FIFA WorldCup: ಅರ್ಜೆಂಟೀನಾಗೆ ಸೆಮೀಸ್ನಲ್ಲಿ ಆಂಗ್ಲರ ಸವಾಲು; ಹಾಲಿ ಚಾಂಪಿಯನ್ಸ್ ಗೆಲ್ಲಿಸಿದ ಅಲ್ವಾರೆಜ್ ಗೋಲು
ಕಾನ್ಸಾಸ್ ಸಿಟಿ: ರಾಷ್ಟ್ರೀಯ ತಂಡದಲ್ಲಿ ಲಿಯೋನೆಲ್ ಮೆಸ್ಸಿ ಉತ್ತರಾಧಿಕಾರಿ ಎಂದೇ ಬಣ್ಣಿಸಲ್ಪಟ್ಟಿರುವ ಜೂಲಿಯನ್ ಅಲ್ವಾರೆಜ್ (112ನೇ ನಿಮಿಷ) ಹೆಚ್ಚುವರಿ ಅವಧಿಯಲ್ಲಿ ದೂರದಿಂದ ಸಿಡಿಸಿದ ಆಕರ್ಷಕ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್ (FIFA WorldCup) 23ನೇ ಆವೃತ್ತಿಯಲ್ಲಿ ಸ್ವಿರ್ಜಲೆಂಡ್ ವಿರುದ್ಧ 3-1 ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ ಲಿಯೋನೆಲ್ ಮೆಸ್ಸಿ ಪಡೆ ಸತತ 2ನೇ ಬಾರಿ ಮತ್ತು ಒಟ್ಟಾರೆ 7ನೇ ಬಾರಿ ಅಂತಿಮ 4ರ ಘಟ್ಟಕ್ಕೇರಿದೆ. ಸ್ವಿಸ್ ತಂಡ ಮೊಟ್ಟಮೊದಲ ಬಾರಿ ಸೆಮಿಫೈನಲ್ಗೇರುವ ಕನಸು ಭಗ್ನಗೊಂಡಿತು. ಅರ್ಜೆಂಟೀನಾ ತಂಡ ಉಪಾಂತ್ಯದಲ್ಲಿ ಇಂಗ್ಲೆಂಡ್ ತಂಡದ ಸವಾಲು ಎದುರಿಸಲಿದೆ.
ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಬೆಳಗ್ಗೆ ನಡೆದ ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಅವರ ಕಾರ್ನರ್ ಕಿಕ್ನಲ್ಲಿ ಲೆಕ್ಸಿಸ್ ಮ್ಯಾಕ್ಅಲಿಸ್ಟರ್ ಹೆಡರ್ ಮೂಲಕ ಅರ್ಜೆಂಟೀನಾಗೆ ಮುನ್ನಡೆ ಒದಗಿಸಿದರು. ಆದರೆ 67ನೇ ನಿಮಿಷದಲ್ಲಿ ಡಾನ್ ಎನ್ಡೋಯೆ ಬಾರಿಸಿದ ಗೋಲಿನಿಂದ ಸ್ವಿರ್ಜಲೆಂಡ್ ತಂಡ ಪಂದ್ಯವನ್ನು ಸಮಬಲಕ್ಕೆ ತಂದಿತು. ಇದರಿಂದ ಹೆಚ್ಚುವರಿ ನಿಮಿಷಕ್ಕೆ ವಿಸ್ತರಿಸಲ್ಪಟ್ಟ ಪಂದ್ಯದಲ್ಲಿ 26 ವರ್ಷದ ಜೂಲಿಯನ್ ಅಲ್ವಾರೆಜ್ 112ನೇ ನಿಮಿಷದಲ್ಲಿ ಗೋಲುಪೆಟ್ಟಿಗೆಯ ಟಾಪ್ ಕಾರ್ನರ್ನಿಂದ ಚೆಂಡನ್ನು ಒಳನುಗ್ಗಿಸಿ ಗೆಲುವಿನ ಗೋಲು ಬಾರಿಸಿದರು. ಬಳಿಕ ಹೆಚ್ಚುವರಿ ಅವಧಿಯ ಇಂಜುರಿ ಸಮಯದಲ್ಲಿ ಲೌಟಾರೊ ಮಾರ್ಟಿನೆಜ್ (120+1) ಅರ್ಜೆಂಟೀನಾದ ಗೆಲುವಿನ ಅಂತರ ಹಿಗ್ಗಿಸಿದರು. ಇದರೊಂದಿಗೆ ವಿಶ್ವಕಪ್ನಲ್ಲಿ ಲಿಯೋನೆಲ್ ಸ್ಕಾಲೋನಿ ಮಾರ್ಗದರ್ಶನದ ಅರ್ಜೆಂಟೀನಾದ ಗೆಲುವಿನ ಓಟ ಸತತ 12ನೇ ಪಂದ್ಯಕ್ಕೆ ವಿಸ್ತರಿಸಿದ್ದು, ಸತತ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ನಿರೀೆಯೂ ಹೆಚ್ಚಾಗಿದೆ.
ಆದರೆ ಪಂದ್ಯದ ದ್ವೀತಿಯಾರ್ಧದಲ್ಲಿ ರೆಫ್ರಿ, ಅರ್ಜೆಂಟೀನಾ ಪರ ಕಾರ್ಯನಿರ್ವಹಿಸಿದರು ಎಂಬ ಟೀಕೆಗಳು ಮತ್ತೊಮ್ಮೆ ಕೇಳಿಬಂದಿವೆ. ಈಜಿಪ್ಟ್ ವಿರುದ್ಧದ 16ರ ಘಟ್ಟದ ಪಂದ್ಯದಲ್ಲೂ ರೆಫ್ರಿ, ಅರ್ಜೆಂಟೀನಾ ಪರವಾಗಿದ್ದರು ಎಂಬ ದೂರು ಬಂದಿತ್ತು. ಪಂದ್ಯದ 72ನೇ ನಿಮಿಷದ ಬಳಿಕ 10 ಆಟಗಾರರೊಂದಿಗೆ ಆಡಿದ ನಡುವೆಯೂ ದಿಟ್ಟ ಹೋರಾಟ ತೋರಿದ ಸ್ವಿಸ್ ತಂಡ ಪಂದ್ಯವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸುವಲ್ಲಿ ಯಶಸ್ವಿಯಾಗಿತ್ತು. ಸ್ವಿಸ್ ತಂಡ ಹಿಂದಿನ 5 ಪಂದ್ಯಗಳಲ್ಲಿ 3 ಗೋಲು ಮಾತ್ರ ಬಿಟ್ಟುಕೊಟ್ಟಿತ್ತು.
*ಅಲೆಕ್ಸಿಸ್ ಮ್ಯಾಕ್ಅಲಿಸ್ಟರ್ (10)
*ಜೂಲಿಯನ್ ಅಲ್ವಾರೆಜ್ (112)
*ಲೌಟಾರೊ ಮಾರ್ಟಿನೆಜ್ (120+1)
ಸ್ವಿರ್ಜಲೆಂಡ್ ತಂಡ ಸಮಬಲದ ಗೋಲು ಸಿಡಿಸಿದ 5 ನಿಮಿಷಗಳಲ್ಲೇ ಅರ್ಜೆಂಟೀನಾದ ಲಿಯಾನಾರ್ಡೊ ಪೆರೆಡೆಸ್ ಟ್ಯಾಕಲ್ಗೆ ರೆಫ್ರಿ ಹಳದಿ ಕಾರ್ಡ್ ತೋರಿಸಿದರು. ಆದರೆ ವಿಡಿಯೋ ಪರಾಮರ್ಶೆಯ ಬಳಿಕ, ಪೆರೆಡೆಸ್ ಸ್ಪರ್ಶಿಸುವ ಮುನ್ನವೇ ಸ್ವಿಸ್ನ ಬ್ರಿಲ್ ಎಂಬೋಲೋ ನೆಲಕ್ಕೆ ಬಿದ್ದು ನಾಟಕವಾಡಿದ್ದರು ಎಂದು ಅವರಿಗೆ ಪಂದ್ಯದ 2ನೇ ಹಳದಿ ಕಾರ್ಡ್ ನೀಡಲಾಯಿತು. ಇದರೊಂದಿಗೆ ಅದು ಕೆಂಪು ಕಾರ್ಡ್ ಆಗಿ ಬದಲಾಯಿತು ಮತ್ತು ಬಳಿಕ ಸ್ವಿರ್ಜಲೆಂಡ್ ತಂಡ 10 ಆಟಗಾರರೊಂದಿಎ ಪಂದ್ಯ ಮುಂದುವರಿಸಿತು. ಈ ತೀರ್ಪು ನೀಡುವ ವೇಳೆ ರೆಫ್ರಿ ಅರ್ಜೆಂಟೀನಾ ಪರ ಪಕ್ಷಪಾತ ಮಾಡಿದ್ದಾರೆ ಎಂದು ಸ್ವಿಸ್ ಆರೋಪಿಸಿದೆ.