೆಯಾಗಿದೆ. ಏಕೆಂದರೆ, ಸೋಮವಾರ ಬೆಳಗ್ಗೆ ರಾಜಧಾನಿಯನ್ನು ದಟ್ಟವಾದ ಚಳಿಗಾಲದ ಮಂಜು ಆವರಿಸಿದ್ದು, ಗೋಚರತೆ ಶೂನ್ಯಕ್ಕೆ ಇಳಿದಿದೆ. ಇದರ ಪರಿಣಾಮ ವಾಹನ ಸಂಚಾರಗಳು ನಿಧಾನಗೊಂಡಿದೆ.
ಭಾರತೀಯ ಹವಾಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿದ್ದು, ನಗರದಲ್ಲಿ ತಾಪಮಾನವು ಕನಿಷ್ಠ 8.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಬಗ್ಗೆ ಆರೆಂಜ್​ ಅಲರ್ಟ್​ ನೀಡಿದೆ. ಇದೇ ಸಮಯದಲ್ಲಿ ಮೆಸ್ಸಿಯ ದೆಹಲಿಗೆ ಆಗಮಿಸುತ್ತಿದ್ದಾರೆ. ರಾಜಧಾನಿಯಲ್ಲಿ ನೋಡಿದರೆ ಶೀತ ವಾತಾವರಣ, ಮಂಜು ಮತ್ತು ಉಸಿರಾಡಲು ಕಷ್ಟವಾಗುವಂತ ವಾಯುವಿನ ಗುಣಮಟ್ಟವಿದೆ. ಆದ್ದರಿಂದ ಹೊರಗೆ ಬರುವುದೇ ಒಂದು ಸಮಸ್ಯೆಯಾಗಿ ಪರಿಣಾಮಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಮೆಸ್ಸಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಜಿನಿಂದ ಕೂಡಿದ ರಸ್ತೆಗಳು, ಮುಖವಾಡ ಧರಿಸಿದ ಪ್ರಯಾಣಿಕರು ಮತ್ತು ಹೊಗೆಯಿಂದ ತುಂಬಿದ ಸ್ಕೈಲೈನ್‌ಗಳ ದೃಶ್ಯಗಳನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಮೆಸ್ಸಿಯ ಆಗಮನವನ್ನು ದೆಹಲಿ ಪರಿಸ್ಥಿತಿಗೆ ಹೋಲಿಕೆ ಮಾಡಿ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಸಾಕಷ್ಟು ಮೀಮ್ಸ್ ಹರಿಬಿಟ್ಟಿದ್ದಾರೆ.
"ಮೆಸ್ಸಿ ಆಪ್ಕಾ ದೆಹಲಿ ಮೇ ಸ್ವಾಗತ್ ಹೈ (ದೆಹಲಿಗೆ ಸ್ವಾಗತ ಮೆಸ್ಸಿ). ನಿಮ್ಮ ಎಡಗಾಲಿಗೆ 900 ಮಿಲಿಯನ್‌ ಡಾಲರ್​ ವಿಮೆ ಮಾಡಲಾಗಿದೆ ಎಂದು ನಾನು ಕೇಳಿದ್ದೇನೆ. ಅದೇ ರೀತಿ ನಿಮ್ಮ ಶ್ವಾಸಕೋಶಕ್ಕೂ ವಿಮೆ ಮಾಡಿಸಿದ್ದೀರಾ? ಎನ್ನುವ ಮೂಲಕ ನೆಟ್ಟಿಗನೊಬ್ಬ ಹಾಸ್ಯ ಚಟಾಕಿ ಹಾರಿಸಿದ್ದಾನೆ. ಹೀಗೆ ಅನೇಕ ಮೀಮ್ಸ್​ ಹರಿಬಿಟ್ಟು ದೆಹಲಿಯ ಪರಿಸ್ಥಿತಿಯನ್ನು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.
ಅಂದಹಾಗೆ, ಈ ತಿಂಗಳ 13 ರಂದು ಭಾರತಕ್ಕೆ ಆಗಮಿಸಿದ ಮೆಸ್ಸಿ, ಮೊದಲು ಪಶ್ಚಿಮ ಬಂಗಾಳದ ಕೋಲ್ಕತಗೆ ಭೇಟಿ ನೀಡಿ ಅಲ್ಲಿಂದ ನೇರವಾಗಿ ತೆಲಂಗಾಣಕ್ಕೆ ಬಂದರು. ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣದಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಂತರ ಶನಿವಾರ ಹೈದರಾಬಾದ್​ನಲ್ಲೇ ವಾಸ್ತವ್ಯ ಹೂಡಿದರು. ಭಾನುವಾರ ಮುಂಬೈಗೆ ಆಗಮಿಸಿದ ಲಿಯೋನೆಲ್ ಮೆಸ್ಸಿಗೆ ಭವ್ಯ ಸ್ವಾಗತ ನೀಡಲಾಯಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಎಲ್ಲರ ಗಮನ ಸೆಳೆದರು. ಮೆಸ್ಸಿಯಂತಹ ದಿಗ್ಗಜ ಆಟಗಾರನ ಆಗಮನದಿಂದಾಗಿ ಜನರು ಕ್ರೀಡಾಂಗಣಕ್ಕೆ ಜಮಾಯಿಸಿದರು. ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ನಾಯಕರು ಕೂಡ ಮೆಸ್ಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಂತೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾರತ ಪ್ರವಾಸದ ಅಂತಿಮ ಕಾರ್ಯಕ್ರಮಕ್ಕಾಗಿ ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ತೆರಳುವ ಮೊದಲು ಲಿಯೋನೆಲ್ ಮೆಸ್ಸಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸುವ ನಿರೀಕ್ಷೆಯಿದೆ, (ಏಜೆನ್ಸೀಸ್​).